18 June 2020

ಬಕಾಸುರವಧೆ ಕಾವ್ಯವಾಚನಕ್ಕೆ(ಗಮಕ) ಪ್ರತಿಕ್ರಿಯೆ  Gamaka Kaavyavaachana


ಕಲಿಯುಗಾಬ್ಧ ೫೧೨೨ - ಜೇಷ್ಠ ಮಾಸ ಕೃಷ್ಣ ತೃತಿಯ (ಜುಲೈ ೭ನೇ ದಿನ ೨೦೨೦) ನಾವು ಮಾಡಿದ ಗಮಕಕ್ಕೆ ಬಹಳ ಪ್ರತಿಕ್ರಿಯೆಬಂದಿದೆ. ಇದು ಗಮಕ ಕಲಿಯುವವರಿಗೆ ಮತ್ತು ಅಧ್ಯಯನ ಮಾಡುವವರಿಗೆ ಬಹಳ ಅನುಕೂಲ ಹಾಗಾಗಿ ಇಲ್ಲಿ ಹಾಕಿದ್ದೇನೆ.

ಮೊದಲು ಕಾರ್ಯಕ್ರಮದ ಬಗ್ಗೆ. ನನಗೆ ಹಾಡಲು ಕಾವ್ಯವಾಚನ ಮಾಡಲು ಕಲಿಸಿದ್ದು ನನ್ನ ಅಮ್ಮ ಗೀತಾ ಕಟ್ಟಿನಕೆರೆ. ಅಮ್ಮನ ಧಾಟಿ ಶೈಲಿ ಎಲ್ಲೆಡೆ ಇದೆ. ಇದರಲ್ಲಿ ಸುಮಾರು ೧೪ ರಾಗದ ಛಾಯೆ ಇದೆ. ಇದರಲ್ಲಿ ಸುಮಾರು ೧೦ ನಾನು ಬಳಸಿದ್ದು ಸಂಯೋಜಿಸಿದ್ದು ಉಳಿದವು ಹಿರಿಯರಾದ ಗಮಕಿ ಕೆರೆಕೊಪ್ಪದ ನರಹರಿ ಶರ್ಮ ಮತ್ತು ಹೊಸಬಾಳೆ ಸೀತಾರಾಮರಾಯರಿಂದ ಕೇಳಿದ್ದನ್ನು ಅನ್ವಯಿಸಿದ್ದೇನೆ. ಕೇಳಿ ನೋಡಿ. ಕೆಲವೆಡೆ ಮಿಶ್ರವಾಗಿದೆ. ಆದರೆ ಸಾಹಿತ್ಯದಲ್ಲಿನ ಭಾವನೆಗಳು ಚೆನ್ನಾಗಿ ಬಂದಿದೆ ಎಂದು ಬಹಳ ಜನ ಹೇಳಿದ್ದಾರೆ. 


ಪದ್ಯಗಳು ಇಲ್ಲಿ ಲಭ್ಯ: ನೋಡಿ

ಗಮಕದಲ್ಲಿ ಮುಖ್ಯವಾಗಿ ಎರಡು ವಿಧ ಇದೆ ನಾನು ಕಂಡುಕೊಂಡಿದ್ದೇನೆ. ಇವು ನನ್ನದೇ ವಿಭಾಗ.
೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
೩) ಇನ್ನು ಮಂಗಳೂರಿನ ಕ್ರಮವೂ ಸ್ವಲ್ಪ ಭಿನ್ನ ಇದೆ - ಅದು ಸಾಗರ ಮತ್ತು ಬೆಂಗಳೂರಿನ ಮಧ್ಯ ಎನ್ನಬಹುದೇನೋ ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ

೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
ಇದು ಬಹಳ ಪ್ರಚಲಿತ ಇರುವ ಶೈಲಿ. ಇದರಲ್ಲಿ ಕರ್ನಾಟಕಿ ಸಂಗೀತದ ಕೃತಿಗಳಿಗೆ ಬಳಸಿದ ರಾಗವನ್ನೇ ಅದೇ ಶೈಲಿಯಲ್ಲೇ ಕನ್ನಡ ಕಾವ್ಯಗಳಿಗೆ ಅನ್ವಯಿಸಿ ಓದುವುದು ಹೆಚ್ಚು. ಅಂದರೆ ಸ್ವರಗಳ ಬಳಕೆ ಛಂದಸ್ಸಿಗೆ ಹೊಂದಿಕೊಂಡು ಹೋಗುವುದಿಲ್ಲ. ಸಂಗೀತದ ಕೃತಿಗಳಂತೆ ಸಾಗುತ್ತದೆ. ಇಲ್ಲಿ ಭಾವನೆಗಳು ರಾಗ ಎಷ್ಟು ತೋರುತ್ತದೋ ಅಷ್ಟೆ. ಉದ್ಘಾರ ಸಂದರ್ಭಕ್ಕೆ ಹೊಂದುವ ಆಡುಮಾತಿನ ಧಾಟಿಗಳ ಬಳಕೆ ಇಲ್ಲಿ ಇಲ್ಲ. ಇದು ಕರ್ನಾಟಕಿ ಶೈಲಿಯವರಿಗೆ ಇಷ್ಟವಾದರೆ - ಛಂದೋಭಂಗ ವಾಯಿತು ಅಥವಾ ಲಯ ಹೊಂದದು ಎಂದು ಕೊರಗು ಛಂದಸ್ಸಿನ ಅರಿವು ಇರುವವರಿಗೆ.  ಇನ್ನು ರಾಗದಲ್ಲಿ ಸ್ವರದ ಬಳಕೆಯ ಮೇಲೆ ಭಾವ ವ್ಯಕ್ತವಾಗುತ್ತದೆಯೆ ಹೊರತು ರಾಗಕ್ಕೂ ಭಾವಕ್ಕೂ ನೇರ ಸಂಬಂಧ ಇಲ್ಲ. ಇದು ಶಾಸ್ತ್ರ, ಅನುಭವವೂ ಹಾಗೆಯೇ ಇದೆ ಅರ್ಥವಾಗುವವರಿಗೆ.  ಶಾಸ್ತ್ರೀಯ ಎಂದು ಅಭ್ಯಾಸ ಮಾಡಿದವರಿಗೆ ಒಂದೋಂದು ರಾಗ ಒಂದೊಂದು ಭಾವಕ್ಕೆ ಎಂದು ತಪ್ಪಾಗಿ ಕಲಿಸಲಾಗುತ್ತದೆ. ಸ್ವರದ ಮತ್ತು ಗಮಕದ ಬಳಕೆಯ ಮೇಲೆ ಭಾವ ವ್ಯಕ್ತವಾಗುವುದಕ್ಕಾಗಿ ಬರಿ ಕರ್ನಾಟಕಿ ಸಂಗೀತ ಪದ್ಧತಿ ಬಳಸುವಾಗ ಕಾವ್ಯದ ಭಾವ ಸರಿ ವ್ಯಕ್ತವಾಗುವುದಿಲ್ಲ ಎಂದು ನನ್ನಂತವರ ಅಭಿಪ್ರಾಯ. ಇದರ ರಾಗ ಶುದ್ಧತೆ ಗಮಕ ಬಹಳ ಉತ್ಕೃಷ್ಟವಾದ್ದು.

೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
ಇದರಲ್ಲಿ ಉದ್ಘಾರ ಭಾವದ ಅಭಿವ್ಯಕ್ತಿ ಮತ್ತು ಛಂದಸ್ಸು ಮುಖ್ಯ. ಅಂದರೆ
ಭಾಮಿನಿಯ ತ್ರಿವುಡೆ ತಾಳದಲಯ - ತಕಿಟತಕದಿಮಿ ಮತ್ತು ವಾರ್ಧಿಕದ ಮಿಶ್ರ ಝಂಪೆಯಲಯ - ತಕಿಟತಕ. ಇನ್ನು ಕಂದ ದ್ವಿಪದಿ ಸಾಂಗತ್ಯದ ಲಯಗಳು ಬೇರೆ. ಇದು ಯಕ್ಷಗಾನದ ಕ್ರಮ ಎಂದು ಕೆಲವರು ತಪ್ಪುತಿಳಿದಿದ್ದಾರೆ ಆದರೆ ಛಂದೋಲಯ ಯಕ್ಷಗಾನದಲ್ಲಿಯೂ ಹೀಗೆಯೇ ಬಳಕೆ ಎನ್ನುವುದು ನಿಜ. ಇಲ್ಲಿ ಓದುವಲ್ಲಿ ಭಾವಕ್ಕೆ ಹೊಂದುವ ಗಮಕ ರಾಗ ಎಲ್ಲದರಬಳಕೆ ಇದೆ. ಕರ್ನಾಟಕಿಪದ್ಧತಿಯ ರಾಗವೇ ಬಳಕೆಯಾಗುತ್ತದೆ. ಆದರೆ ಸಾಹಿತ್ಯ ಛಂದಸ್ಸು ಭಾವನೆ ಮುಖ್ಯ. ಛಂದೋಲಯ ಮುರಿಯುವುದು ತಪ್ಪು ಎನ್ನುವುದು ಈ ಪಾಳಯದ ನಂಬಿಕೆ ಅದು ಸರಿಯೂ ಹೌದು. ಇಲ್ಲದಿದ್ದರೆ ಗಮಕಕ್ಕೂ ವಿತಾಳ ಸಂಗೀತಕ್ಕೂ ಏನೂ ವ್ಯತ್ಯಾಸ ಇಲ್ಲವಾಗುತ್ತದೆ. ಮತ್ತೂ ಸಾಹಿತ್ಯಕ್ಕೆ ಹೊಂದದ ಲಯ ಬಳಸುವುದು ತಪ್ಪೂ ಅನನುಭವವೂ ಆಗುತ್ತದೆ. ಕರ್ನಾಟಕಿ ಸಂಗೀತ ಬಂದರೆ ಎಲ್ಲವೂ ಬಂತು ಎನ್ನುವ ತಪ್ಪು ತಿಳುವಳಿಕೆ ಬಹಳ ಜನರಲ್ಲಿದೆ. ದಾಸರೂ ಅದನ್ನು ಒಪ್ಪರು. ಭದ್ರಗಿರಿ ಅಚ್ಯುತದಾಸರು ಅದನ್ನು ಅನೇಕಕಡೆ ಹೇಳೀಯೂ ಇದ್ದಾರೆ. ದಾಸರನ್ನೇ ಕೀಳಾಗಿನೋಡುವ ಸಂಗೀತಗಾರರನ್ನು ನಾನು ಕಂಡಿದ್ದೇನೆ! ಅದಿರಲಿ, ಗಮಕವು ಸಾಹಿತ್ಯವನ್ನು ಓದುವ ಕಲೆ. ಸಾಹಿತ್ಯವನ್ನು ಓದುವುದು ಸರಿ ಬರಬೇಕು. ಶುದ್ಧವಾಗಿ ಓದುವ ಸಂಧಿ ಸಮಾಸ ಬಿಡಿಸುವ ಕೆಲಸ ಬರಬೇಕು.

ವಿಮರ್ಶೆ: ರಾಗು ಕಟ್ಟಿನಕೆರೆ
ಭಾವ ಚೆನ್ನಾಗಿ ಮೂಡಿಬಂದಿದೆ. ಧ್ವನಿ ಇನ್ನೂ ಮಧುರವಾಗಿ ನಯವಾಗಿ ಬರಬೇಕು. ರಾಗಗಳು ಮಿಶ್ರ ಆಗಿದೆ ಅದು ಸರಿಯಾಗಬೇಕು. ಉಚ್ಛಾರ ಚೆನ್ನಾಗಿದೆ. ಸಾಮಾನ್ಯ ವಾಚಕರಿಗೆ ಹೋಲಿಸಿದರೆ ಉತ್ತಮವೆ. ಆದರೆ ಸ್ಪಷ್ಟತೆ ಇನ್ನೂ ಸಾಲದು. 

ವಿಮರ್ಶೆ: ರಾಘವ ನಂಬಿಯಾರ್ - ಶ್ರೇಷ್ಟ ಯಕ್ಷಗಾನದ ವಿದ್ವಾಂಸರು  (ನನ್ನ ಶಬ್ಧಗಳಲ್ಲಿ)
ಯಶಸ್ವಿಯಾಗಿದೆ. ವಾಚನ ಸ್ಪಷ್ಟವಾಗಿದೆ. ಸಂಧಿ ವಿಭಜನೆ ಮಾಡಿದರೆ ಛಂದಸ್ಸು ಭಂಗವಾಗುತ್ತದೆ - ವಿಭಜನೆ ಮಾಡದೆ ಅರ್ಥ ವಿಭಜನೆಯಾಗುವಂತೆ ಓದಬೇಕು. ವಾಕ್ಯ ಅರ್ಥ ಸರಿಹೊಂದುವಲ್ಲಿ ನಿಲ್ಲಿಸಿ ಸರಿಹೊಂದಿಸಿ ಓದಬೇಕು.

ವಿಮರ್ಶೆ: Y ದತ್ತಾತ್ರೇಯ
ರಾಗಗಳನ್ನು ಭಾವನೆಗೆ ಸಾಹಿತ್ಯಕ್ಕೆ ಸರಿಹೊಂದುವಂತೆ ಅಳವಡಿಸಿದ್ದೀರಿ.  ವ್ಯಾಖ್ಯಾನ ಚೆನ್ನಾಗಿ ಬಂದಿದೆ.

ಇನ್ನು ಅನೇಕ ಜನ ಮೆಚ್ಚಿದ್ದಾರೆ. ಅದರಲ್ಲಿ ನೂರಾರು ಕಾವ್ಯವಾಚನ ಕೇಳಿದವರು ಇದನ್ನು ೧೦ ಉತ್ತಮ ಪ್ರದರ್ಶನಗಳಲ್ಲಿ ಒಂದು ಎಂದು ಗುರುತಿಸಿದ್ದಾರೆ. ಇದು ದೊಡ್ಡ ಶ್ಲಾಘನೆ. ಇನ್ನು ಅಭ್ಯಾಸಮಾಡಲು ತಿದ್ದಿಕೊಳ್ಳಲು ಒಳ್ಳೆಯ ಹುರುಪು ಕೊಡುವಂತಾದ್ದು ಎಂದು ಗಣಿಸುತ್ತೇನೆ.





08 June 2020

ಎರಡು ತಾಳಮದ್ದಲೆ ಮತ್ತು ಒಂದು ಕಾವ್ಯವಾಚನ

ನಮ್ಮ ಯಕ್ಷಮಿತ್ರ ಟೊರಾಂಟೋ ವತಿಯಿಂದ ಎರಡು ತಾಳಮದ್ದಲೆ ಮತ್ತು ಶ್ರೀ ಶ್ರೀಕಾಂತ್ ಅಪೇಕ್ಷೆಯಮೇರೆಗೆ ಕೆಎಸ್ಟಿಗಾಗಿ ಒಂದು ಗಮಕ-ಕಾವ್ಯವಾಚನ ಮಾಡಿದ್ದೇವೆ ಅದರ ವೀಡಿಯೋ ನೋಡಿ.

ನನ್ನ ಪಾತ್ರದಲ್ಲಿ ಹಲವು ಹೊಸತು ಪ್ರಯತ್ನ ಮಾಡಿದ್ದೇನೆ. ಅವು ಹೀಗಿವೆ:

ವಾಲಿವಧೆ ತಾಳಮದ್ದಲೆ
೧. ರಾಮ ವಂಶದ ಪ್ರತೀಕವಾಗಿ ಮಾತಾಡುವುದು
ಸನ್ನಿವೆಶಗಳನ್ನೇ ಬಳಸಿ ಹಿಂದಿನ ಕಥೆ ಅನ್ವಯಮಾಡಬೇಕು ಎನ್ನುವ ಶ್ರೀ ಪ್ರಭಾಕರ ಜೋಷಿಯವರ ಸಲಹೆಯನ್ನು ಇನ್ನೂ ಅನೇಕ ಸಲಹೆ ಮತ್ತು ತಂತ್ರ ಬಳಸಿಕೊಂಡಿದ್ದೇನೆ. ಉದ್ದೇಶಪೂರ್ವಕವಾಗಿ ಪಂಚಮ ಶ್ರುತಿಯಲ್ಲಿ ಮಾತಾಡಿ ಪ್ರಾಣ ಕಳೆದುಕೊಳ್ಳದೇ ಇನ್ನೂ ಇದ್ದೇನೆ. ನಾನು ಹಾಡುವವನಾದರೂ ಕಂಠಕ್ಕೆ ಕಷ್ಟ ಸ್ವಾಮಿ.



ಕೃಷ್ಣಸಂಧಾನ ತಾಳಮದ್ದಲೆ
೧. ಕೌರವ ಭಾರತದ ರಾಜಕೀಯದ ಹಿನ್ನೆಲೆಯಲ್ಲಿ ಗುರುತಿಸಿಕೊಂಡು ಮಾತಾಡುವುದು
೨. ಪಾಂಡವರಲ್ಲಿ ನ್ಯಾಯನೀತಿ ಧರ್ಮ ಎಂಬುದು ಒಂದು ದೌರ್ಬಲ್ಯ ಎನ್ನುವಷ್ಟು ಇದೆ - ರಾಜಕೀಯಕ್ಕೆ ಅದು ಸಲ್ಲ ಎಂಬ ದ್ವನಿಯಲ್ಲಿ ಪ್ರಾಮಾಣಿಕವಾಗಿ ಅವರನ್ನು ದೂರ ಇಟ್ಟು ಸಿಂಹಾಸನ ರಕ್ಷಣೆ ಮಾಡುತ್ತಿದ್ದೇನೆ ಎಂಬ ಧೋರಣೆ.
೩. ಪಾಂಡವರ ಹಿಂದೆ ಸೋಗಿದೆ. ಪ್ರಚಾರಪ್ರಿಯರು ಎನ್ನುವ ಅರ್ಥಗ್ರಹಿಕೆ



ಕಾವ್ಯವಾಚನ - ಗಮಕ
ಇದರಲ್ಲಿ ಸುಮಾರು ೧೪ ರಾಗದ ಛಾಯೆ ಇದೆ. ಇದರಲ್ಲಿ ಸುಮಾರು ೧೦ ನಾನು ಬಳಸಿದ್ದು ಉಳಿದವು ಹಿರಿಯರಾದ ಗಮಕಿ ಕೆರೆಕೊಪ್ಪದ ನರಹರಿ ಶರ್ಮ ಮತ್ತು ಹೊಸಬಾಳೆ ಸೀತಾರಾಮರಾಯರಿಂದ ಕೇಳಿದ್ದನ್ನು ಅನ್ವಯಿಸಿದ್ದೇನೆ. ನಾನು ಕಲಿತಿದ್ದು ಹೇಳಬೇಕು. ರಾಗವನ್ನು ಬಳಸಿ ಸಂಯೋಜನೆ ಮಾಡುವುದರಲ್ಲಿ ಅನೇಕವಿಧ ಇದೆ. ಇರುವ ಸಂಯೋಜನೆಯನ್ನೇ ಬೇರೆಯ ಸಾಹಿತ್ಯಕ್ಕೆ ಬಳಸುವುದು. ಹೆಚ್ಚಿನವರು ಮಾಡುವುದು ಇದು. ಇದನ್ನು ವಿತಾಳಕ್ಕೆ ಮಾಡಿದಾಗ ಅಲ್ಲಿನ ಲಯಬಂದು ಸಾಹಿತ್ಯಕ್ಕೆ ಸರಿಕೂರದೇ ಹೋಗಬಹುದು. ಇನ್ನು ಛಂದೋಭಂಗವಾಗಲೂ ಬಹುದು (ಕೆಲವೆಡೆ ಆಗಿದೆ- ಅನನುಭವ). ಅಂದರೆ ಭಾಮಿನಿಯನ್ನು ವಿತಾಳವಾಗಿ ಓದುವುದಾದರೂ ತ್ರಿಪುಟಕ್ಕೆ ಹೋಲಬೇಕು. ಹೀಗೆ ಛಂದೋಭಂಗವೂ ಆಗದೇ ಬೇರೆ ಸಂಯೋಜನೆಯ ಲಯವೂ ಸ್ವರವೂ ನಕಲಾಗದೇ ಸಾಹಿತ್ಯ ಅರ್ಥ ಎಲ್ಲ ಸರಿ ಇದ್ದು ಸ್ವತಂತ್ರವಾಗಿ ಭಾವಕ್ಕೆ ಹೊಂದುವಹಾಗೆ ಹಾಡುವವರು ಬಹಳ ಕಡಿಮೆ. ಶಾಸ್ತ್ರೀಯ ಎಂದು ಹಾಡುವವರೂ ಎಡವುವುದು ಅಲ್ಲೇ. ಇಲ್ಲಿ ಪ್ರಯತ್ನ ಮಾಡಿದ್ದೇನೆ ಒಂದಿಷ್ಟುಕಡೆ ಅದು ಸರಿಯಾಗಿದೆ ಎಂದು ನಂಬಿಕೆ. ಕೇಳಿ ನೋಡಿ. ಅಲ್ಲಲ್ಲಿ ರಾಗದ ಅಭ್ಯಾಸದ ಅಭಾವ ಕಾಣುತ್ತದೆ. ಕೆಲವೆಡೆ ಮಿಶ್ರವಾಗಿದೆ. ಆಡ್ಜಸ್ಟ್  ಮಾಡಿಕೊಳ್ಳಿ.


ಪದ್ಯಗಳು ಇಲ್ಲಿ ಲಭ್ಯ: ನೋಡಿ



25 May 2020

ಕವಿಸಮಯದ ವಡೆ!

ಕವಿಸಮಯದ ವಡೆ!

ಕವಿ ಮುಸುಕಿ ಕಪ್ಪಾದ ಮೂತಿ-ಗಳಿಗೆ
ನಿಟ್ಟುಸಿರು ಏರುಬ್ಬು ಕಳೆದು ಒರಗಿ ಕಡೆಗೆ
ಚಾ ತರುವ ಚಾರುಲತಾಂಗಿಯಲ್ಲಿ ಆ
ಕಾಫಿ ಕೊಡುವ ಕೋಮಲಾಂಗಿಯಲ್ಲಿ ಕೇಳುವುದು
ಕೊಡೆ, ಕವಿಸಮಯದ ವಡೆ!

13 May 2020

ಶೇಣಿಯವರ ಮಾತಿಗೊಂದು ಉತ್ತರ - ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು





Ragu Kattinakere ಈ ನಂಬಿಕೆಯ ವ್ಯವಹಾರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮುಖ್ಯ ಸ್ಥಾನ ಇಲ್ಲ. ಬರಿ ನಂಬಿಕೆಯನ್ನೇ ಆಧಾರವಗಿಟ್ಟು ನಮ್ಮ ಪರಂಪರೆ ಇಲ್ಲ. ಪ್ರಮಾಣಾಧಾರಿತ ತರ್ಕ ಮತ್ತು ಅನುಭಾವ ಮಾತ್ರ ಮುಖ್ಯ. ಬುದ್ಧಿ ಮತ್ತು ಶ್ರದ್ಧೆ ಎರಡೂ ಕಲಿಯಲು ಅತ್ಯವಶ್ಯಕ.  ಆದರೆ ನಂಬಿಕೆ ಮತ್ತು ಶ್ರದ್ಧೆಗೂ ಸ್ಥಾನ ಕಲ್ಪಿಸಿರುವುದು ವಿದ್ಯೆ ಕಲಿಯಲು ಮತ್ತು ಅಸಹಿಷ್ಣುತೆ ಮತ್ತು ದ್ವೇಷವನ್ನು ತಡೆಯಲು. ಬೇರೆಯವರ ನಂಬಿಕೆಯನ್ನು ಅಪಹಾಸ್ಯ ಮಾಡುವುದು ಭಾರತೀಯರ ಲೆಕ್ಕದಲ್ಲಿ ಬುದ್ಧಿಯ ಕೆಲಸ ಅಲ್ಲ. ಪ್ರಾಮಾಣಿಕ ವಾದದಮೂಲಕ ಬುದ್ಧಿಯನ್ನು ಉಪಯೋಗಿಸಿ ಯಾವುದೋ ಒಂದು ನಂಬಿಕೆ ತಪ್ಪು ಎಂದು ಸಾಧಿಸಬಹುದು ತೋರಿಸಬಹುದು ತರ್ಕಮಾಡಬಹುದು ಅಷ್ಟೆ. ಶಂಕರರಂತವರು ಮಾಡಿದ್ದು ಅದು. ತಾಳಮದ್ದಲೆಯದು ಪಾತ್ರ ಸಮರ್ಥನೆ ಮಾಡುವ ಸುಳ್ಳುವಾದ.  ಇದು ನಮ್ಮ ಆಚಾರ್ಯರು ಮಾಡಿದ ತರ್ಕಬದ್ಧವಾದ ವಾದಗಳಲ್ಲ. ತಾಳಮದ್ದಲೆಯ ವಾದಗಳಲ್ಲಿ  ಅನೇಕ ತಪ್ಪುಗಳಿರುತ್ತವೆ.  ಇಲ್ಲಿ ಶೇಣಿ ಅವರ ಎರಡನೇ ವಾಖ್ಯ ತಪ್ಪು. ಅದನ್ನು ಅವರು ಯಾವುದೋ ನೆಲೆಯಲ್ಲಿ ಹೇಳಿರಬಹುದು ಆದರೆ "ನಂಬುಗೆಯಲ್ಲಿ ಸಂಶೋಧನೆಗೆ ನೆಲೆಯಿಲ್ಲ" ಎಂಬ ಮಾತಿಗೆ ಶಾಸ್ತ್ರದಲ್ಲಿ ಆಧಾರ ಸಿಕ್ಕದು ಎಂದು ನನ್ನ ತಿಳುವಳಿಕೆ. ಮೊದಲು ನಂಬಿಕೆ ನಂತರ ಸಂಶೋಧನೆ - ಶದ್ಧಾವಾನ್ ಲಬತೆ ಜ್ಞಾನಂ... ಇತ್ಯಾದಿ.  ಹಾಗಾಗಿ ಈ ತಾಳಮದ್ದಲೆ ವಾದಗಳನ್ನೇ ನಿಜ ಎಂದು ನಂಬಲಾಗದು. ಒರೆಗೆ ಹಚ್ಚಿ ನೋಡಬೇಕು.

ಈ ನಂಬಿಕೆ ಬುದ್ದಿ ಎನ್ನುವ ದ್ವಂದ್ವಕ್ಕೆ ಸಿಕ್ಕಿ ಬೀಳುವವರು ಸಾಧಾರಣ ಅಬ್ರಹಾಮಿಕರ ಯೋಚನಾ ಪದ್ಧತಿಯನ್ನು ತಮ್ಮದಾಗಿಸಿಕೊಂಡವರು. ಅವರು ನಂಬಿಕೆಯ ಒಲವನ್ನೂ ಏತೇಯಿಸ್ಟ್ ಗಳ ಅಬ್ರಹಾಮೀ ವಿರೋಧಿ ಭಾವಗಳನ್ನು ಅಳವಡಿಸಿಕೊಂಡು ಇಂಗ್ಲಿಶ್ ನಲ್ಲಿ ಲಭ್ಯ ಇರುವ ಸಾಹಿತ್ಯ ಓದಿ ಅದನ್ನು ಭಾರತೀಯ ಸಂಪ್ರದಾಯಗಳಿಗೆ ತಪ್ಪಿ ಅಳವಡಿಸಲು ಹೋಗುತ್ತಾರೆ. ಈ ದ್ವಂದ್ವ ಔಟ್ಡೇಟೆಡ್! ತಾವು ರ್ಯಾಶನಿಷ್ಟುಗಳು ಎಂದು ಮೆರೆಯುವ ಉದ್ಧೇಶ. ಅದು ಅಪ್ರಸ್ತುತ ಎಂಬುದು ಅರ್ಥವಾಗಲಿ ಎಂದು ಇಲ್ಲಿ ನಾನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು.
ರಾಗು ಕಟ್ಟಿನಕೆರೆ



Radhakrishna Kalchar Vitla  ಶೇಣಿಯವರ ಮಾತನ್ನು ಬೇರೊಂದು ರೀತಿಯಲ್ಲೂ ಗ್ರಹಿಸಬಹುದು ಅನಿಸ್ತದೆ.೧.ವೈಚಾರಿಕ ಮನೋಧರ್ಮ(ಬುದ್ಧಿಗೆ ಕೆಲಸ)ಇದು ಇರುವಲ್ಲಿ ಯಾರಿಗೂ ಇತರರ ಮೇಲೆ ಸವಾರಿ ಮಾಡುವುದು ಶಕ್ಯವಿಲ್ಲ.ವೈಚಾರಿಕರ ದೃ಼ಷ್ಟಿಯಲ್ಲಿ ಮಹಾ ಪುರುಷನಾಗುವುದು ಕಷ್ಟ.೨.ಶ್ರದ್ಧೆಯೇ ಪ್ರಧಾನವಾಗಿರುವಲ್ಲಿ (ವಿಚಾರದ ಕೊರತೆ ಇರುವಲ್ಲಿ) ಪ್ರಶ್ನಿಸದೆ ಅನುಸರಿಸುವ ಮನೋಧರ್ಮ ಇರುತ್ತದೆ.ಅಂತಹ ಮಂದಿಯ ಕಣ್ಣಿನಲ್ಲಿ ಮಹಾಪುರುಷನೆನಿಸುವುದು ಸುಲಭ.ಅವರು ಎಲ್ಲವನ್ನು ಶ್ರದ್ಧೆಯಿಂದ ಕಾಣುವುದರಿಂದ ಇವರ ಕುರಿತು ಪ್ರಶ್ನೆಗಳು ಹುಟ್ಟುವುದಿಲ್ಲ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.೩.ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.


Ragu Kattinakere ಹೌದು ಮೊದಲ ವಾಕ್ಯದ ಅರ್ಥಕ್ಕೆ ಎರಡನೆಯದನ್ನು ಸೀಮಿತಗೊಳಿಸಿದರೆ ಹೌದು. ಇದನ್ನು ಸಾರ್ವತ್ರಿಕವಾಗಿ ಅನ್ವಯಿಸುವಂತಿಲ್ಲ ಎನ್ನುವುದನ್ನು ಹೇಳಬೇಕೆನಿಸಿತು. ಪಾಶ್ಚಾತ್ಯರ ಅರ್ಥವೂ ಅದೆ. ಅಂದರೆ ಅಲ್ಲಿ (ನನಗೆ ಇಲ್ಲಿ) ನಂಬಿಕೆಯೇ ಪ್ರಧಾನ. ಇಲ್ಲಿನ ಮತಗಳಲ್ಲಿ ಅದೇ ಇಂದಿಗೂ ಮುಖ್ಯ. ಇತ್ತೀಚೆಗೆ ಇಲ್ಲಿ ಬಂದ ವಿಜ್ಞಾನ ಮಾತ್ರ ಅದಕ್ಕೆ ಹೊರತು ಎಂಬ ಭಾವ ಇಲ್ಲಿದೆ. Rationalism ತತ್ವವನ್ನು ಬಳಕೆಗೆ ತಂದರು ಎನ್ನುವ ರೆನೇ ಡೆಸ್ಕಾರ್ತೆ ಅವರಂತವರೂ ಕ್ರೈಸ್ತ ವಾದಿಗಳು! ನ್ಯೂಟನ್ ಕೂಡ ಕಟ್ಟಾ ಕ್ರೈಸ್ತ! ಅಂದರೆ ಅವರ ಮೂಲದಲ್ಲಿ ಅಂಧಶ್ರದ್ಧೆಯೂ ಇತ್ತು. ಆದರೆ ನಮ್ಮ ಪರಂಪರೆಯಲ್ಲಿ ಹಾಗಿಲ್ಲ - ಸಾವಿರಾರು ವರ್ಷಗಳಿಂದ ನಮ್ಮ ಸಿದ್ಧಾಂತಗಳು ವಾದ ತರ್ಕವನ್ನೇ ಅವಲಂಬಿಸಿದ್ದು. ತರ್ಕ ಭಾರತದಿಂದಲೇ ಬಂತು ಎಂದು ಹಲವಾರು ಐರೋಪ್ಯ ಚಿಂತಕರು ಒಪ್ಪಿದ್ದರು ಈಗ ಕತೆ ಕಟ್ಟಿ ಬೇರೆ ಹೇಳುತ್ತಿದ್ದಾರೆ. ನಮ್ಮಲ್ಲೂ ಈ ನಂಬಿಕೆಯ ತೊಂದರೆ ಇದ್ದರೂ ಅದು ನಮ್ಮ ಮೂಲ ಚಿಂತನೆಯಲ್ಲಿ ಮತ್ತು ನಮ್ಮ ಆಚಾರ್ಯರ ಚಿಂತನೆಗೆ ನಂಬಿಕೆ ಬುನಾದಿ ಅಲ್ಲ ಎಂದು ನೆನಪಿಸೋಣ ಎನ್ನಿಸಿತು. ನಮ್ಮ ದೇಶದಲ್ಲಿ ವಿರೋಧೀಪಂಥ ಈ ತಪ್ಪುಗಳನ್ನೆಲ್ಲ ನಮ್ಮ ಪರಂಪರೆಗೆ ಅಂಟಿಸಿ ಪಾಶ್ಚಾತ್ಯರ ಮತಕ್ಕೂ ನಮ್ಮ ಪರಂಪರೆಗೂ ತಳುಕು ಹಾಕಿ ಮಾತಾಡುತ್ತದೆ. ಅಂತಹ ಅಪವಾದಗಳಲ್ಲಿ ಸರಿಯಾದ ಅರ್ಥ ಗ್ರಹಿಕೆ ಇಲ್ಲ ಅದು ವಿಚಾರವಾದವೋ ಪ್ರಮಾಣಿಕತೆಯೋ ಆಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳುವ ಅನ್ನಿಸಿತು. ಸೀಮಿತವಾಗಿ ಹೇಳಿದ ವಿಚಾರವನ್ನು ಸಾರ್ವತ್ರಿಕ ಮಾಡಿ ಅನ್ವಯಿಸಿದರೆ ತಪ್ಪಾದೀತು ಎನ್ನುವುದು ಒಂದಾದರೆ ಇನ್ನು ನಂಬಿಕೆಯನ್ನು ಹಳಿಯುವುದೂ ಸರಿಯಲ್ಲ ಎನ್ನುವುದು ಇನ್ನೊಂದು. ತಾಯಿ ತಂದೆ ಯಾರು ಎನ್ನುವುದರಿಂದ ಆದಿಯಾಗಿ ಹಲವು ವಿಚಾರಗಳಲ್ಲಿ ಮನುಷ್ಯನ ಜೀವನದಲ್ಲಿ ನಂಬಿಕೆ ಬಹಳ ಮುಖ್ಯ. ಕರೆದವರು ಬರುತ್ತಾರೆ, ಹೇಳಿದವರು ಮಾಡುತ್ತಾರೆ ಹೀಗೆ ನಂಬಿಕೆ ವಿಶ್ವಾಸ ಬೇಕು. ಎಲ್ಲವನ್ನೂ ವಿಚಾರದಮೂಲಕ ಬಗೆಹರಿಸಿಕೊಳ್ಳಲೂ ಅಸಾಧ್ಯ. ಇದನ್ನು ಮಿದುಳಿನ ವಿಕಾಸವಾದವೂ ಒಪ್ಪಿದೆ. ನಂಬಿಕೆ ಎಲ್ಲಿ ಒಳ್ಳೆಯದು ಎಲ್ಲಿ ಅತಿಯಾಗುತ್ತದೆ ಎಂಬ ಸಂತುಲನ ಬೇಕು. ನಂಬಿಕೆ ಇದ್ದಲ್ಲಿ ವಿಚಾರವಿಲ್ಲ ಎನ್ನುವುದೂ ಸರಿಯಲ್ಲ. ನಮ್ಮ ವಿಚಾರಕ್ಕೆ ಒಪ್ಪಿದ್ದು ನಮ್ಮ ನಂಬಿಕೆಯಾಗುತ್ತದೆ. ಬೇರೆಯವರ ವಿಚಾರಕ್ಕೆ ಒಪ್ಪಿದ್ದೂ ನಮ್ಮ ನಂಬಿಕೆಯಾಗಬಹುದು. ನಂಬಿಕೆ ಮತ್ತು ತರ್ಕದ ನಡುವೆಯೂ ಸಂತುಲನ ಬೇಕು. ಹಾಗಾಗಿ ಶೇಣಿಯವರ ಮಾತು ಸೀಮಿತ ಅರ್ಥದಲ್ಲಿ ಸರಿ. ಆದರೆ ಅದನ್ನು ಸಾರ್ವತ್ರಿಕವಾಗಿ ಅದರಲ್ಲೂ ನಮ್ಮ ಪುರಾತನರ ಚಿಂತನೆ ಅನ್ವಯಿಸಿದರೆ ತಪ್ಪೆ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಇನ್ನು ನಾನೂ ಹವ್ಯಾಸಿಯಾಗಿ ತಾಳಮದ್ದಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ನನಗಿದೆ. ಆದರೆ ಪಾತ್ರ ಸಮರ್ಥನೆ ಪ್ರಸಂಗದ ಬಂಧಕ್ಕೆ ಒಳಪಟ್ಟ ವಾದಗಳ ಸ್ವರೂಪ ಮತ್ತು ಹಿಂದಿನ ಆಚಾರ್ಯರ ವಾದಗಳ ಸ್ವರೂಪ ಬೇರೆ ಎನ್ನುವುದರಲ್ಲಿ ಡಿಬೇಟ್ ಮತ್ತು ನಮ್ಮ ಆಚಾರ್ಯರ ವಾದ ಬೇರೆ ಎನ್ನುವ ವಿಷಯ ಗಮನಿಸಬೇಕು ಎನ್ನುವ ಕಾರಣಕ್ಕಾಗಿಯೂ ಇದನ್ನು ಉದ್ದ ಬೆಳಸಬೇಕಾಯಿತು. ಉತ್ತರಿಸಿದ್ದಕ್ಕೆ ನಿಮಗೆ, ಅಶೋಕವರ್ಧನರಿಗೆ ಈ ವಿಷಯ ಇಲ್ಲಿ ಪ್ರಸಾಪಿಸಿದ್ದಕ್ಕೆ ಧನ್ಯವಾದಗಳು.



01 May 2020

Why should expats teach their mother tongue to their children?

This question does not arise to speakers of English and a few other European languages. This question is mostly asked by some Indians or people who have a sort of inferiority about everything that belongs to them. Some do not even ask but assume that teaching non English/non-European language will actually trouble their kids and that they should "fit-in". Parents and some children assume this in fact is "modernity". i.e abandoning your roots and learnings associated with your people makes you modern!

To put it shortly, my parents put a lot of effort into teaching me more languages: even some languages they could not speak. They made sure I learnt Kannada English Hindi and Sanskrit! If I do not teach my children languages I know that will be huge deception. I should strive to teach them more than I know like my parents did. At the very least I should teach them what I know. Otherwise, as a parent I am cheating my children and snatching the opportunity from them.

The choice is yours! Do you want to teach your children your mother tongue or you would rather cheat them based on your definition of what is "enough". Imagine what would have happened to you if parents decided you did not need what you use today? Teaching less is easy teaching more is hard but good and also an obligation.



30 December 2019

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +919449587244


2009ರಲ್ಲಿ ಸ್ಥಾಪಿತವಾದ ಯಕ್ಷಮಿತ್ರ ಟೊರೋಂಟೋ  ಯಕ್ಷಗಾನ ಶಿಕ್ಷಣ-ಲಕ್ಷಣ ಎಂಬ ಹೊಸ್ತೋಟ ಭಾಗವತರ  ೫೦ ವರ್ಷದ ಸಾಧನೆಯ ಸಾರವನ್ನು  ಸಂಪಾದಿಸಿ ಮುದ್ರಿಸಿ ಪ್ರಕಟಿಸಿದೆ.  ಯಕ್ಷಮಿತ್ರದ ಮೊದಲ ಪ್ರಕಟಣೆಯನ್ನು ತೀವ್ರವಾಗಿ ಅಸ್ವಸ್ಠವಾಗಿರುವ ಹೊಸ್ಟೊಟದವರು ಶಿರಸಿ ಸಮೀಪದ ಕೆರೆಕೊಪ್ಪದಲ್ಲಿ ಹಾಸಿಗೆಯಿಂದಲೇ ನೋಡಿ ಅಭಿನಂದಿಸಿದರು. ಯಕ್ಷಮಿತ್ರ ಡಿಸೆಂಬರ್ ೬ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಸಾಹಿತಿ ಸುಬ್ರಾಯ ಹೆಗಡೆ ಮತ್ತು ಪ್ರಮೋದ್ ಹೆಗಡೆ ಸುಮಾರು ೮೦ ಹೊಸ್ತೋಟ ಅಭಿಮಾನಿಗಳ ಎದುರು ಪುಸ್ತಕ ಬಿಡುಗಡೆ ಮಾಡಿದರು. ಕಲಾವಿದರಾದ ಸತೀಶ್ ದಂಟಕಲ್, ತಿಮ್ಮಪ್ಪ ಬಾಳೆಹದ್ದ, ಕೃಷ್ಣಯಾಜಿ ಇಡಗುಂಜಿ,  ಶಂಕರ ಭಾಗವತ ಯಲ್ಲಾಪುರ ಇತರರು ತಾವಾಗಿಯೇ ಬೇರೆ ಕೆಲಸ ಬದಿಗೊತ್ತಿ ಬಂದು ಗಣಪತಿ ಪೂಜೆ ಮಂಗಳ ಮತ್ತು ಹೊಸ್ಟೋಟರ ಕೆಲವು ಪದ್ಯ ಹಾಡಿ ಗುರು ಹೊಸ್ಟೋಟರಿಗೆ ಗೌರವ ಸಲ್ಲಿಸಿದರು.  ಮೂಲತಹ ಈ ವಿಷಯ ಸಂಗ್ರಹಿಸಿದ ಹಂದಿಮೂಲೆ ಗಣಪತಿ ಹೆಗಡೆ, ಕೆ ವಿ ಹೆಗಡೆ, ಮೂರೂರು ಗಣೇಶ ಹೆಗಡೆ, ಹೆಜ್ಜೆ-ಗೆಜ್ಜೆ ಬಳಗದ ಅರುಣ ಮತ್ತು ಸೌಮ್ಯ ಅವರನ್ನು ನೆನೆದು ಕೃತಙ್ನತೆ ಹೇಳಲಾಯಿತು. ಪ್ರಭಾಕರ ಜೋಷಿ ಮುನ್ನುಡಿ, ರಾಗು ಕಟ್ಟಿನಕೆರೆ ಸಂಕಲನ-ಸಂಪಾದನ, ಯಕ್ಷಗಾನ ಆಕಾಡೆಮಿ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಮತ್ತು ರಾಘವ ನಂಬಿಯಾರ್ ಪುಸ್ತಕಕ್ಕೆ ಹಿನ್ನುಡಿ ಕೊಟ್ಟಿದ್ದಾರೆ. ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934, ಭಾರತ-ರವೀಂದ್ರ ಮುದ್ರಣಾಲಯ ಸಾಗರ ಮೋ: +919449587244.

ಹೊಸ್ತೋಟ ಮಂಜುನಾಥ ಭಾಗವತರು ೫೦ ವರ್ಷ ಕಲಿಸಿದ ಯಕ್ಷಗಾನ ಶಿಕ್ಷಣದ ಸಾರ ಸರ್ವಸ್ವ ಈ ಸಂಗ್ರಾಹ್ಯಾರ್ಹವಾದ ಗ್ರಂಥದಲ್ಲಿ ಪ್ರಕಟವಾಗುತ್ತಿದೆ. ಮದ್ದಲೆಯ ಹಳೆತು ಮತ್ತು ಹೊಸ ಹೊಳಹಿನ ಬಿಡ್ತಿಗೆಗಳು, ಪಟ್ಟು - ಪೆಟ್ಟನ್ನು ಹೊಸ್ತೋಟರು ಅಭ್ಯಾಸಕ್ಕೆ ಅನುವಾಗುವಂತೆ ದೊರಕಿಸಿದ್ದಾರೆ.  ಇದು ಹೊಸ್ತೋಟದವರ ಕ್ರಮವಷ್ಟೇ ಆಗಬಾರದೆಂದು ಅವರು ಯಕ್ಷಗಾನವನ್ನು ಭಾಷಿಕವಾಗಿ ಅಂದರೆ ಕಲೆಯ ವ್ಯಾಕರಣದ ರೂಪದಲ್ಲಿ ಕಲಿಯಲು ಬರುವಂತೆ, ಆಕೃತಿಯ ನಿಯಮಗಳು, ರಂಗ ರೇಖೆಗಳು, ಚಲನೆ ಇತ್ಯಾದಿಗಳನ್ನು ಚಿತ್ರ ಸಹಿತ ವಿವರಿಸಿದ್ದಾರೆ. ಲಯವನ್ನು ಲಯಗಣಿತದ ಮೂಲಕ ಕಲಿಸುವುದು ಹೊಸ್ತೋಟ ಭಾಗವತರ ವಿಶೇಷ. ಅದರ ಗತ್ತು-ಗೊತ್ತು ಈ ಪುಸ್ತಕದಲ್ಲಿದೆ. ಯಕ್ಷಗಾನ ಸಾಹಿತ್ಯದ ಮಟ್ಟು-ಗುಟ್ಟು ಮತ್ತು ಅವನ್ನು ಬಳಸುವ ವಿಧಾನ-ಛಂದಸ್ಸು ಇದರಲ್ಲಿ ಲಭ್ಯ. ೯೦ ಯಕ್ಷಗಾನದ ರಾಗಗಳನ್ನು ಸ್ವರ ಪ್ರಸ್ತಾರಿಸಿ ಗುರು ಮುಖೇನ ಕಲಿಯಲು ಅಭ್ಯಾಸಕ್ಕೆ, ನೆನಪಿಗೆ ನೀಡಲಾಗಿದೆ.  ಅರ್ಥಗಾರಿಕೆ ಹೇಗೆ ಔಚಿತ್ಯ ಹೇಗೆ ಎಂಬ ವಚನ ರಚನಾತಂತ್ರವೇ ಇಲ್ಲಿ ಅನಾವರಣಗೊಂಡಿದೆ. ಅಭಿನಯ-ಔಚಿತ್ಯವನ್ನು ಸೋದಾರಣ ಇಲ್ಲಿ ನೀಡಲಾಗಿದೆ. ಕೃಷ್ಣಯಾಜಿ ಇಡಗುಂಜಿ ಇವರು ಚಂಡೆಯ ವಿವರ ನುಡಿಸುವ ಕ್ರಮ ಇವೆಲ್ಲವನ್ನು ಈ ಗ್ರಂಥಕ್ಕಾಗಿ ಒದಗಿಸಿದ್ದಾರೆ. ಶಂಕರ ಭಾಗವತರು ಮತ್ತು ಅನಂತ ಪಾಠಕರು ಮದ್ದಲೆಯ ನುಡಿತ ಬಡಿತಗಳ ಬಿಂಬ ಒದಗಿಸಿದ್ದಾರೆ. ಒಟ್ಟಿನಲ್ಲಿ ಇದು ಆಹಾರ್ಯ ಹೊರತುಪಡಿಸಿ ಯಕ್ಷಗಾನದ ಇನ್ನೆಲ್ಲವನ್ನೂ ಅಧಿಕಾರಯುತವಾಗಿ ವಿವರಿಸುವ ಅದ್ಭುತ ಗ್ರಂಥ. ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ಭಾರತದ ಹೊರಗಿರುವ ಪ್ರಥಮ ಯಕ್ಷಗಾನ ಮೇಳ - ಯಕ್ಷಮಿತ್ರ ಟೊರಾಂಟೋ ಈ ಪುಸ್ತಕವನ್ನು ಸಂಪಾದಿಸಿ ಪ್ರಕಾಶಿಸುತ್ತಿದೆ. ಈ ಪುಸ್ತಕದಲ್ಲಿ ವಿವರಿಸಿದ ಪ್ರಾತ್ಯಕ್ಷಿಕೆಗಳ ವೀಡಿಯೋಗಳು ಕೆಲ ಕಾಲದನಂತರ www.yakshamitra.com/shikshana ಇಲ್ಲಿ ಲಭ್ಯವಾಗುತ್ತದೆ.

ಇವಿಷ್ಟೇ ಅಲ್ಲದೇ ಬೇರಾರಿಗೂ ನಿಲುಕದ ಹೊಸ್ತೋಟ ಮಂಜುನಾಥ ಭಾಗವತರ  ಯಕ್ಷಗಾನದ ಬಗೆಗಿನ ಒಳನೋಟ ಇಲ್ಲಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತ ೨೦೦ಕ್ಕೂ ಹೆಚ್ಚು ಪ್ರಸಂಗ ಬರೆದ ಈ ಕವಿ, ಛಂದಶಾಸ್ತ್ರಜ್ಞರೂ, ಯಕ್ಷಗಾನದ ಒಬ್ಬ ಶ್ರೇಷ್ಟ ಗುರುವೂ ಆದ ಹೊಸ್ತೋಟ ಮಂಜುನಾಥ ಭಾಗವತರು ತ್ರಿಶಾಸ್ತ್ರ ಪಂಡಿತರಾದ ಒಬ್ಬ ಋಷಿ: ಇದು ಋಷಿ ಸಂಹಿತೆ ಎಂದರೆ ಅತಿಶಯೋಕ್ತಿಯಲ್ಲ. ಕಟು ಚಿಕಿತ್ಸೆಯ ಖಗ್ಣ ಶಯ್ಯೆಯಲ್ಲಿರುವ ಈ ಹಿರಿ ಚೇತನ ನಮಗೆಲ್ಲ ಕೊಡುತ್ತಿರುವ ಬಿಡುತ್ತಿರುವ ಸಂಪತ್ತು-ಸಂಹಿತೆ ಯಕ್ಷಗಾನ ಶಿಕ್ಷಣ-ಲಕ್ಷಣ ಎಂಬ ಈ ಗ್ರಂಥ.

ಇತ್ತೀಚೆಗೆ ದಶಮಾನೋತ್ಸವ ಆಚರಿಸಿದ ಭಾರತದ ಹೊರಗಿರುವ ಪ್ರಥಮ ಯಕ್ಷಗಾನ ಮೇಳ - ಯಕ್ಷಮಿತ್ರ ಟೊರಾಂಟೋ ಈ ಪುಸ್ತಕವನ್ನು ಸಂಪಾದಿಸಿ ಪ್ರಕಾಶಿಸುತ್ತಿದೆ. ಎಲ್ಲವನ್ನೂ ಸಂಗ್ರಹಿಸಿ ಸಂಪಾದಿಸಿ ಮುದ್ರಿಸಲು ನಾಲ್ಕಾರು ವರ್ಷವೇ ಹಿಡಿದಿದೆ. ಸಮಗ್ರವಾಗಿ ಕಲೆಯನ್ನು ಸರಳವಾಗಿಯೂ ಆಳವಾಗಿಯೂ ಪ್ರಸ್ತುತಪಡಿಸುವ ಇಂತಹ ಪುಸ್ತಕಗಳು  ಪ್ರಕಟವಾಗುವುದು ವಿರಳ. ಆಸಕ್ತರು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾದ್ದು. ಯಕ್ಷಗಾನದ ವಿದ್ವಾಂಸರಾದ ಡಾ ಎಮ್ ಪ್ರಭಾಕರ ಜೋಷಿ  ಮುನ್ನುಡಿ ಬರೆದಿದ್ದಾರೆ. ಈ ರೀತಿ ಇನ್ನೂ ಅನೇಕ ವಿಶೇಷ ಹಸ್ತಪ್ರತಿಗಳು ಇದ್ದು ಅವನ್ನು ಪ್ರಕಟಿಸಲು ವಿದ್ಯಾಭಿಮಾನಿಗಳು ಮುಂದಾಗಬೇಕು.

--ರಾಗು ಕಟ್ಟಿನಕೆರೆ

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...