ಪ್ರಸ್ತಾವನಾ ಭಾಷಣ - ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ ಉದ್ಘಾಟನೆ
ರಾಗು ಕಟ್ಟಿನಕೆರೆ
ಸಂಚಾಲನಾ ಸಮಿತಿ, ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ
ಗುರುಭ್ಯೋನ್ನಮ: ಹರಿ: ಓಂ
ಇಲ್ಲಿ ಸೇರಿರುವ ಎಲ್ಲ ಹಿರಿಯರು ಗಮಕಿಗಳು ವ್ಯಾಖ್ಯಾನಕಾರರು ಸಂಘಟಕರು ಮತ್ತು ಗಮಕದ ಅಭಿಮಾನಿಗಳಿಗೆ ನಮಸ್ಕರಿಸಿ, ಗಮಕ ಕಲಾ ವೇದಿಕೆಯ ಬಗ್ಗೆ ಪ್ರಸ್ತಾವಿಕವಾಗಿ, ಉದ್ಧೇಶಗಳು ಮತ್ತು ಇವತ್ತಿನ ಕಾರ್ಯಕ್ರಮದ ಹಿನ್ನೆಲೆಯ ಬಗ್ಗೆ ಮಾತಾಡುತ್ತೇನೆ.
ಹಿನ್ನೆಲೆ-ಹಿಂದಿನ ಬೆಳವಣಿಗೆ/ಇತಿಹಾಸ
ಉತ್ತರ ಅಮೇರಿಕಾದಲ್ಲಿ ಅಂದರೆ ಯು ಎಸ್ ಎ ಮತ್ತು ಕೆನಡಾದಲ್ಲಿ ನೆಲೆಸಿದ ಕನ್ನಡಿಗರಿಂದ ಗಮಕದ ಕಾರ್ಯಕ್ರಮಗಳು ಕೆಲಕಾಲದಿಂದ ನೆಡೆಯುತ್ತಾ ಬಂದಿದೆ. ಗೀತಾ ಮತ್ತು ಯಲ್ಲೆಶ್ಪುರ ದತ್ತಾತ್ರಿಗಳು 87-88ರಲ್ಲಿ ನ್ಯೂಯಾರ್ಕ್ನಲ್ಲಿ ದೂರ್ವಾಸಾತಿಥ್ಯ ವಾಚನ ಮಾಡಿದ್ದರು. ಅದು ಅಮೇರಿಕಾದಲ್ಲಿ ಮೊದಲು ಇರಬಹುದು. 89ರಲ್ಲಿ ಹೊಸಬಾಳೆ ಸೀತಾರಾಮರಾಯರು ಅಮೇರಿಕಾಕ್ಕೆ ಬಂದಾಗ ೩-೪ಕಡೆ ವಾಚನ ಮಾಡಿದ್ದರೂ ಅಂತಲೂ ತಿಳಿಯಿತು. ನಂತರ ರಾಧಿಕಾ ಮತ್ತು ರಾಮಚಂದ್ರ ಶಾಸ್ತ್ರಿಗಳು ಅಮೇರಿಕಾದಲ್ಲಿ ಕೆಲವು ಕಾರ್ಯಕ್ರಮ ಕೊಟ್ಟಿದ್ದರು. ನಾನೂ ಸಹ ಕೆನಡಾದಲ್ಲಿ 2012ರಲ್ಲಿ ನರಹರಿ ಶರ್ಮಾ ಅವರಲ್ಲಿ ಕೇಳಿ ಹೇಳಿಸಿಕೊಂಡು ವಾಚನ ಮಾಡಿದ್ದೆ. ಕೆನಡಾದಲ್ಲಿ ಬಹುಶ: ಅದು ಮೊದಲು ಇರಬಹುದು. ಸುಧಾ ಮತ್ತು ಶ್ರೀ ಶ್ರೀಕಾಂತ್ ಅವರು 2014ರಲ್ಲಿ ವಾಚನ ವ್ಯಾಖ್ಯಾನ ಮೊದಲಬಾರಿಗೆ ಆಯೋಜನೆ ಮಾಡಿದ್ದರು. ರಾಮಪ್ರಸಾದ್ ಮತ್ತು ಗಣೇಶ ಶರ್ಮಾ ತ್ಯಾಗಲಿ ಅವರು ಕ್ಯಾಲಿಪೋರ್ನಿಯಾದಲ್ಲಿ ಸುಮಾರು 2014ರಿಂದ ಕಾರ್ಯಕ್ರಮ ಮಾಡಿದ್ದಾರೆ. ನಂತರ ನಾವು 2018ರಲ್ಲಿ ಗಮಕ ವೇದಿಕೆ ಕೆನಡಾ ಅಂತ ಮಾಡಿಕೊಂಡು 3 ತಾಸಿನ ಎರಡು ಕ್ರಾರ್ಯಕ್ರಮ - ಗೀತಾ ಮತ್ತು ಯಲ್ಲೇಶ್ಪುರ ದತ್ತಾತ್ರಿಗಳು ಮತ್ತು ರಾಗು ಕಟ್ಟಿನಕೆರೆ ಹಾಗು ನವೀನ ಖಂಡಿಕ ಇವರಿಂದ - ಮಾಡಿದ್ದೆವು. ನಂತರ ಪುರಂದರ ಆರಾಧನೆ ಮತ್ತು ಕನ್ನಡ ಸಂಘ ಟೊರಾಂಟೋ ಅವರ ಆಶ್ರಯದಲ್ಲೂ ನಮ್ಮ ಕೆಲವು ಗಮಕ ಕಾರ್ಯಕ್ರಮಗಳು ನೆಡೆದಿವೆ.
ಹೀಗಿರುವಾಗ ನಾವೆಲ್ಲ ಗಮಕದಲ್ಲಿ ಆಸಕ್ತಿ ಇರುವವರು ವಾಚನ ವ್ಯಾಖ್ಯಾನ ಮಾಡಿದವರು, ಉತ್ತರ ಅಮೇರಿಕಾದಾದ್ಯಂತ ಇರುವವರು ಒಟ್ಟಿಗೆ ಸೇರಬೇಕು, ಪರಸ್ಪರ ಪರಿಚಯಮಾಡಿಕೊಂಡು ಒಗ್ಗಟ್ಟಾಗಿ ಕೆಲಸಮಾಡಬೇಕು ಎಂದು ನಮಗೆ ಸಾಧ್ಯವಾದವರನ್ನೆಲ್ಲ ಸಭೆ ಸೇರಿಸುವ ಪ್ರಯತ್ನ ಮಾಡಿದೆವು.
2020 ಆಗಸ್ಟ್ 11 ಬುಧವಾರದಂದು ನೆಡೆದ ಸಭೆಯಲ್ಲಿ ಗಮಕ ಕಲಾ ವೇದಿಕೆ ಉತ್ತರ ಅಮೇರಿಕಾ ಅಥವಾ Gamaka Art Association North America ಎಂಬ ಸಂಘವನ್ನು ಆರಂಭಿಸಬೇಕು ಎನ್ನುವ ಪ್ರಸ್ತಾಪವನ್ನು ಸರ್ವಾನುಮತದಿಂದ ಸ್ವೀಕರಿಸಲಾಯಿತು. ಇದರ ವಿಧ್ಯುಕ್ತವಾದ ಉದ್ಘಾಟನೆಯನ್ನು ಮಾಡುವುದರ ಮೂಲಕ ನಮ್ಮ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಂದಿನ ಕಾರ್ಯಕ್ರಮಕ್ಕೆ ಮುಂದಾಗುತ್ತಿದ್ದೇವೆ.
ಇದರ ಹಿಂದಿನ ಜನರು:
ಶ್ರೀಮತೀ ಗಿತಾ ಮತ್ತು ಯಲ್ಲೇಶ್ಪುರ ದತ್ತಾತ್ರಿ - ನ್ಯೂಯಾರ್ಕ್
ಶ್ರೀ ರಾಗು ಕಟ್ಟಿನಕೆರೆ - ಕೆನಡಾ
ಶ್ರೀ ಗಣೇಶ್ ಶರ್ಮಾ ತ್ಯಾಗಲಿ - ಕ್ಯಾಲಿಪೋರ್ನಿಯಾ
ಶ್ರೀಮತೀ ಸುಧಾ ಮತ್ತು ಶ್ರೀ ಶ್ರೀಕಾಂತ್ - ಕೆನಡಾ
ಶ್ರೀ ನವೀನ ಖಂಡಿಕ - ಕೆನಡಾ
ಶ್ರೀ ಯಲ್ಲೇಶ್ಪುರ ಜಯರಾಮ್ - ಫ್ಲಾರಿಡ
ಶ್ರೀ ಹೊಸಹಳ್ಳಿ ರಾಮಸ್ವಾಮಿ - ಕೆನಡಾ
ಶ್ರೀಮತೀ ರಾಧಿಕಾ ಮತ್ತು ರಾಮಚಂದ್ರ ಶಾಸ್ತ್ರಿ - ನ್ಯೂಜೆರ್ಸಿ
ಶ್ರೀ ರಾಮಪ್ರಸಾದ್ ಕೆ ವಿ -ಕ್ಯಾಲಿಪೋರ್ನಿಯಾ
ಶ್ರೀ ಪ್ರತಾಪ ಸಿಂಹ - ಕ್ಯಾಲಿಪೋರ್ನಿಯಾ
ಶ್ರೀಮಂತ ಕಾರ್ತೀಕ್ - ಕ್ಯಾಲಿಪೋರ್ನಿಯಾ
ಸ್ಥಾಪಕ ಸಂಚಾಲನಾ ಸಮಿತಿ:
ಶ್ರೀ ಯಲ್ಲೇಶ್ಪುರ ದತ್ತಾತ್ರಿ - ನ್ಯೂಯಾರ್ಕ್
ಶ್ರೀ ರಾಗು ಕಟ್ಟಿನಕೆರೆ - ಟೊರಾಂಟೋ
ಶ್ರೀ ಗಣೇಶ್ ಶರ್ಮಾ ತ್ಯಾಗಲಿ - ಕ್ಯಾಲಿಪೋರ್ನಿಯಾ
ಶ್ರೀ ಶ್ರೀಕಾಂತ್ ಟೊರಾಂಟೋ
ಇನ್ನೂ ಆಸಕ್ತರನ್ನು ಯಾವಾಗಲೂ ಸ್ವಾಗತಿಸುತ್ತೇವೆ.
ಉದ್ಧೇಶ ಮತ್ತು ಯೋಜನೆಗಳು
೧. ಉತ್ತರ ಅಮೇರಿಕಾದಲ್ಲಿ ವರ್ಷಕ್ಕೆ ಕನಿಷ್ಠ ಎರಡು ಗಮಕ ಕಾರ್ಯಕ್ರಮಗಳು - ಅದನ್ನು ಆನ್ಲೈನ್ ಮೂಲಕ ಪ್ರಸಾರವೂ ಮಾಡುವುದು.
೨. ಕಾವ್ಯ - ವಾಚನ ವ್ಯಾಖ್ಯಾನ ಎಲ್ಲಿ ನೆಡೆದರೂ ಅದರ ಮಾಹಿತಿ ಹಂಚಿ ಒಂದಾಗುವುದು
೩. ಗಮಕಿಗಳಿಂದ - ಇಲ್ಲಿನ ಆಸಕ್ತರಿಗೆ ಗಮಕಿಗಳಾಗಲು ವ್ಯಾಖ್ಯಾನಕಾರಾಗಲು ಶಿಬಿರ ತರಬೇತಿ
೪. ಗಂಭೀರವಾದ ಕನ್ನಡ ಸಾಹಿತ್ಯದ ಆಸಕ್ತಿ ಗಮಕದ ಮೂಲಕ ಇನ್ನೂ ಮುಂದುವರೆಯಬೇಕು. ಕಾವ್ಯ ಜೀವಂತವಾಗಿರಬೇಕಾದರೆ ಅದರ ವಾಚನ ಆಗುತ್ತಿರಬೇಕು. ಕನ್ನಡದ ಕಾವ್ಯಗಳು ಬರಿ ಕಾವ್ಯವಲ್ಲ ಅನೇಕ ಕಲಾ ಪ್ರಕಾರಗಳಿಗೆ ಸ್ಪೂರ್ತಿಯೂ ಆಗಿದೆ. ಉದಾಹರಣೆಗೆ ಕನ್ನಡದಲ್ಲಿ ಅತ್ಯಂತ ದೊಡ್ಡ ಸಾಹಿತ್ಯ ಪ್ರಕಾರವಾದ ಯಕ್ಷಗಾನದ ಪ್ರಸಂಗಗಳು ಹೆಚ್ಚಾಗಿ ಕನ್ನಡದ ಕಾವ್ಯಗಳನ್ನೇ ಅವಲಂಬಿಸಿವೆ. ಆದರೆ ಅನೆಕ ಆಟ ಬಯಲಾಟ ಪ್ರದರ್ಶನದ ಮೂಲಕ ಯಕ್ಷಗಾನ ಸಾಹಿತ್ಯ ಇನ್ನೂ ಜನರನ್ನು ತಲುಪುತ್ತಿದೆ ತನ್ಮೂಲಕ ಕಾವ್ಯಗಳೂ ಜನರನ್ನು ತಲುಪುತ್ತಿವೆ. ಅದೇ ರೀತಿಯಲ್ಲಿ ನೇರವಾಗಿ ಕನ್ನಡದ ಕಾವ್ಯಗಳನ್ನು ಗಮಕದ ಮೂಲಕ ಅಸ್ವಾದಿಸುವವರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದೂ ನಮ್ಮ ಆಸೆ.
೫. ಪುರಾತನ ಭಾರತೀಯ ದರ್ಶನದಲ್ಲಿನ ಬೆಳಕು ಆಚಾರ ವಿಚಾರಗಳೇ ಕನ್ನಡ ಕಾವ್ಯಗಳಲ್ಲಿ ಜನಜೀವನಕ್ಕೆ ಅನ್ವಯವಾಗುವಂತೆ ಹೇಳಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತಾದ್ದೆ. ಆದರೆ ಕಾವ್ಯಮೀಮಾಂಸೆಯ ದೃಷ್ಟಿಯಿಂದ ನೋಡಿದರೂ ಕಾವ್ಯ ವಾಚನದಿಂದ ಆಗುವ ರಸ ನಿಷ್ಪತ್ತಿಯ ಮೂಲ ಉದ್ಧೇಶ ನಮ್ಮ ಚಾರಿತ್ರ್ಯ ಶುದ್ಧವಾಗಲಿ ಎನ್ನುವುದೇ ಆಗಿದೆ ಎಂದು ಪ್ರೊ ಮೈಸೂರು ಹಿರಿಯಣ್ಣರಂತವರು ಹೇಳಿದ್ದಾರೆ. ಹಾಗಾಗಿ ಕಾವ್ಯ ಸಾಹಿತ್ಯ ಮತ್ತು ಸತ್ಸಂಗದಿಂದ ಸದಾಚಾರ ಸದ್ಗುಣಗಳ ಪ್ರಸಾರವಾಗಲಿ, ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರೆಯಲಿ ಎಂಬ ಆಸೆಯೂ ಇದೆ.
ನಮ್ಮ ಕರೆಯನ್ನು ಮನ್ನಿಸಿ ಇಲ್ಲಿ ಸೇರಿರುವ ಎಲ್ಲ ಹಿರಿಯರು ಗಮಕಿಗಳು ವ್ಯಾಖ್ಯಾನಕಾರರು ಸಂಘಟಕರು ಮತ್ತು ಗಮಕದ ಅಭಿಮಾನಿಗಳಿಗೆ ಮತ್ತೊಮ್ಮೆ ಸ್ವಾಗತವನ್ನ ಬಯಸಿ ನಮ್ಮ ಎಲ್ಲ ಪ್ರಯತ್ನಕ್ಕೆ ಸಹಕಾರ ಮತ್ತು ಆಶೀರ್ವಾದ ಇರಲಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತ್ತಾ, ಗಮಕ ಕಲಾ ವೇದಿಕೆ ಉತ್ತರ ಅಮೇರಿಕಾ ಇದರ ಉಧ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆಯನ್ನು ತೆರವು ಮಾಡಿಕೊಡುತ್ತಾ ಇದ್ದೇನೆ. ನಮಸ್ಕಾರ.