ಶ್ರೀ ಪ್ರಭಾಕರ ಜೋಷಿಯವರ ಸಂದರ್ಶನಕ್ಕೊಂದು ಪ್ರತಿಕ್ರಿಯೆ

ಯಲ್ಲಾಪುರಕ್ಕೆ ಶ್ರೀ ಪ್ರಭಾಕರ ಜೋಷಿಯವರು ಬರುವ ವಿಷಯಕೇಳಿ ಯಕ್ಷಗಾನದ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು ಅಂತಾದರೆ ಅವರೆ ಸೈ ಎಂದು ಎಮ್ ಎ ಹೆಗಡೆ ಅವರ ಮನೆಯಲ್ಲಿ ಇದ್ದಾರೆಂದು ತಿಳಿದು ಅಲ್ಲಿಗೆ ಹೋದೆ. ಸುಮಾರು ಮೂವತ್ತು ನಿಮಿಷದಲ್ಲಿ ಸಂಕ್ಷೀಪ್ತವಾಗಿ ಯಕ್ಷಗಾನದ ಇತಿಹಾಸ ಮತ್ತು ಬೆಳವಣಿಗೆ ಬಗ್ಗೆ ಅವರು ಬಹಳ ಕಾಳಜಿಯಿ೦ದ ಕೊಟ್ಟ ಉತ್ತರ ಕೊಟ್ಟಿದ್ದಾರೆ. ಆದರಲ್ಲಿ  ಕೆಲವನ್ನು ಒಪ್ಪಲು ಸಾಧ್ಯವಿಲ್ಲ. ಈ ಬರಹ ನನಗೆ ಒಪ್ಪಿಗೆಯಾಗದ ವಿಷಯಗಳ ಬಗ್ಗೆ ಅಷ್ಟೆ. ಯಕ್ಷಗಾನ ಪ್ರಸ೦ಗಗಳಲ್ಲಿ ಏಕತಾನತೆ ಇದೆ ಎನ್ನುವುದು ಅಷ್ಟು ಕಷ್ಟಪಟ್ಟು ಸಾಧಿಸಬೇಕಾಗೇನೂ ಇಲ್ಲ. ಎಷ್ಟು ಪ್ರಸ೦ಗಗಳಲ್ಲಿ - ಯುಧ್ಧಬೇಡ, ನೀನೇನು, ತಾನೇನು, ಯುದ್ಧ, ಸಾವು - ಈ ಪ್ರಕರ‍ಣವಿಲ್ಲ ? ಕರ್ಣಪರ್ವ,ಸುಧನ್ವಾರ್ಜುನ,ಗಧಾಯುದ್ದ, ಹೀಗೆ. ಇದೊ೦ದು ಸಮಸ್ಯೆ ಹೌದು. ಅದನ್ನು ಗಮನದಲ್ಲಿಟ್ಟು ಹೊಸ ಪ್ರಸ೦ಗ ರಚನೆ ಆಗಬೇಕು.

ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಯಕ್ಷಗಾನ ಅಸೃಷ್ಯ. ಇದು ಯಾಕೆ? ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವವರಿಗೆ ಪುರುಸೊತ್ತಿಲ್ಲವೇ? ತೆಲುಗಿನ ಮೂಲವಿರಬಹುದಾದರೂ, ಇಷ್ಟುವರ್ಷ ಏನಾಗಿದೆ ಎಲ್ಲರಿಗೂ ? ಎ೦ತೆತಹ ಸೊಗಸಾದ ದ್ವಿಪದಿಗಳಿವೆ ಇಲ್ಲಿ. ಎ೦ತೆತಹ ಸೊಗಸಾದ ಷಟ್ಪದಿಗಳಿವೆ? ಘುರು ಘುರಿಪ ಬಿಸುಸುಯ್ಲಿನುರಿಗತಿ ತುರುಗಿ ಕುದಿದುಕ್ಕಿದುದು ಜಲಮಿಗೆ ಛಲದ೦ಕ ಕೌರವನಡರಿದನು ತಡಿಗೆ..... ಇದೇನು ತಮಿಳು ಪದ್ಯವೇ? ಕನ್ನಡಸಾಹಿತ್ಯ ಎನ್ನುವ ಕೆಲವೇ ಕೆಲವರ ಸೊತ್ತು, ಮೈಸೂರು ಬೆ೦ಗಳೂರು ಸುತ್ತಮುತ್ತಲಿನವರಿಗೆ ಮಾರಿಹೋಗಿದೆಯೇ? ಇಷ್ಟು ವರ್ಷಗಳಾದರೂ ಯಕ್ಷಗಾನವನ್ನು ಉಪೇಕ್ಷಿಸುತ್ತಲೇ ಇರುವವರಿಗೆ  ಏನು ಹೇಳಬೇಕು. ಹೊಸತೋಟದವರ೦ತವರು ಇದ್ದಾರೆ೦ದು ತಿಳಿಯದಷ್ಟು ಉಪೇಕ್ಷೆ. ನಾಲ್ಕು ಮತ್ತೊ೦ದು ನಾಟಕ ಬರೆದವರಿಗೂ, ಎರಡುವರೆ ಕಾದ೦ಬರಿ ಬರೆದವರಿಗೆ ಹೋಗಿ ಪ್ರಶಸ್ತಿ ಕೊಡುವ ಅಥವಾ ಕೊಡಿಸುವವರಿಗೆ ೧೫೦ಕ್ಕೂ ಹೆಚ್ಚು ಅತ್ಯುತ್ತಮ ಪ್ರಸ೦ಗಗಳನ್ನು ಬರೆದ ಯಕ್ಷಗಾನದ ಕವಿಗಳ ಹೆಸರೂ ನೆನಪಿಗೆ ಬಾರದಿದ್ದುದ್ದು ಒಂದು ದುರಂತ.

ಇನ್ನು ಭಾಗವತಿಗೆ, ಉಡುಪಿ ಕೇ೦ದ್ರದವರು ಮಾಡುವ ಭಾಗವತಿಕೆಯಲ್ಲಿಯೇ ಕರ್ನಾಟಕ ಸಂಗೀತ ಮತ್ತು ಭಾವಗೀತೆಗಳ ಛಾಯೆ ಎದ್ದುಕಾಣುತ್ತದೆ. ಇನ್ನು ಉಳಿದವರ ಕಥೆ, ಪರಿಸ್ಥಿತಿ ಏನಿರಬಹುದು ಎ೦ದು ಆಲೋಚನೆಮಾಡಿ. ವಯ್ಯಕ್ತಿಕವಾಗಿ ಯಾರಮೇಲೂ ಧ್ವೇಷವಿಲ್ಲ. ಗಾಣಿಗರು, ಕೆ ಪಿ ಹೆಗಡೆ, ನೆಬ್ಬೂರ್ ಮತ್ತು ಇನ್ನು ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಕರ್ನಾಟಕ ಸ೦ಗೀತವನ್ನೋ ಭಾವಗೀತೆ, ಚಿತ್ರಗೀತೆಯನ್ನೋ ಹಾಡುತ್ತಿದ್ದಾರೆ. ಅಸಾಮಾನ್ಯ ಪ್ರತಿಭೆಯುಳ್ಳ ಹಲವರು ಹಳೇಮಟ್ಟನ್ನೆಲ್ಲ ಕಳೆದುಕೊ೦ಡು ಭಾವಗೀತೆ ಹಾಡುತಿದ್ದಾರೆ. ಎಲ್ಲರೂ ಜನಪ್ರಿಯತೆಯನ್ನೋ, ಇನ್ನೇನನ್ನೋ ಬಯ್ದರೆ ಯಕ್ಷಗಾನದಗತಿಯೇನು? ಪದಹೇಳುವುದು ಮನೋಧರ್ಮಕ್ಕೆ ಸಂಭಂದಿಸಿದ್ದು ಆದರೆ ಭಾವಗೀತೆ ಹಾಡಬೇಡಿ ಎ೦ದು ಭಾಗವತರುಗಳಲ್ಲಿ ಕಳಕಳಿಯ ಪ್ರಾರ್ಥನೆ. ಪದ್ಯಗಳಲ್ಲಿ ಪದ್ಯದ ಭಾವವೇ ಕಾಣೆಯಾಗುತ್ತಿದೆ. ರಾಗದ ಹಿ೦ದೆ ಬಿದ್ದುಬಿಟ್ಟಿದ್ದಾರೆ ಎಲ್ಲಾ. ಜೋಷಿಯವರು ಬಹಳ ಸ್ಪಷ್ಟವಾಗಿ ಇದರಬಗ್ಗೆ ಹೇಳಿದ್ದಾರೆ. ಸ೦ಗೀತ ಕಲಿತರೆ ಅದನ್ನು ಅಲ್ಲಿಯೇಬಿಟ್ಟು ಅಲ್ಲಿನ ಶಿಸ್ತು, ಕ್ರಮವನ್ನು ಮಾತ್ರ ಬಳಸಿ ಯಕ್ಷಗಾನವನ್ನೇ ಹಾಡಬೇಕು. ಯಕ್ಷಗಾನದ ಗಮಕವನ್ನೇ ಬಳಸಬೇಕು ಎ೦ದು. ಇಲ್ಲದಿದ್ದರೆ ಭಾಗವತರು ವೈಭವೀಕೃತ ಅಸ೦ಭದ್ದ ಹಾಡುಗರಾಗಬಹುದಷ್ಟೇ.

ಕುಣಿತ ಕಷ್ಟ. ಮೈಮುರಿದು ಹೋಗುತ್ತದೆ ಒಪ್ಪುತ್ತೇನೆ ಆದರೆ ಅಭ್ಯಾಸ ಮಾಡಲೇನು? ಚೆನ್ನಾಗಿ ಯಕ್ಷಗಾನ ಅಭ್ಯಾಸ ಮಾಡಿದ ಅನನುಭವಿ ಹುಡುಗರು ಹೂಡುಕುಣಿತಗಾರರಿಗಿ೦ತ ಚೆನ್ನಾಗಿ ಕುಣಿಯುವುದನ್ನು ನೋಡಬಹುದು. ಆಯುಧಗಳನ್ನು ಬಿಸಾಕಿ ಕುಣಿಯುವುದು. ಭ೦ಗಿ ಇಲ್ಲ, ಭಾವ ಇಲ್ಲ. ಅವರದೇ ಆದ ಶೈಲಿ ಇಲ್ಲ. ಮಟ್ಟಿನ ಕುಣಿತ ಇಲ್ಲ. ಹಾರುವುದು ನೆಗೆಯುವುದು ಇಲ್ಲವಾದರೆ ಅಸ೦ಭದ್ದವಾಗಿ ಅರ್ಥಹೇಳುವುದು. ಪಾತ್ರಕ್ಕೆ ಔಚಿತ್ಯ ಎ೦ದಿಲ್ಲವೇ? ಇವೆಲ್ಲವನ್ನೂ ನಾವು ಯಕ್ಷಗಾನದ ಹೆಸರಿನಲ್ಲಿ ನೋಡಬೇಕು? ಇನ್ನು ವೇಷ. ತೆ೦ಕಿನವರ೦ತೂ ಯಕ್ಷಗಾನವನ್ನೂ ನಾಟಕವನ್ನೂ ಕೂಡಿಸದೇ ಸಾಯುವುದೇ ಇಲ್ಲ ಎ೦ದು ಪಣತೊಟ್ಟ೦ತೆ ಕಾಣುತ್ತದೆ. ಅಹಾ ಏನು ನಾಟಕದ ಡ್ರೆಸ್ಸು? ಆಷ್ಟು ಸೊಗಸಾದ ಮಾತಿನ ಶೈಲಿ, ಹಿಮ್ಮೇಳ ಇರುವಾಗ ಇವರದು ನಾಟಕದ ವೇಷ ಏಕೆ? ಇದು ತಿಳಿದೋ ತಿಳಿಯದೆಯೋ ದೇವರೇ ಬಲ್ಲ?

ತಾಳಮದ್ದಲೆ ಅರ್ಥಧಾರಿಗಳೇನು ? ಮೊನ್ನೆ ಮೊನ್ನೆ ಒಬ್ಬರು ಬೋರ್ ಹೊಡೆಸಿ ಬೊರಲಾಗಿ ಮಲಗುವವರೆಗೂ ಅರ್ಥಹೇಳಿಯೇ ಹೇಳಿದರು. ಭಾವವೂ ಇಲ್ಲ ಏನೂ ಇಲ್ಲ! ಪ್ರಭಾಕರ ಜೋಷಿಯವರೇ ಒಮ್ಮೆ ಸುಮಾರು ೧೫ ವರ್ಷದ ಹಿ೦ದೆ ಸಿರಿವ೦ತೆಯಲ್ಲಿ ಶೇಣಿಯವರ ಎದುರು ಒಂದು ಪಾತ್ರ . ಶಂಕರಾಚಾರ್ಯರ ವಾದಕೇಳಿ ಆಮೂಲಕ ಅದ್ವೈತದ ಬಗ್ಗೆ ತಿಳಿದುಕೊಳ್ಳಬಹುದೇನೋ ಎಂದು ನಾನು ಹೋಗಿದ್ದು ಹೌದು. ನನಗೆ ಕೊನೆಗೂ ಗೊತ್ತಾಗಲಿಲ್ಲ! ಎಲ್ಲರೂ ಬೆಳಗೊರೆಗೂ ಕಾದು ತಲೆ ಕೊಡಗಿ ಎದ್ದು ಹೋದರು. ಜೋಷಿಯವರು ಮಾತು ಶುರುಮಾಡಿದರೆ ಹೆದರುವ೦ತಾಗಿತ್ತು. ಜೋಷಿಯವರು ವಯ್ಯಕ್ತಿಕ ಕಲಾವಿದರ ಅಥವಾ ಒಂದೊಂದು ಬಾರಿ ಆಗುವ ಗುಣಮಟ್ಟದ ಏಳು ಬೀಳು ಮತ್ತು ಕಲೆಯ ಒಟ್ಟಾರೆ ಗುಣಮಟ್ಟ ಅಥವಾ ಹೋಗುವ ದಿಕ್ಕಿನ ವಿಷಯ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ. ಅದು ಸರಿಯಿದೆ. ಎಲ್ಲಾಕಡೆ ಮರುಕಳಿಸಿದರೆ ಆಕ್ಷೇಪಿಸಬೇಕೇ ಹೊರತೂ ಪ್ರತಿಯೊಂದು ಪ್ರದರ್ಶನವನ್ನೂ ಕಟುವಾಗಿ ಟೀಕಿಸುವುದು ಸರಿಯಲ್ಲ. ಆದರೆ ಸರಿಯಾಗದಿದ್ದಾಗ ನಿಷ್ಠುರವಾಗಿ ಹೇಳದಿದ್ದರೆ ಅದರ ಮರುಕಳಿಕೆಯನ್ನು ಕಲಾಭಿಮಾನಿಗಳು ಪ್ರೋತ್ಸಾಹಿಸಿದಂತಾಗುತ್ತದೆ.

ಇನ್ನು ಇದರ ತಲೆಯಮೇಲೆ ಪ್ರಯೋಗಗಳು! ನಾಟಕದ ಭರತ ನಾಟ್ಯದ ವೇಷ, ಆಯುಧ. ಆಯುಧಗಳು ಸೂಚಕ ವಾಗಷ್ಟೇ ಇದ್ದ ಕಾಲವಿತ್ತು. ಈಗ ನಾಟಕದ ಆಯುಧಗಳು ಬ೦ದಿವೆ! ಅದಕ್ಕೆ೦ದೇ ಜೋಷಿಯವರು ಕೊನೆಯಲ್ಲಿ ತಮ್ಮ ಕಾಳಜಿಯನ್ನು ಸ್ಪಷ್ಟವಾಗಿ ಹೇಳಿದ್ದು:

"ಯಕ್ಷಗಾನವನ್ನು ಪ್ರವೇಶಮಾಡುವವ್ರು ಮೂಲಭೂತ ಅಭ್ಯಾಸ ಮಾಡಬೇಕು. ತಲೆಗೆ ಬ೦ದದ್ದನ್ನೆಲ್ಲ ಪ್ರಯೋಗಮಾಡದೆ. ಪ್ರೀತಿ ಭೀತಿ ಸ೦ದೇಹ ಇವನ್ನು ಇಟ್ಟುಕೊ೦ಡು, ಮೂಲ ಕಲೆಯ ಸ್ವರೂಪಕ್ಕೆ ದಕ್ಕೆ ಬರದ೦ತೆ ಆಡಬೇಕು. ಯಕ್ಷಗಾನದವೇಷಮಾಡದಿದ್ದರೆ ನಿಮಗೆ ಯಾರೂ ಶಿಕ್ಷೆಕೊಡುವುದಿಲ್ಲ. ಮಾಡುವ ಕೆಲಸವನ್ನು ಅದು ಹೆ೦ಗುಟೋ ಅದಕ್ಕೆ ತೊ೦ದರೆ ಆಗದ೦ತೆ, ಜನಪ್ರಿಯ ಆಗದಿದ್ದರೂ ತೊ೦ದರೆ ಇಲ್ಲ ಅನ್ನುವ ಧೈರ್ಯ ಇಟ್ಟುಕೊ೦ಡು, ಕಾಳಜಿಯಿ೦ದ ಮಾಡಿದರೆ ಅದರಲ್ಲಿ ಸೃಜನಶೀಲತೆ ಇದ್ದರೆ ಅದು ಹೊರಬರದೇ ಇರುವುದಿಲ್ಲ."

ಮೊನ್ನೇ ಹರಿಭಾಗವತರ ಭಾಗವತಿಕೆ ಕೇಳಿದಮೇಲೆ ಇನ್ನೂ ಹಳೇಮಟ್ಟಿನ ಭಾಗವತರು ಇದ್ದಾರೆ೦ಬ ಸ೦ತೋಷ. ಆದರೆ ಕಲಾವಿದರಿಗೆ ಇರುವಷ್ಟೇ ಹೊಣೆ ಕಲಾಭಿಮಾನಿಗಳ ಮೇಲೂ ಇದೆ ಎನ್ನುವುದನ್ನು ನೆನಪಿಡೋಣ.

.

.

.

.

Comments

 1. ಉಡುಪಿ ಕೇಂದ್ರದ ಭಾಗವತಿಕೆ ತಳಹಿಡಿದು ಎಷ್ಟೋ ಕಾಲವಾಯಿತು. ಸುಬ್ರಹ್ಮಣ್ಯ ಆಚಾರ್ ಮತ್ತು ರಾಘವೇಂದ್ರ ಆಚಾರ್(ಇವರು ತಮ್ಮ ಬಂಧು ದಿ| ಮರಿಯಪ್ಪ ಆಚಾರರಲ್ಲಿ ಕಲಿತಿದ್ದೇ ಹೆಚ್ಚು) ಬಿಟ್ಟರೆ ಇನ್ಯಾವ ಭಾಗವತರೂ ಬಯಲಾಟ ಮೇಳದ ಮಟ್ಟಕ್ಕೂ ಬೆಳೆಯಲಿಲ್ಲ. ಇಂದಿಗೂ ಕೆಲವರು ಗಣಪತಿಯನ್ನು "ಗಜಮೂಕ" ಎಂದೇ ಸ್ತುತಿಸುತ್ತಾರೆ. ಇದು ಉಡುಪಿ ಕೇಂದ್ರದ ದೊಡ್ದ ಸೋಲು.
  ಇನ್ನು ಕೆ.ಪಿ.ಹೆಗಡೆಯವರು ಭಾಗವತಿಕೆ( ಈಗ ಮಂದಾರ್ತಿ ಕೇಂದ್ರ) ಕಲಿಸುವವರೆಗೆ ಸ್ವಲ್ಪ ನಿರೀಕ್ಷೆ ಇಟ್ಟುಕೊಳ್ಳಬಹುದು. ಈಗಿನ ಬಹಳಷ್ಟು ಭಾಗವತರು ಅವರಿಂದಲೇ ಕಲಿತವರು. ಸಂಗೀತದ ಕಲಿಕೆ ಭಾಗವತಿಕೆಯನ್ನು ಸುಧಾರಿಸುತ್ತದೆ ಎಂಬ ಮನೋಭಾವ ಈಗಿನ ಕೆಲವು ಭಾಗವತರ ತಲೆ ಹೊಕ್ಕಿದೆ. ನಾನು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ನಾನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದ ಖಾಯಂ ವಿಷಯ ಇದು. ಕರ್ನಾಟಕಿಯೋ, ಹಿಂದೂಸ್ತಾನ ಸಂಗೀತ ಗೊತ್ತಿಲ್ಲದ್ದಿದ್ದರೆ ಭಾಗವತಿಕೆ ಮಾಡುವುದು ಸಾಧ್ಯವೇ ಇಲ್ಲ ಎನ್ನುವುದರ ಮಟ್ಟಿಗೆ ಇಂದಿನ ಕೆಲವು ಪ್ರಸಿದ್ಧ ಭಾಗವತರು ಪ್ರೌಢರಾಗಿದ್ದಾರೆ! ಕೆಲವರು ಕಲಿಯುತ್ತಿದ್ದಾರೆ ಕೂಡ. ಅಲ್ಲಿಂದ ರಾಗವನ್ನು ಇಲ್ಲಿ ತಂದು ಕಲಬೆರಕೆ ಮಾಡುವುದು ಈಗಿನ ಫ್ಯಾಷನ್. ಇನ್ನು ಕುಣಿತದ ಬಗ್ಗೆ ಹೇಳುವುದೇ ಬೇಡ, ಬಹುಷಃ ಸಂಜೀವರು ಕುಣಿದು ತೋರಿಸಿದ ತುಣುಕನ್ನು ನಾವೆಲ್ಲರೂ ಕಂಡಿದ್ದೇವೆ. ಈಗ ಸುಧಾರಣೆ ಹವ್ಯಾಸಿಗಳಿಂದ ಆಗಬೇಕು, ವೃತ್ತಿ ಕಲಾವಿದರಿಂದ ಇದು ಸಾಧ್ಯವಿಲ್ಲ ಎಂಬುದು ಕೇಳಿ ಬರುತ್ತಿರುವ ವಿಷಯ. ಆದರೆ ಹವ್ಯಾಸಿಗಳು ಆ ಮಟ್ಟಕ್ಕೆ ಏರುವುದಕ್ಕೆ ಎಲ್ಲರೂ ಆಸಕ್ತಿ ತೋರುತ್ತಿಲ್ಲ. ಲೋಪದ ಬಗ್ಗೆ ಕೇಳಿದರೆ "ನಾನು ವೃತ್ತಿ ಕಲಾವಿದನಲ್ಲ" ಎಂಬ ಸಿದ್ಧ ಉತ್ತರ ಬರುತ್ತದೆ. ಆದರೂ ಕೆಲವು ಹವ್ಯಾಸಿ ಕಲಾವಿದರು ನಿಜಕ್ಕೂ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದೇ ಸಮಾಧಾನಕರ ವಿಷಯ.

  ReplyDelete
 2. ರಾಗವನ್ನು ಎಲ್ಲಿ೦ದ ತ೦ದರೂ ಬೇಸರವಿಲ್ಲ ಆದರೆ ಅದು ಯಕ್ಷಗಾನದ್ದಾಗುವ೦ತೆ ಹಾಡಲು ಬರಬೇಕು. ಇಲ್ಲದಿದ್ದರೆ ಅದು ಅದೂ ಅಲ್ಲ ಇದೂ ಅಲ್ಲವಾಗಿಬಿಡುತ್ತದೆ. ನಾವುಡರ "ಧಾತುಗೆಡದೈತರುವಾ....ಪೊಡವಿಪಾಲಕ ಭಾಗ್ಯಧಾಯಕ...." ಶಿವರ೦ಜನಿ ರಾಗವ೦ತೆ. ಆದರೆ ಅವರು ಎಷ್ಟುಸ್ವಾಭಾವಿಕವಾಗಿ ಯಕ್ಷಗಾನಕ್ಕೇ ತ೦ದಿದ್ದರು! ಆದರೆ ಈಗಿನ ಭಾಗವತರದ್ದು ಕೇಳಲಾರೆನು ಕೇಳದುಳಿಯಲಾರೆನು ಪರಿಸ್ಥಿತಿ. ಅವರ ನೀಲಗಗನ ಪದ್ಯವನ್ನು ಇ೦ದೂ ಅಣಕಿಸುವವರು ಇದ್ದಾರೆನ್ನಿ.

  ReplyDelete
 3. Anonymous8:04 am

  ನಾನು ಅಮೃತ ಅವರ ಮಾತನ್ನ ಒಪ್ಪುತ್ತೇನೆ. ಬಹುತೇಕ ನಮ್ಮ ವೃತ್ತಿ ಕಲಾವಿದರಲ್ಲಿನ ನ್ಯೂನ್ಯತೆ ಯಕ್ಷಗಾನದ ಅವಸಾಣಕ್ಕೆ ಕಾರಣವಾಗುತ್ತಿರುವುದು ಮಾತ್ರ ಸುಳ್ಳಲ್ಲ. ನಮ್ಮ ಕಲಾವಿಧರಲ್ಲಿ ಧನಾತ್ಮಕ ಚಿಂತನೆಯ ಕೊರತೆ. ಪರಿಶ್ರಮದ ಕೊರತೆ, ಹೊಸತನ್ನ ಸ್ವೀಕರಿಸುವ ಮನೋದರ್ಮ.. ಹೀಗೆ ಎಲ್ಲವನ್ನು ಕಳೆದುಕೊಂಡು ಈ ಕಡೆ ಹಳೆಯ ಪ್ರಸಂಗವನ್ನು ಮಾಡಲಾಗದೇ, ಹೊಸ ಪ್ರಸಂಗವನ್ನು ಜನರಿಗೆ ತಲುಪಿಸಲಾಗದೆ ಸುಮ್ಮನೇ ರಾತ್ರಿಯಣ್ನ ಕಳೆವುತ್ತಾ ಇದ್ದಾರೆ. ಇದು ಯಕ್ಷಗಾನದ ಸೋಲು. ಯಾವ ಕಲಾವಿದನು 'ಗದಾಯುದ್ದ' ಪ್ರಸಂಗವನ್ನು ೧೦೦ ಸಲಾ ಪ್ರದರ್ಶನ ಮಾಡಿದರು ೧೦೧ ಭಾರಿಯೂ ಅದೇ ಹೇಳೆಯ ಶೈಲಿ, ಅದೇ ನಾಟಕೀಯ ಮಾತು, ಅದೇ ಅಭಿನಯ . ಎಲ್ಲೂ ಕೂಡ ಹೊಸ ಚಿಂತನೆಯೊಂದಿಗೆ , ಹೊಸ ವಿಮರ್ಶೆಯೊಂದಿಗೆ ಪ್ರದರ್ಶನ ಕೊಡುವ ಕಾರ್ಯಕ್ಕೆ ನಮ್ಮ ಕಲಾವಿದರು ಮುಂದಾಗುತ್ತಾ ಇಲ್ಲದೇ ಇರುವುದು. ಇದರಿಂದ ಯಾವ ಪ್ರೇಕ್ಷಕ ಯಕ್ಷಗಾನದಲ್ಲಿ ಉಳಿಯಲು ಸಾದ್ಯ.
  ಮತ್ತೆ ಯಕ್ಷಗಾನ ಹೊಸ ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಪಲವಾಗುತ್ತಿರುವುದು . ಇರುವ ಮಲೆನಾಡು, ಕರಾವಳಿ ಪ್ರೇಕ್ಷಕರನ್ನ ಹೊರತು ಪಡಿಸಿ ಮತ್ತೇವ ಪ್ರೇಕ್ಷಕರ ಗುಂಪು ಯಾಕೆ ಸೃಸ್ತಿ ಯಾಗುತ್ತಿಲ್ಲ . ಇದು ಯಕ್ಷಗಾನದ ಸಮಸ್ಯೆಯೇ?, ಯಕ್ಷಗಾನದಲ್ಲಿನ ಆಕರ್ಷಣೆಯಲ್ಲಿನ ಕೊರತೆಯೇ? ಯಾವುದು? ಯಾರು ಹೊಣೆ? ಉತ್ತರವಿಲ್ಲ. ಆದರೆ ಕಟು ಸತ್ಯ .. ಒಪ್ಪಲೇ ಬೇಕು

  ReplyDelete
 4. ನಾನು ಅಮೃತ ಅವರ ಮಾತನ್ನ ಒಪ್ಪುತ್ತೇನೆ. ಬಹುತೇಕ ನಮ್ಮ ವೃತ್ತಿ ಕಲಾವಿದರಲ್ಲಿನ ನ್ಯೂನ್ಯತೆ ಯಕ್ಷಗಾನದ ಅವಸಾಣಕ್ಕೆ ಕಾರಣವಾಗುತ್ತಿರುವುದು ಮಾತ್ರ ಸುಳ್ಳಲ್ಲ. ನಮ್ಮ ಕಲಾವಿಧರಲ್ಲಿ ಧನಾತ್ಮಕ ಚಿಂತನೆಯ ಕೊರತೆ. ಪರಿಶ್ರಮದ ಕೊರತೆ, ಹೊಸತನ್ನ ಸ್ವೀಕರಿಸುವ ಮನೋದರ್ಮ.. ಹೀಗೆ ಎಲ್ಲವನ್ನು ಕಳೆದುಕೊಂಡು ಈ ಕಡೆ ಹಳೆಯ ಪ್ರಸಂಗವನ್ನು ಮಾಡಲಾಗದೇ, ಹೊಸ ಪ್ರಸಂಗವನ್ನು ಜನರಿಗೆ ತಲುಪಿಸಲಾಗದೆ ಸುಮ್ಮನೇ ರಾತ್ರಿಯಣ್ನ ಕಳೆವುತ್ತಾ ಇದ್ದಾರೆ. ಇದು ಯಕ್ಷಗಾನದ ಸೋಲು. ಯಾವ ಕಲಾವಿದನು 'ಗದಾಯುದ್ದ' ಪ್ರಸಂಗವನ್ನು ೧೦೦ ಸಲಾ ಪ್ರದರ್ಶನ ಮಾಡಿದರು ೧೦೧ ಭಾರಿಯೂ ಅದೇ ಹೇಳೆಯ ಶೈಲಿ, ಅದೇ ನಾಟಕೀಯ ಮಾತು, ಅದೇ ಅಭಿನಯ . ಎಲ್ಲೂ ಕೂಡ ಹೊಸ ಚಿಂತನೆಯೊಂದಿಗೆ , ಹೊಸ ವಿಮರ್ಶೆಯೊಂದಿಗೆ ಪ್ರದರ್ಶನ ಕೊಡುವ ಕಾರ್ಯಕ್ಕೆ ನಮ್ಮ ಕಲಾವಿದರು ಮುಂದಾಗುತ್ತಾ ಇಲ್ಲದೇ ಇರುವುದು. ಇದರಿಂದ ಯಾವ ಪ್ರೇಕ್ಷಕ ಯಕ್ಷಗಾನದಲ್ಲಿ ಉಳಿಯಲು ಸಾದ್ಯ.
  ಮತ್ತೆ ಯಕ್ಷಗಾನ ಹೊಸ ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಪಲವಾಗುತ್ತಿರುವುದು . ಇರುವ ಮಲೆನಾಡು, ಕರಾವಳಿ ಪ್ರೇಕ್ಷಕರನ್ನ ಹೊರತು ಪಡಿಸಿ ಮತ್ತೇವ ಪ್ರೇಕ್ಷಕರ ಗುಂಪು ಯಾಕೆ ಸೃಸ್ತಿ ಯಾಗುತ್ತಿಲ್ಲ . ಇದು ಯಕ್ಷಗಾನದ ಸಮಸ್ಯೆಯೇ?, ಯಕ್ಷಗಾನದಲ್ಲಿನ ಆಕರ್ಷಣೆಯಲ್ಲಿನ ಕೊರತೆಯೇ? ಯಾವುದು? ಯಾರು ಹೊಣೆ? ಉತ್ತರವಿಲ್ಲ. ಆದರೆ ಕಟು ಸತ್ಯ .. ಒಪ್ಪಲೇ ಬೇಕು

  ReplyDelete
 5. ಯಕ್ಷಸಿ೦ಚನ ಅವರೆ, ಯಕ್ಷಗಾನದಲ್ಲಿ ವೈಯುಕ್ತಿಕ ಶೈಲಿಗೆ ಬಹಳ ಆದ್ಯತೆ ಇದೆ. ಹೀಗಾಗಿ ಪ್ರಸ೦ಗ ಬೇರೆ ಆಗಿಯೇ ಆಗುತ್ತದೆ. ಭಾವಾಭಿವ್ಯಕ್ತಿ ಸ್ಪಷ್ಟವಾಗಿದ್ದು ಅನುಕರಣೆ ಕಡಿಮೆ ಇದ್ದರೆ, ಹಿಮ್ಮೇಳ ಮುಮ್ಮೇಳಕ್ಕಿರುವ ಸ್ವಾತ೦ತ್ರ್ಯ ಪ್ರಸ೦ಗವನ್ನು ವಿಭಿನ್ನವಾಗಿ ಮಾಡಿಯೇ ಮಾಡುತ್ತವೆ. ಹೆಚ್ಚು ಹೊಸತನ ಬಯಸುವುದು ಸರಿಯಲ್ಲ. ಅದರಿ೦ದಲೇ ಈ ಭಾವಗೀತೆ ಚಿತ್ರಗೀತೆಗಳು ಯಕ್ಷಗಾನಕ್ಕೆ ಬ೦ದಿದ್ದು. ಹೊಸ ಪ್ರೇಕ್ಷಕಬಳಗ ಬೆ೦ಗಳೂರಿನಲ್ಲಿ ಸೃಷ್ಟಿಗೊಳ್ಳುತ್ತಿದೆ. ಇಲ್ಲಿ ಟೊರೋ೦ಟೋದಲ್ಲಿ ಶುದ್ಧ ಮತ್ತು ಸೊಗಸಾದ ಮಾತು ಕೇಳಲೆ೦ದೇ ಆಟಕ್ಕೆ ಬರುವ ಹೊಸ ಪ್ರೇಕ್ಷಕರಿದ್ದಾರೆ. ಕನ್ನಡದಕಲೆ ಎ೦ದು ಹೆಮ್ಮೆಪಟ್ಟು ಆಯೋಜನೆಗೆ ಸಹಕರಿಸುವ ಹೊಸಬರಿದ್ದಾರೆ. ಇವೆರೆಲ್ಲರಿ೦ದ ಹೆಚ್ಚಾಗಿ ಅಮೃತ ಹೇಳಿದ೦ತೆ ಹವ್ಯಾಸಿಗಳಿ೦ದಲೇ ಯಕ್ಷಗಾನ ಉಳಿಯುತ್ತದೆ ಬೆಳೆಯುತ್ತದೆ ಎ೦ಬುದರಬಗ್ಗೆ ಅನುಮಾನವೇ ಇಲ್ಲ.

  ReplyDelete
 6. ರಘು ಅಣ್ಣಾ.. ಲೈಕ್

  ReplyDelete

Post a Comment

Please leave a note about what you think about this write up. Thanks.