19 December 2012

ಹಿಮ್ಮೇಳ - ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ

ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಗೆ ಸಿಕ್ಕು ಸಂಪೋರ್ಣ ವಿಕಾರಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಯಾವುದು ಯಕ್ಷಗಾನ ಯಾವುದು ಅಲ್ಲ ಎಂದು ದಿಟ್ಟವಾಗಿ ಪರಿಷ್ಕರಿಸಿ, ಯಕ್ಷಗಾನದ ಹಿಂದಿರುವ ತತ್ವಗಳು ಏನು, ಅದರ ರೂಪುರೇಷೆ ಯಾವುದು, ತಾಳ ರಾಗ ಕುಣಿತಗಳ ಹಿಂದಿರುವ ಚಾಲಕ ವ್ಯಾಕರಣ ಯಾವುದು ಎಂಬಿತ್ಯಾದಿ ಸಂಶೋಧನೆ ಮಾಡಿ ದಾಖಲಿಸುವ ಪ್ರಯತ್ನ ಸಂಪೂರ್ಣವಾಗಿ ಆಗಿರಲಿಲ್ಲ. ಅದಕ್ಕೆ ಪರಿಹಾರ ಸದೃಶವಾಗಿ ಡಾ ರಾಘವ ನಂಬಿಯಾರರ ಕೃತಿ 'ಹಿಮ್ಮೇಳ' ಈಗ ಪ್ರಕಟವಾಗಿದೆ.


ಯಕ್ಷಗಾನದ ಮೂಲ ಏನು ಎನ್ನುವುದರಿಂದ ಪ್ರಾರಂಭವಾಗುವ ಈ ಪುಸ್ತಕ, ಲಯ ಪ್ರಧಾನವಾದ ಯಕ್ಷಗಾನ ಕಲೆಯ ತಾಳಗಳ ರೂಪವನ್ನು ಶಾಸ್ತ್ರೀಯವಾಗಿ ನಿರೂಪಿಸುವ ಕೆಲಸ ಮಾಡುತ್ತದೆ. ಕರ್ನಾಟಕ ಸಂಗೀತಕ್ಕೆ ಹೋಲಿಸಿ, ತಾಳಗಳು, ಹಾಡುಗಳ ಸೊಲ್ಲಿಗೆ ಹೇಗೆ ಆಪ್ಯಾಯವಾಗಿ ಅಂಟಿಕೊಳ್ಳುತ್ತವೆ ಎಂದು ವಿವರಿಸುತ್ತದೆ. ಇಲ್ಲಿ ಎದ್ದು ಕಾಣುವ ಅಂಶ ಎಂದರೆ, ಯಕ್ಷಗಾನದಲ್ಲಿ ಕರ್ನಾಟಕ ಸಂಗೀತದ ತಾಳಗಳ ಮೂಲ ಸ್ವರೂಪ ಇನ್ನೂ ಜೀವಂತವಾಗಿದೆ ಎಂದು ನಂಬಿಯಾರರು ಸಿದ್ಧಮಾಡಿ ತೋರಿಸುವುದು. ಅಲ್ಲದೇ ತಾಳಗಳ ಹತ್ತು ಲಕ್ಷಣಗಳನ್ನು ಯಕ್ಷಗಾನದ ತಾಳಗಳಲ್ಲಿ ಹೇಗೆ ಕಾಣಬಹುದು ಎಂಬ ಅವರ ವಿವರಣೆ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಇದರಲ್ಲಿ ಸಂಗೀತಕ್ಕೆ ಈ ಪುಸ್ತಕ ಕೊಡುವ ಒಂದು ಅಮೂಲ್ಯ ಕೊಡುಗೆ ಎಂದರೆ, ತಾಳಗಳ ಅಕ್ಷರ, ವಿಭಜನೆ ಮತ್ತು ಗತಿ ಎಲ್ಲಾವೂ ಒಂದೇ ಆಗಿದ್ದರೂ ಅಕ್ಷರದ ಕಾಲದ ಬದಲಾವಣೆ ಒಂದರಿಂದಲೇ ತಾಳ ಬದಲಾಗಬಹುದು ಎನ್ನುವ ಸಂಶೋಧನೆ.

ಯಕ್ಷಗಾನದ ಉಪಕರಣಗಳಾದ ಎರಡೂ ತಿಟ್ಟಿನ, ಕಂಚಿನ ತಾಳ, ಚಂಡೆ, ಮದ್ದಲೆ ಇತ್ಯಾದಿಗಳ ರಚನೆ, ಬಾರಿಸುವ ರೀತಿ ಮತ್ತು ಅವುಗಳ ಹಿಂದಿರುವ ತತ್ವ ಇವೆಲ್ಲವನ್ನೂ ಸಾದರಪಡಿಸಿ ಅವುಗಳನ್ನೂ ಸಂಪೂರ್ಣವಾಗಿ ರಚಿಸುವ ವಿವರನ್ನೂ ಈ ಪುಸ್ತಕದಲ್ಲಿ ನೀಡಿದ್ದಾರೆ ನಂಬಿಯಾರರು. ಯಕ್ಷಗಾನದ ಗುಟ್ಟು ಇರುವುದು ಮಟ್ಟುಗಳಲ್ಲಿ ಎಂದು ಬಲ್ಲವರು ಹೇಳಿದ್ದು! ಮಟ್ಟುಗಳೆಂದರೆ ವಿವಿಧ ಅಳತೆಯ ಛಂದೋಲಯಗಳಿಂದ ಉಂಟಾಗುವ ಹಾಡಿನ ಧಾಟಿ. ಒಂದೇ ರಾಗಗಳಲ್ಲಿ ಬರುವ ಬೇರೆ ಬೇರೆ ಮಟ್ಟುಗಳು ತಾಳಗಳಿಗೆ ಹೇಗೆ ಹೊಂದುತ್ತವೆ ಎಂದು ಕೋಷ್ಟಕಗಳ ಮೂಲಕ ತೋರಿಸುವ ಹೊಸ ಆವಿಷ್ಕಾರ ಇಲ್ಲಿ ಕಾಣಸಿಗುತ್ತದೆ. ಹೀಗೆ ಸುಮಾರು ೪೦ ವರ್ಷಕ್ಕೂ ಹೆಚ್ಚಿನ ಸಂಶೋಧನೆಯನ್ನು ಈ ಪುಸ್ತಕದಲ್ಲಿ ಹುದುಗಿಸಿಟ್ಟು ಯಕ್ಷಗಾನದ ರೂಪುರೇಷೆ ಮೂಲಧರ್ಮ ಅಜರಾಮರವಾಗಿ ಉಳಿಯುವಂತೆ ಮಾಡಿರುವುದು ರಾಘವ ನಂಬಿಯಾರರ ಹಿಮ್ಮೇಳ ಪುಸ್ತಕದ ಸಾಧನೆ.

ಎಲ್ಲಾ ಕಲೆಗಳಂತೆ ಯಕ್ಷಗಾನವೂ ಒಂದು ಮಾಧ್ಯಮ. ಬದಲಾವಣೆ ಒಳ್ಳೆಯದು, ಆದರೆ ಆ ಬದಲಾವಣೆಗಳು ಈ ಮಾಧ್ಯಮವನ್ನು ಬಲಪಡಿಸುವಂತಾಗಬೇಕೇ ಹೊರತು ಹಾಳುಮಾಡಿದಂತಾಗಬಾರದು. ಬುದ್ಧಿಪೂರ್ವಕವಾಗಿ, ಯಕ್ಷಗಾನದ ಮೂಲ ಚೌಕಟ್ಟಿನ ಅರಿವು ಮತ್ತು ಶ್ರೇಷ್ಟ ಕಲಾವಿದರ ಅನುಭವಗಳ ಸಂಮಿಶ್ರಣದಿಂದ ಬದಲಾವನಣೆ ಅಭಿವೃದ್ಧಿ ಬರಬೇಕು ಎನ್ನುವ ಕಳಕಳಿ ಈ ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ನಮ್ಮ ಕನ್ನಡದ ಕಲೆಯಗಳ ಬಗ್ಗೆ ಒಲುಮೆ ಇದ್ದವರೆಲ್ಲರೂ ಓದಲೇ ಬೇಕಾದ ಗ್ರಂಥ - ಹಿಮ್ಮೇಳ.

ವೀ ಸೂ: ಈ ಗ್ರಂಥದ ಪುನರ್ಮುದ್ರಣಕ್ಕಾಗಿ ಪ್ರಯತ್ನ ನೆಡೆದಿದೆ. ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ತಾಣವನ್ನು ಭೇಟಿಮಾಡಿ:
http://www.shruti.hejje.com/pledge

ರಾಗು ಕಟ್ಟಿನಕೆರೆ
ಯಕ್ಷಮಿತ್ರ
http://www.shruti.hejje.com/pledge
http://www.yakshamitra.com

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...