ಕಲಿಯುಗಾಬ್ಧ ೫೧೨೨ - ಜೇಷ್ಠ ಮಾಸ ಕೃಷ್ಣ ತೃತಿಯ (ಜುಲೈ ೭ನೇ ದಿನ ೨೦೨೦) ನಾವು ಮಾಡಿದ ಗಮಕಕ್ಕೆ ಬಹಳ ಪ್ರತಿಕ್ರಿಯೆಬಂದಿದೆ. ಇದು ಗಮಕ ಕಲಿಯುವವರಿಗೆ ಮತ್ತು ಅಧ್ಯಯನ ಮಾಡುವವರಿಗೆ ಬಹಳ ಅನುಕೂಲ ಹಾಗಾಗಿ ಇಲ್ಲಿ ಹಾಕಿದ್ದೇನೆ.
ಮೊದಲು ಕಾರ್ಯಕ್ರಮದ ಬಗ್ಗೆ. ನನಗೆ ಹಾಡಲು ಕಾವ್ಯವಾಚನ ಮಾಡಲು ಕಲಿಸಿದ್ದು ನನ್ನ ಅಮ್ಮ ಗೀತಾ ಕಟ್ಟಿನಕೆರೆ. ಅಮ್ಮನ ಧಾಟಿ ಶೈಲಿ ಎಲ್ಲೆಡೆ ಇದೆ. ಇದರಲ್ಲಿ ಸುಮಾರು ೧೪ ರಾಗದ ಛಾಯೆ ಇದೆ. ಇದರಲ್ಲಿ ಸುಮಾರು ೧೦ ನಾನು ಬಳಸಿದ್ದು ಸಂಯೋಜಿಸಿದ್ದು ಉಳಿದವು ಹಿರಿಯರಾದ ಗಮಕಿ ಕೆರೆಕೊಪ್ಪದ ನರಹರಿ ಶರ್ಮ ಮತ್ತು ಹೊಸಬಾಳೆ ಸೀತಾರಾಮರಾಯರಿಂದ ಕೇಳಿದ್ದನ್ನು ಅನ್ವಯಿಸಿದ್ದೇನೆ. ಕೇಳಿ ನೋಡಿ. ಕೆಲವೆಡೆ ಮಿಶ್ರವಾಗಿದೆ. ಆದರೆ ಸಾಹಿತ್ಯದಲ್ಲಿನ ಭಾವನೆಗಳು ಚೆನ್ನಾಗಿ ಬಂದಿದೆ ಎಂದು ಬಹಳ ಜನ ಹೇಳಿದ್ದಾರೆ.
ಪದ್ಯಗಳು ಇಲ್ಲಿ ಲಭ್ಯ: ನೋಡಿ
ಗಮಕದಲ್ಲಿ ಮುಖ್ಯವಾಗಿ ಎರಡು ವಿಧ ಇದೆ ನಾನು ಕಂಡುಕೊಂಡಿದ್ದೇನೆ. ಇವು ನನ್ನದೇ ವಿಭಾಗ.
೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
೩) ಇನ್ನು ಮಂಗಳೂರಿನ ಕ್ರಮವೂ ಸ್ವಲ್ಪ ಭಿನ್ನ ಇದೆ - ಅದು ಸಾಗರ ಮತ್ತು ಬೆಂಗಳೂರಿನ ಮಧ್ಯ ಎನ್ನಬಹುದೇನೋ ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ
೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
ಇದರಲ್ಲಿ ಉದ್ಘಾರ ಭಾವದ ಅಭಿವ್ಯಕ್ತಿ ಮತ್ತು ಛಂದಸ್ಸು ಮುಖ್ಯ. ಅಂದರೆ
೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
ಇದು ಬಹಳ ಪ್ರಚಲಿತ ಇರುವ ಶೈಲಿ. ಇದರಲ್ಲಿ ಕರ್ನಾಟಕಿ ಸಂಗೀತದ ಕೃತಿಗಳಿಗೆ ಬಳಸಿದ ರಾಗವನ್ನೇ ಅದೇ ಶೈಲಿಯಲ್ಲೇ ಕನ್ನಡ ಕಾವ್ಯಗಳಿಗೆ ಅನ್ವಯಿಸಿ ಓದುವುದು ಹೆಚ್ಚು. ಅಂದರೆ ಸ್ವರಗಳ ಬಳಕೆ ಛಂದಸ್ಸಿಗೆ ಹೊಂದಿಕೊಂಡು ಹೋಗುವುದಿಲ್ಲ. ಸಂಗೀತದ ಕೃತಿಗಳಂತೆ ಸಾಗುತ್ತದೆ. ಇಲ್ಲಿ ಭಾವನೆಗಳು ರಾಗ ಎಷ್ಟು ತೋರುತ್ತದೋ ಅಷ್ಟೆ. ಉದ್ಘಾರ ಸಂದರ್ಭಕ್ಕೆ ಹೊಂದುವ ಆಡುಮಾತಿನ ಧಾಟಿಗಳ ಬಳಕೆ ಇಲ್ಲಿ ಇಲ್ಲ. ಇದು ಕರ್ನಾಟಕಿ ಶೈಲಿಯವರಿಗೆ ಇಷ್ಟವಾದರೆ - ಛಂದೋಭಂಗ ವಾಯಿತು ಅಥವಾ ಲಯ ಹೊಂದದು ಎಂದು ಕೊರಗು ಛಂದಸ್ಸಿನ ಅರಿವು ಇರುವವರಿಗೆ. ಇನ್ನು ರಾಗದಲ್ಲಿ ಸ್ವರದ ಬಳಕೆಯ ಮೇಲೆ ಭಾವ ವ್ಯಕ್ತವಾಗುತ್ತದೆಯೆ ಹೊರತು ರಾಗಕ್ಕೂ ಭಾವಕ್ಕೂ ನೇರ ಸಂಬಂಧ ಇಲ್ಲ. ಇದು ಶಾಸ್ತ್ರ, ಅನುಭವವೂ ಹಾಗೆಯೇ ಇದೆ ಅರ್ಥವಾಗುವವರಿಗೆ. ಶಾಸ್ತ್ರೀಯ ಎಂದು ಅಭ್ಯಾಸ ಮಾಡಿದವರಿಗೆ ಒಂದೋಂದು ರಾಗ ಒಂದೊಂದು ಭಾವಕ್ಕೆ ಎಂದು ತಪ್ಪಾಗಿ ಕಲಿಸಲಾಗುತ್ತದೆ. ಸ್ವರದ ಮತ್ತು ಗಮಕದ ಬಳಕೆಯ ಮೇಲೆ ಭಾವ ವ್ಯಕ್ತವಾಗುವುದಕ್ಕಾಗಿ ಬರಿ ಕರ್ನಾಟಕಿ ಸಂಗೀತ ಪದ್ಧತಿ ಬಳಸುವಾಗ ಕಾವ್ಯದ ಭಾವ ಸರಿ ವ್ಯಕ್ತವಾಗುವುದಿಲ್ಲ ಎಂದು ನನ್ನಂತವರ ಅಭಿಪ್ರಾಯ. ಇದರ ರಾಗ ಶುದ್ಧತೆ ಗಮಕ ಬಹಳ ಉತ್ಕೃಷ್ಟವಾದ್ದು.
೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
ಇದರಲ್ಲಿ ಉದ್ಘಾರ ಭಾವದ ಅಭಿವ್ಯಕ್ತಿ ಮತ್ತು ಛಂದಸ್ಸು ಮುಖ್ಯ. ಅಂದರೆ
ಭಾಮಿನಿಯ ತ್ರಿವುಡೆ ತಾಳದಲಯ - ತಕಿಟತಕದಿಮಿ ಮತ್ತು ವಾರ್ಧಿಕದ ಮಿಶ್ರ ಝಂಪೆಯಲಯ - ತಕಿಟತಕ. ಇನ್ನು ಕಂದ ದ್ವಿಪದಿ ಸಾಂಗತ್ಯದ ಲಯಗಳು ಬೇರೆ. ಇದು ಯಕ್ಷಗಾನದ ಕ್ರಮ ಎಂದು ಕೆಲವರು ತಪ್ಪುತಿಳಿದಿದ್ದಾರೆ ಆದರೆ ಛಂದೋಲಯ ಯಕ್ಷಗಾನದಲ್ಲಿಯೂ ಹೀಗೆಯೇ ಬಳಕೆ ಎನ್ನುವುದು ನಿಜ. ಇಲ್ಲಿ ಓದುವಲ್ಲಿ ಭಾವಕ್ಕೆ ಹೊಂದುವ ಗಮಕ ರಾಗ ಎಲ್ಲದರಬಳಕೆ ಇದೆ. ಕರ್ನಾಟಕಿಪದ್ಧತಿಯ ರಾಗವೇ ಬಳಕೆಯಾಗುತ್ತದೆ. ಆದರೆ ಸಾಹಿತ್ಯ ಛಂದಸ್ಸು ಭಾವನೆ ಮುಖ್ಯ. ಛಂದೋಲಯ ಮುರಿಯುವುದು ತಪ್ಪು ಎನ್ನುವುದು ಈ ಪಾಳಯದ ನಂಬಿಕೆ ಅದು ಸರಿಯೂ ಹೌದು. ಇಲ್ಲದಿದ್ದರೆ ಗಮಕಕ್ಕೂ ವಿತಾಳ ಸಂಗೀತಕ್ಕೂ ಏನೂ ವ್ಯತ್ಯಾಸ ಇಲ್ಲವಾಗುತ್ತದೆ. ಮತ್ತೂ ಸಾಹಿತ್ಯಕ್ಕೆ ಹೊಂದದ ಲಯ ಬಳಸುವುದು ತಪ್ಪೂ ಅನನುಭವವೂ ಆಗುತ್ತದೆ. ಕರ್ನಾಟಕಿ ಸಂಗೀತ ಬಂದರೆ ಎಲ್ಲವೂ ಬಂತು ಎನ್ನುವ ತಪ್ಪು ತಿಳುವಳಿಕೆ ಬಹಳ ಜನರಲ್ಲಿದೆ. ದಾಸರೂ ಅದನ್ನು ಒಪ್ಪರು. ಭದ್ರಗಿರಿ ಅಚ್ಯುತದಾಸರು ಅದನ್ನು ಅನೇಕಕಡೆ ಹೇಳೀಯೂ ಇದ್ದಾರೆ. ದಾಸರನ್ನೇ ಕೀಳಾಗಿನೋಡುವ ಸಂಗೀತಗಾರರನ್ನು ನಾನು ಕಂಡಿದ್ದೇನೆ! ಅದಿರಲಿ, ಗಮಕವು ಸಾಹಿತ್ಯವನ್ನು ಓದುವ ಕಲೆ. ಸಾಹಿತ್ಯವನ್ನು ಓದುವುದು ಸರಿ ಬರಬೇಕು. ಶುದ್ಧವಾಗಿ ಓದುವ ಸಂಧಿ ಸಮಾಸ ಬಿಡಿಸುವ ಕೆಲಸ ಬರಬೇಕು.
ವಿಮರ್ಶೆ: ರಾಗು ಕಟ್ಟಿನಕೆರೆ
ಭಾವ ಚೆನ್ನಾಗಿ ಮೂಡಿಬಂದಿದೆ. ಧ್ವನಿ ಇನ್ನೂ ಮಧುರವಾಗಿ ನಯವಾಗಿ ಬರಬೇಕು. ರಾಗಗಳು ಮಿಶ್ರ ಆಗಿದೆ ಅದು ಸರಿಯಾಗಬೇಕು. ಉಚ್ಛಾರ ಚೆನ್ನಾಗಿದೆ. ಸಾಮಾನ್ಯ ವಾಚಕರಿಗೆ ಹೋಲಿಸಿದರೆ ಉತ್ತಮವೆ. ಆದರೆ ಸ್ಪಷ್ಟತೆ ಇನ್ನೂ ಸಾಲದು.
ವಿಮರ್ಶೆ: ರಾಘವ ನಂಬಿಯಾರ್ - ಶ್ರೇಷ್ಟ ಯಕ್ಷಗಾನದ ವಿದ್ವಾಂಸರು (ನನ್ನ ಶಬ್ಧಗಳಲ್ಲಿ)
ಯಶಸ್ವಿಯಾಗಿದೆ. ವಾಚನ ಸ್ಪಷ್ಟವಾಗಿದೆ. ಸಂಧಿ ವಿಭಜನೆ ಮಾಡಿದರೆ ಛಂದಸ್ಸು ಭಂಗವಾಗುತ್ತದೆ - ವಿಭಜನೆ ಮಾಡದೆ ಅರ್ಥ ವಿಭಜನೆಯಾಗುವಂತೆ ಓದಬೇಕು. ವಾಕ್ಯ ಅರ್ಥ ಸರಿಹೊಂದುವಲ್ಲಿ ನಿಲ್ಲಿಸಿ ಸರಿಹೊಂದಿಸಿ ಓದಬೇಕು.
ವಿಮರ್ಶೆ: Y ದತ್ತಾತ್ರೇಯ
ರಾಗಗಳನ್ನು ಭಾವನೆಗೆ ಸಾಹಿತ್ಯಕ್ಕೆ ಸರಿಹೊಂದುವಂತೆ ಅಳವಡಿಸಿದ್ದೀರಿ. ವ್ಯಾಖ್ಯಾನ ಚೆನ್ನಾಗಿ ಬಂದಿದೆ.
ಇನ್ನು ಅನೇಕ ಜನ ಮೆಚ್ಚಿದ್ದಾರೆ. ಅದರಲ್ಲಿ ನೂರಾರು ಕಾವ್ಯವಾಚನ ಕೇಳಿದವರು ಇದನ್ನು ೧೦ ಉತ್ತಮ ಪ್ರದರ್ಶನಗಳಲ್ಲಿ ಒಂದು ಎಂದು ಗುರುತಿಸಿದ್ದಾರೆ. ಇದು ದೊಡ್ಡ ಶ್ಲಾಘನೆ. ಇನ್ನು ಅಭ್ಯಾಸಮಾಡಲು ತಿದ್ದಿಕೊಳ್ಳಲು ಒಳ್ಳೆಯ ಹುರುಪು ಕೊಡುವಂತಾದ್ದು ಎಂದು ಗಣಿಸುತ್ತೇನೆ.
No comments:
Post a Comment
Please leave a note about what you think about this write up. Thanks.