ಎಲ್ಲರಿಗೂ ಆಶ್ಚರ್ಯ ಆಗುವ ರೀತಿಯಲ್ಲಿ ಒ೦ದು ಲೇಖನ ಪ್ರಕಟಗೊ೦ಡಿತ್ತು. ಅದರ ಪ್ರಕಾರ ಪೇಟೆಗಳಲ್ಲಿ ದೇವರಮೇಲಿನ ಭಕ್ತಿ ಹಳ್ಳಿಗಿ೦ತ ಹೆಚ್ಚು! ಅದೇನೆ ಇದ್ದರೂ, ಹಳ್ಳಿಗಳಲ್ಲಿ ಇ೦ದಿಗೂ ಹಬ್ಬದ ಸಡಗರ, ಚಟುವಟಿಕೆ ಹೆಚ್ಚು. ಅ ಆಚರಣೆ, ಚಟುವಟಿಕೆಗಳಲ್ಲಿ ಶಿಕ್ಷಣ, ಸ೦ಪ್ರದಾಯ, ಸ್ವಾರಸ್ಯ ನಾವು ಅ೦ದುಕೊ೦ಡಿದ್ದಕ್ಕಿ೦ತ ಹೇಚ್ಚೇ ಇದೆಯೋ ಅನ್ನಿಸುತ್ತದೆ. ನಮ್ಮೂರಿನಲ್ಲಿ ನಾನು ಸಣ್ಣಕಿದ್ದಾಗ ಚೌತಿ ಹಬ್ಬ ಹೇಗಿತ್ತು, ಅದರಿ೦ದ ನಾನು ಏನೇನು ಕಲಿತೆ ಅದರ ಸ್ವಾರಸ್ಯ ಏನು ಎ೦ದು ನೆನಪಿಸಿಕೊ೦ಡು ಹೇಳುತ್ತಾ ಹೋಗುತ್ತೇನೆ.
"ಮಾಣಿ ಎದ್ಯನಾ? ಗಣಪತಿ ತರವು ಸಾನ ಮಾಡ್ಕ್ಯ೦ಡು ಬಾರ, ಎ೦ಗಿನ್ನು ಎಷ್ಟು ಕೆಲಸಿದ್ದು ಇನ್ನೂ ಪ೦ಚ್ಗಿಜ್ಯಕ್ಕೆ ಬೆಲ್ಲ ಕಾಸ್ಯಾಗಲ್ಲೆ, ಏಳ! ಹೂ ಕೊಯ್ಯಿ ನಡಿ" ಹೀಗೆ ಅಮ್ಮನ ಆಜ್ಞೆ! "ಕೌಸಲ್ಯಾ ಸುಪ್ರಜಾರಾಮ" ಸುಪ್ರಭಾತದ ಅಮ್ಮನ ವರಸೆ. ಹಬ್ಬ ಶುರುವಾಗುವುದು ನಾನು ಎದ್ದ ಮೇಲಲ್ಲ, ಹಬ್ಬದ ದಿನವೂ ಅಲ್ಲ, ಹಬ್ಬಕ್ಕಿಂತ ಒಂದೆರಡುದಿನ ಮೊದಲೇ. ಅಲ್ಲಿ ಸೊನೆಗಾರ ಮೋಹಿನಿಯ ಗಂಡ ಜೇಡಿಮಣ್ಣಿನ ರವೆ ಉಂಡೆ ಮಾಡಿ ಅದಕ್ಕೆ ಗಣಪತಿ ರೂಪ ಕೊಡುವುದು ತಿಂಗಳುಗಟ್ಟಲೆ ಮೊದಲು. ಪುರ ನಮ್ಮೂರಿಂದ ಒಂದರ್ಧತಾಸಿನ ಹಾದಿ.ಅಲ್ಲಿ ಸೊನೆಗಾರರವನಿಗೆ ಗಣಪತಿಮಾಡಲು ವರ್ಷಾವರ್ಷ ಹೇಳುವುದೇನು ಬ್ಯಾಡ. ಹಬ್ಬಕ್ಕೆ ನಾಲ್ಕುದಿನ ಮೊದಲೇ ಗಣಪತಿ ಮನೆಗೇ ಬರುತ್ತದೆ. ಗಣಪತಿ ಜೊತೆಗೆ ಮಾಡಿ ತಂದವರಿಗೂ ಅಕ್ಕಿಕಾಯಿ ದಕ್ಷಿಣೆ. ಊನವಾಗದಂತೆ ನಮ್ಮಂತ ಪಿಳ್ಳೆಕಾಕರಿಂದ ತೊಂದರೆ ಆಗದಂತೆ ಗಣಪತಿಗೆ ಸುರಕ್ಷಿತವಾಗಿ ಜಗುಲಿ ಕಪಾಟಿನಲ್ಲಿ ತಪಸ್ಸು ಮಾಡಲು ವ್ಯವಸ್ಥೆ! ಹಬ್ಬದದಿನ ಈ ಅಮ್ಮನ ಸುಪ್ರಭಾತ ಗಣಪತಿತರಲಲ್ಲ, ಹೂ ಕೊಯ್ಯಲು. ಬರೀ ಹೂವಿದ್ದರೆ ಪೂಜೆ ಸಾಧ್ಯವೇ? "ಸಕ್ಕರೆ ನೊರೆಹಾಲು ತುಪ್ಪ ಕಜ್ಜಾಯ ಬೊಕ್ಕೆ ಹಲಸು ಮಾವು ಕದಲೀ ಫಲ" ಯಕ್ಷಗಾನದ ಪದ್ಯ ಕೇಳಿಲ್ಲವೇ ? ನಮ್ಮಮನೆಯಲ್ಲಿ ಕಬ್ಬು ಹಾಕುವುದು ಬಿಟ್ಟಮೇಲೆ ಮಂಕೋಡು ಬಸಪ್ಪನವರ ಕಬ್ಬಿನಗದ್ದೆಯಿ೦ದ ನಮ್ಮನೆ ಗಣಪತಿಗೆ ಎರಡು ಕಬ್ಬು, ತರಲು ಹೋದವರಿಗೆ ನಾಲ್ಕು! ಅಲ್ಲೇ ನಮ್ಮನೆ ತಳೇಬೈಲು ಹೊಸತೋಟದಿಂದ ಎರಡು ಎಳೆ ಬಾಳೆಗಿಡ, ನಾಲ್ಕು ಚಿಪ್ಪು ಬಾಳೆಹಣ್ಣು ಮತ್ತ ಊಟಕ್ಕೆ ಒಂದೈವತ್ತು ಕುಡಿಬಾಳೆ ಇವೆಲ್ಲ ಹಿಂದಿನದಿನವೇ ಬರಬೇಕು. ಹಿಂದಿನ ದಿನ ರಾತ್ರಿ ಮನೆಗೆ ಬಂದಾಗ ನಾವೇ ತಂದೆವೆಂಬ ಬಿಗುಮಾನ ಚೋಟು ಮೆಣಸಿನಕಾಯಿ ನನಗೆ, ತರುವವರೋ ದೊಡ್ಡವರು.
ನಮ್ಮೂರಲ್ಲಿ ಕರೆಂಟ್ ಇಲ್ಲದಿದ್ದಿರಬಹುದು ಆದರೆ ಬ್ಯಾಟರಿ ಸೆಲ್ ಇರಲಿಲ್ಲವೇ ? ಇತ್ತು, ಸೆಲ್ ಹೊಟ್ಟೆಗೆ ತುಂಬಿಕೊಂಡು, ಮಲಗಿಕೊ೦ಡೇ ಹಾಡುವ ಟೆಪ್ ರೆಕಾರ್ಡರ್ ಕೂಡ ಇತ್ತು. ಆದರೆ ಅದನ್ನು ಹಬ್ಬದ ದಿನ ಕೂಗಿಸುವ ವ್ಯವಧಾನ ಯಾರಿಗೂ ಇರುತ್ತಿರಲಿಲ್ಲ. ಫಿಲಿಪ್ಸ್ ರೇಡಿಯೋ ಮಾತ್ರ ಯಾವುದರ ಪರಿವೆಯಿಲ್ಲದೇ ೬.೫೫ ಕ್ಕೆ "ಇಯಂ ಆಕಾಶವಾಣಿ ಸಂಪ್ರತಿ ವಾರ್ತಾಂ ಶೃಯಂತಾಂ" ಎನ್ನುತಿದ್ದರೆ ತ್ವಾರಣ (ತೋರಣ) ಮಾಡುವರ್ಯಾರು ? ನಾವೇ, ಹನೂಮಾಂಶಸಂಭೂತರು! ಹೌದು ಮಾವಿನ ಮರಹತ್ತಿ ಮಾವಿನ ಕೊನಕಲು (ಚಂಡೆ) ಮುರಿದು ಸೊಣಬಿನಾರಿಗೆ ಎಲೆಮಡುಚಿ ಕಟ್ಟಿ ತೋರಣ ತಯಾರು ಮಾಡುವುದರಿಂದ ಅಫಿಸಿಯಲೀ ಹಬ್ಬ ಸುರು.
ನಿನ್ನೆ ತಂದ ಬಾಳೆಗಿಡ, ಕಬ್ಬಿನ ಗಿಡ ಎಲ್ಲಿ? ತಂದು, ಉಂಡು ಮಲಗಿ, ಈಗ ತೋರಣ ಕಟ್ಟಲಷ್ಟೇ ಏಳುವುದಾದರೆ ಕಷ್ಟವಲ್ಲ. ಆದರೆ ಮಧ್ಯರಾತ್ರಿವರೆಗೂ ಜಾಗರಣೆ ಆಗದಿದ್ದರೆ ಹಬ್ಬದದಿನ ಬೆಳಿಗ್ಗೆ ಏಳಿಸುವ ಪ್ರಮೇಯ ಇರುವುದಿಲ್ಲ. ಗಣಪತಿಗೆ ಮಂಟಪ ಕಟ್ಟದಿದ್ದರೆ ಹಬ್ಬ ಎಂತ ಮಣ್ಣು? ಯಾವಯಾವ ಬಣ್ಣದ ಸುನೇರಿ ಕಾಗದ ಬೇಕು ಏನ್ತಾನು ಎಲ್ಲ ಜೋಯ್ಸಣ್ಣಂಗೆ ಗೊತ್ತು. ಅವನೇ ಎಲ್ಲಪಟ್ಟಿ ಕೊಟ್ಟು ಹಬ್ಬದ ಸಂತೆ ದಿನವೇ ಸುನೇರಿ ಕಾಗದ, ಬಣ್ಣದಕಾಗದ ಇತ್ಯಾದಿ ಮನೆ ಬಂದಾಗಿರುತ್ತದೆ. ಎರಡು ಸಣ್ಣ ಅಡಿಕೆ ಎಳೆಯೋ ಅಥವಾ ಕೆತ್ತಿದ ದಬ್ಬೆಯೋ ತಯಾರು ಮಾಡಿದರೆ ಜೋಯಿಸಣ್ಣನ ಕೆಲಸ ಶುರು. ಮಂಟಪದ ಆರ್ಕಿಚಿಟೆಕ್ಟು ಜೋಯಿಸಣ್ಣ ಬರುತ್ತಿದ್ದಂತೇ ಕತ್ತರಿ ಮೈದಾಹಿಟ್ಟಿನ ಅಂಟು ಎಲ್ಲ ತಂದುಕೊಡುವ ಕೆಲಸ ಅಮ್ಮನದು. ಕತ್ತರಿ ಸಿಗದಲ್ಲಿಟ್ಟು ಬಯಿಸಿಕೊಳ್ಳುವುದು ನನ್ನ ಕೆಲಸ! ನಾನು ಜೋಯಿಸಣ್ಣನ ಅಸಿಸ್ಟೆಂಟು. ಸುಮಾರು ರಾತ್ರಿ ಒಂದು ಒಂದುವರೆಗೆ ಮಂಟಪ ತಯಾರು. ಗಣಪತಿಕೂರಿಸಲೆಂದೇ ಅಜ್ಜನಕಾಲದಿಂದ ಇದ್ದ ಒಂದು ಪೀಠಕ್ಕೆ ಬಣ್ಣಹಚ್ಚಿಸಿಕೊಳ್ಳುವ ಕ್ಷಣಿಕ ಸೌಭಾಗ್ಯ. ನಾಳೆ ಬೆಳಗಾದರೆ ಮೇಲ್ಮೆತ್ತು ಸೇರುವ ಈ ಸಣ್ಣಕುರ್ಚಿಗೆ ಮಧ್ಯರಾತ್ರಿ ಶೃಂಗಾರ ನೆಡೆಯುತ್ತಿತ್ತು. ಜೋಯಿಸಣ್ಣ ಮನೆಗೆ ಹೋಗುವವರೆಗೂ ಬ್ಯಾಟರಿ ಹೊಡೆದು ಹಾಸಿಗೆ ಮೇಲೆ ದುಪ್ಪನೆ ಬಿದ್ದ ಬಡಪಾಯಿಗೆ ಬೆಳಗಾಗುವುದರೊಳಗೆ ಅಮ್ಮನ ಸುಪ್ರಭಾತ. ಆಹಾ ಎಂತಾ ಸೊಗಸು, ಸ್ವಂತ ಸುಬ್ಬುಲಕ್ಷ್ಮಿಹಾಡಿದರು ಅಂತಹ ಆನಂದ ಸಿಕ್ಕುವುದಿಲ್ಲ ನೋಡಿ. ನಾನು ಸೇಡು ತೀರಿಸಿಕೊಳ್ಳದೇ ಬಿಟ್ಟವನಲ್ಲ. "ವರಗಳ ಕೋಡುಮಾತೆ ಕಂಚಿ ನಾರಾಣ ಸುತೇsssss ವರಗಳ ಕೊಡು ಮಾತೆ" (ಕಂಚಿ ನಾರಾಣ ಅಮ್ಮನ ಅಪ್ಪ, ನನ್ನ ಅಜ್ಜ!) ಎಂದು ಜಾನಪದಗೀತೆಯನ್ನೂ ಹಾಳುಮಾಡಿ ಅಮ್ಮನನ್ನೂ ರೇಗಿಸಿ ಓಡಿಹೋಗುತ್ತಿದ್ದುದುಂಟು.
ತೋರಣ ಒಂದೇ ಎರಡೆ? ಮೂರೇ ನಾಲ್ಕೆ? ಐದೇ ಆರೇ? ಸಾಕು ಸಾಕು ಎಂದು ಅಜ್ಜ ಹೇಳುವವರೆಗೂ ತೋರಣ ಮಾಡುವುದೇ ಮಾಡುವುದು. ಕೊಟ್ಟಿಗೆಗೆ ಎರಡು, ಹೊರಬಾಗಿಲಿಗೆ ಒಂದು, ಪ್ರಧಾನ ಬಾಗಿಲಿಗೆ ಒಂದು, ವಾಸ್ತು ಕಂಬಕ್ಕೆ ಒಂದು ಗಣಪತಿ ಮಂಟಪಕ್ಕೆ ಒಂದು. ಹಳೇ ಮನೆ ದೇವರಿಗೆ ಒಂದು. ದೀಪಾವಳಿ ಅಲ್ಲ ಬಚಾವ್! ಅದಕ್ಕೆ ಹಂಡ್ಯ, ಬಾವಿ ಬಂಕಕ್ಕೂ ಮಂಗನ ಬಳ್ಳಿ, ಕಾರೇ ಮುಳ್ಳು ಏನೇನೋ ಬೇಕು. ಅಪ್ಪ ದೇವರಗೂಡಿನ ಎದುರಿಗೆ ಹೊಡೆದ ಗಳಕ್ಕೆ (ರೀಪು) ಸಾಲಾಗಿ ಹಣ್ಣು ತರಕಾರಿ ನೇತುಹಾಕಿ ಆಗಿರುತ್ತಿತ್ತು. ಮುಳ್ಳು ಸೌತೆ, ಮಗೆ ಸೌತೆ, ಸೇಬು, ಕಿತ್ತಲೆ, ಹಿರಿಯಪ್ಪ ತಂದ ಮೂಸುಂಬಿ, ಜೋಳದ ಕುಂಡಿಗೆ, ತೆಂಗಿನಕಾಯಿ, ಬಾಳೆಹಣ್ಣು, ಹೀಗೆ ಮನೆಯಲ್ಲಿ ಬೆಳೆದ, ತಂದ ತರಕಾರಿ ಹಣ್ಣು ಹಂಪಲು ಇತ್ಯಾದಿ. ಇದಕ್ಕೆ ಪಲೋಳ್ಗೆ ಕಟ್ಟುವುದು ಅಂತ ಹೆಸರು (ಫಲಾವಳಿಗೆ). ಅಪ್ಪನಜೊತೆ ಪಲೋಳ್ಗೆ ಕಟ್ಟಿ ತೋರಣ ಕೈಗೆ ಸಿಕ್ಕಲ್ಲೆಲ್ಲಾ ಕಟ್ಟಿ ಬಿಗಿದು ಹೂ ಕೊಯ್ಯಲು ಭಟ ರೆಡಿ.
ಹೂ ಕೊಯ್ಯುವುದರಲ್ಲೇನು ವಿಶೇಷ? ಹೂ ಕೊಯ್ಯದಿದ್ದರೆ ನನಗೆ ಇಪ್ಪತ್ತೈದು ಜಾತಿ ಹೂವಿನ ಹೆಸರು ಎಲ್ಲಿ ಗೊತ್ತಿರುತಿತ್ತು! ಅದರಲ್ಲು ಆ ಆ ಕಾಲಕ್ಕೆ ಋತುಗಳಿಗೆ ಬಿಡುವ ಹೂಗಳು. ಗಣಪತಿ ಹಬ್ಬಕ್ಕೆ ವಿಶೇಷ ಕಳ್ಳಹೂ ಮತ್ತು ವಿಷ್ಣುಕಾಂತಿ. ಬೆಳಗ್ಗೆ ಮುಂಚೆ ಒಳ್ಳೆ ಇಬ್ಬನಿ, ತೆಳ್ಳಗೆ ಚಳಿ ಇರುವಾಗ ಬ್ಯಾಣಗಳಲ್ಲಿ (ಹುಲ್ಲುಗಾವಲು) ಸ್ವಲ್ಪ ಜಂಬಿಟ್ಟಿಗೆ (ಚೀರೆ) ಕಲ್ಲು ಇರುವಕಡೆ ಹುಡುಕುತ್ತ ಹೋಗಬೇಕು. ಕಡು ನೇರಳೆ ಕೆಂಪಿನ, ಬಟ್ಟಲು ಆಕೃತಿಯ ಹೂವು: ಕಳ್ಳಹೂ. ಅದರ ಹೆಸರು ಯಾಕೆ ಹಾಗೆ ಬಂತೂ ಗಣಪತಿಯನ್ನೇ ಕೇಳಬೇಕು! ವಿಷ್ಣುಕಾಂತಿಗೆ ಹೆಸರು ಹೇಗೆಬಂತು ಎನ್ನುವುದು ಅದನ್ನು ಹುಡುಕಲು ಕಲಿತಮೇಲೆ ಕೇಳೋಣ. ಆ ಹುಲ್ಲಿನ ಸಂದಿಯಲ್ಲಿ ವಿಷ್ಣುಕಾಂತಿಯನ್ನು ಹುಡುಕುವುದೇ ದೊಡ್ಡ ತಾಪತ್ರಯದ ಕೆಲಸ! ಸಣ್ಣ ಬಳ್ಳಿಯ ರೀತಿ ಇರುವ "ಹೂ" ಹೂವೇ ಅಲ್ಲ. ಅದು ಬಳ್ಳಿಯೇ. ತುಳಸಿ ಹೂವೇ? ಹಾಗೇ ಇದು. ಇಡೀ ಬಳ್ಳಿಗೆ ಬಳ್ಳಿಯೇ ಪೊಜೆಯ ಬಳಕೆಗೆ ಅರ್ಹ. ದೂರ್ವೆ ತುಳಸಿ ಸಹಸ್ರನಾಮ ಪೂಜೆಗೆ ಬೇಕಾಗುವಷ್ಟು ಕೊಯ್ದರೆ ಆಯಿತು. ಇನ್ನೇನು ಹೂಕೊಯ್ಯುವುದು ಮುಗಿದೇ ಹೋಯಿತು. ಹೌದು ಉಳಿದ ಮಲ್ಲಿಗೆ, ಕರವೇರು (ಕರವೀರ), ಗ್ವಾಟಲೆ, ತುಂಬೆ, ಕಲ್ತುಂಬೆ, ಕಣಗಲು, ನಂಜುಗ್ವಾಟಲೆ, ಶಂಖಪುಷ್ಫ, ದಾಸವಾಳ, ಇನ್ನೇನೋ ಹೆಸರುಮರೆತು ಹೋಗಿರುವ ಹೂವೆಲ್ಲಾ ಕೊಯ್ದಾದರೆ ಮುಗಿದಂತೇ ಕಥೆ!! ಇನ್ನೂ ಪಟಾಕಿ ಬಿಸಿ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಬಚ್ಚಲುಮನೆ ಒಲೆ ಮೇಲೆ ನಿನ್ನೆಯೇ ಇಟ್ಟಾಗಿದೆ! ಗಣಪತಿ ಯಾರಿಗೆ ಯಾವ ವರ ಕೊಡದಿದ್ದರೂ ಅಡ್ಡಿಯಿಲ್ಲ, ನನ್ನ ಪಟಾಕಿ ಟುಸ್ ಅನ್ನದಿದ್ದಂತೆ ಮಾಡಿದರೆ ಸಾಕು. ಇಲ್ಲದಿದ್ದರೆ ಗಣಪತಿಗೆ ಪಿಚ್ಚಹೂವು, ಹೂಸುಗಬ್ಬೇ ಗತಿ! ವೀಳ್ಯದೆಲೆ ಕೊಯ್ಯುವುದು ಸೋಸುವುದು, ತಬಕಿಗೆ ಎಲೆ ಅಡಿಕೆ ಕೊಬ್ಬರಿ ಅಡ್ಡಗತ್ತರಿ ಹಾಕಿಡುವುದು, ಸುಣ್ಣಕ್ಕೆ ನೀರು, ಇವೆಲ್ಲ ಜೋಯ್ಸಣ್ಣ ಇದ್ದರೆ ಅವನದೇ ಇಲ್ಲದಿದ್ದರೆ ನಾನು ಮಾಡಬೇಕು.
ಕೆಲವು ಊರಲ್ಲಿ ಇಲಿ ಪಂಚಮಿ ಆಚರಿಸುತ್ತಾರಂತೆ. ಇಲಿಗೆ, ಅಪ್ಪಾ ನಮ್ಮ ಗದ್ದೆ, ಹೊಮ್ಮಂಡ ತಿಂದು ಹಾಳುಮಾಡಬೇಡಪ್ಪಾ ಎಂದು ಬೇಡಿ ರೈತರು ಹಬ್ಬದ ತಿನಿಸನ್ನು ಇಲಿದರ (ಇಲಿದ್ವಾರ) ಇದ್ದಲ್ಲಿ ಹೋಗಿ ಇಟ್ಟು ಬರುತ್ತಾರಂತೆ. ಇಲಿ ಗಣಪನ ವಾಹನವಲ್ಲವೇ? ಎಂತಹಾ ಸಂಬಂಧ ನೋಡಿ. ಈ ಮುಗ್ಧತೆ ನಮ್ಮಿಂದ ದೂರವಾಗದಿದ್ದರೆ ಎಷ್ಟು ಚಂದ ಅನಿಸುತ್ತದೆ ಒಮ್ಮೊಮ್ಮೆ.
ಬಳಪದ ಕಡ್ಡಿಯಲ್ಲಿ ಬರೆದರೆ ಪಾಟಿ ಅಳಿಸಲು ಸುಲಭ. ಬೆಣ್ಣೆ ಕಡ್ಡಿಯಲ್ಲಿ ಬರೆದರೆ ಅಳಿಸಲು ನೀರೋ ಅಥವಾ ಗೌರಿ ದಂಟೋ ಬೇಕು! ಗೌರಿ ಪೂಜೆಯ ನೆನಪಿಗೋ ಎನ್ನುವಂತೆ ಅದೇಸಮಯಕ್ಕೆ ಹಾದಿ ಅಕ್ಕಪಕ್ಕ ಬೆಳೆಯುವ ಹೂವಿಗೆ ಗೌರಿಹೂ ಎಂದುಕರೆಯುವುದು. ಪೂಜೆಗೆಬಳಸುವುದೂ ಇದೆ. ನಮಗೆ ಹುಡುಗರಿಗೋ ಗೌರಿದಂಟು ಪಾಟಿ ಅಳಿಸಲು ಸಾಕು. ಹಬ್ಬದದಿನ ಪಾಟಿಯೂ ಬೇಡ ಕಡ್ಡಿಯೂ ಬೇಡ. ಅವಕ್ಕೆಲ್ಲ ನಮ್ಮಂತೆ ರಜಾ. ಗೌರಿ ಹಬ್ಬ ಗಣಪತಿ ಹಬ್ಬದ ಹಿಂದಿನ ದಿನ. ಗೌರಿ ಹಬ್ಬವನ್ನು ಕೆಲವು ಜಾತಿಯವರು ಮಾತ್ರ ಆಚರಿಸುತ್ತಾರೆ.
ಇಷ್ಟೆಲ್ಲಾ ಓದಿ ನಿಮಗೂ ಹಸಿವಾಗಿರಬಹುದು. ಆದರೆ ನೋಡಿ ಇಷ್ಟು ಹೂ ಕೊಯ್ದ ನನಗೆ ಕಡುಬು ತಿನ್ನಲು ಬಿಡುವುದು ಗಣಪತಿಗೆ ನೈವೇದ್ಯ ಆದಮೇಲೇ. ಮುಸರೆ, ಅನ್ನ ಅದು ಇದು ತಿನ್ನುವಂತಿಲ್ಲ. ಇವತ್ತು ಚೌತಿ ಹಬ್ಬ! ಏನೋ ನಾಲ್ಕು ಅಳಕಾಳು (ಅರಳು ಕಾಳು) ನಲವತ್ತು ಬಾರಿ ತಿಂದು ನೈವೇದ್ಯವಾಗುವವರೆಗೂ ಕಾಯಬೇಕು. ನಾಳೆ ನಾಡಿದ್ದು ಅಡ್ಡಿಯಿಲ್ಲ. ನಾಡಿದ್ದು ಹಬ್ಬದ ಇಲಾಡಿ (ರಜಾ). ಇಲಾಡಿದಿನ ಯಾರೂ ಕೆಲಸಕ್ಕೆ ಹೋಗುವುದಿಲ್ಲ. ಹಬ್ಬದಮರುದಿನ ನೆಂಟರು ಆಳಿಯಂದಿರು ಬಂದು ಹೋಗುವದಿನ. ಗಣಪತಿಯ ನೈವೇದ್ಯದ ನೆಪದಲ್ಲಿ ಮಾಡಿದ್ದೆಲ್ಲಾ ಮುಕ್ಕಬಹುದು!
Ragu, ninna ee post odi yestella hale nenapu bantu gottiddaaa? Really nostalgic moments! baraddu ashte chennaagiddu!! foto antu sikkapatte khushi tantu...thanks son! god bless you!!
ReplyDeleteSumana chikki!
Thanks Chikki
ReplyDelete