26 December 2020

ನಮ್ಮ ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ ಉದ್ಘಾಟನೆ

 


ಪ್ರಸ್ತಾವನಾ ಭಾಷಣ - ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ ಉದ್ಘಾಟನೆ

ರಾಗು ಕಟ್ಟಿನಕೆರೆ

ಸಂಚಾಲನಾ ಸಮಿತಿ, ಗಮಕ ಕಲಾ ವೇದಿಕೆ - ಉತ್ತರ ಅಮೇರಿಕಾ


ಗುರುಭ್ಯೋನ್ನಮ: ಹರಿ: ಓಂ

ಇಲ್ಲಿ ಸೇರಿರುವ ಎಲ್ಲ ಹಿರಿಯರು ಗಮಕಿಗಳು ವ್ಯಾಖ್ಯಾನಕಾರರು ಸಂಘಟಕರು ಮತ್ತು ಗಮಕದ ಅಭಿಮಾನಿಗಳಿಗೆ ನಮಸ್ಕರಿಸಿ, ಗಮಕ ಕಲಾ ವೇದಿಕೆಯ ಬಗ್ಗೆ ಪ್ರಸ್ತಾವಿಕವಾಗಿ, ಉದ್ಧೇಶಗಳು ಮತ್ತು ಇವತ್ತಿನ ಕಾರ್ಯಕ್ರಮದ ಹಿನ್ನೆಲೆಯ ಬಗ್ಗೆ ಮಾತಾಡುತ್ತೇನೆ.


ಹಿನ್ನೆಲೆ-ಹಿಂದಿನ ಬೆಳವಣಿಗೆ/ಇತಿಹಾಸ

ಉತ್ತರ ಅಮೇರಿಕಾದಲ್ಲಿ ಅಂದರೆ ಯು ಎಸ್ ಎ ಮತ್ತು ಕೆನಡಾದಲ್ಲಿ ನೆಲೆಸಿದ ಕನ್ನಡಿಗರಿಂದ  ಗಮಕದ ಕಾರ್ಯಕ್ರಮಗಳು ಕೆಲಕಾಲದಿಂದ ನೆಡೆಯುತ್ತಾ ಬಂದಿದೆ. ಗೀತಾ ಮತ್ತು ಯಲ್ಲೆಶ್ಪುರ ದತ್ತಾತ್ರಿಗಳು 87-88ರಲ್ಲಿ ನ್ಯೂಯಾರ್ಕ್ನಲ್ಲಿ ದೂರ್ವಾಸಾತಿಥ್ಯ ವಾಚನ ಮಾಡಿದ್ದರು. ಅದು ಅಮೇರಿಕಾದಲ್ಲಿ ಮೊದಲು ಇರಬಹುದು. 89ರಲ್ಲಿ ಹೊಸಬಾಳೆ ಸೀತಾರಾಮರಾಯರು ಅಮೇರಿಕಾಕ್ಕೆ ಬಂದಾಗ ೩-೪ಕಡೆ ವಾಚನ ಮಾಡಿದ್ದರೂ ಅಂತಲೂ ತಿಳಿಯಿತು. ನಂತರ ರಾಧಿಕಾ ಮತ್ತು ರಾಮಚಂದ್ರ ಶಾಸ್ತ್ರಿಗಳು ಅಮೇರಿಕಾದಲ್ಲಿ ಕೆಲವು ಕಾರ್ಯಕ್ರಮ ಕೊಟ್ಟಿದ್ದರು. ನಾನೂ ಸಹ ಕೆನಡಾದಲ್ಲಿ 2012ರಲ್ಲಿ ನರಹರಿ ಶರ್ಮಾ ಅವರಲ್ಲಿ ಕೇಳಿ ಹೇಳಿಸಿಕೊಂಡು ವಾಚನ ಮಾಡಿದ್ದೆ. ಕೆನಡಾದಲ್ಲಿ ಬಹುಶ: ಅದು ಮೊದಲು ಇರಬಹುದು. ಸುಧಾ ಮತ್ತು ಶ್ರೀ ಶ್ರೀಕಾಂತ್ ಅವರು 2014ರಲ್ಲಿ ವಾಚನ ವ್ಯಾಖ್ಯಾನ ಮೊದಲಬಾರಿಗೆ ಆಯೋಜನೆ ಮಾಡಿದ್ದರು. ರಾಮಪ್ರಸಾದ್ ಮತ್ತು ಗಣೇಶ ಶರ್ಮಾ ತ್ಯಾಗಲಿ ಅವರು ಕ್ಯಾಲಿಪೋರ್ನಿಯಾದಲ್ಲಿ ಸುಮಾರು 2014ರಿಂದ ಕಾರ್ಯಕ್ರಮ ಮಾಡಿದ್ದಾರೆ. ನಂತರ ನಾವು 2018ರಲ್ಲಿ ಗಮಕ ವೇದಿಕೆ ಕೆನಡಾ ಅಂತ ಮಾಡಿಕೊಂಡು 3 ತಾಸಿನ ಎರಡು ಕ್ರಾರ್ಯಕ್ರಮ - ಗೀತಾ ಮತ್ತು ಯಲ್ಲೇಶ್ಪುರ ದತ್ತಾತ್ರಿಗಳು ಮತ್ತು ರಾಗು ಕಟ್ಟಿನಕೆರೆ  ಹಾಗು ನವೀನ ಖಂಡಿಕ ಇವರಿಂದ - ಮಾಡಿದ್ದೆವು. ನಂತರ ಪುರಂದರ ಆರಾಧನೆ ಮತ್ತು ಕನ್ನಡ ಸಂಘ ಟೊರಾಂಟೋ ಅವರ ಆಶ್ರಯದಲ್ಲೂ ನಮ್ಮ ಕೆಲವು ಗಮಕ ಕಾರ್ಯಕ್ರಮಗಳು ನೆಡೆದಿವೆ.


ಹೀಗಿರುವಾಗ ನಾವೆಲ್ಲ ಗಮಕದಲ್ಲಿ ಆಸಕ್ತಿ ಇರುವವರು ವಾಚನ ವ್ಯಾಖ್ಯಾನ ಮಾಡಿದವರು, ಉತ್ತರ ಅಮೇರಿಕಾದಾದ್ಯಂತ ಇರುವವರು ಒಟ್ಟಿಗೆ ಸೇರಬೇಕು, ಪರಸ್ಪರ ಪರಿಚಯಮಾಡಿಕೊಂಡು ಒಗ್ಗಟ್ಟಾಗಿ ಕೆಲಸಮಾಡಬೇಕು ಎಂದು ನಮಗೆ ಸಾಧ್ಯವಾದವರನ್ನೆಲ್ಲ ಸಭೆ ಸೇರಿಸುವ ಪ್ರಯತ್ನ ಮಾಡಿದೆವು.


2020 ಆಗಸ್ಟ್ 11 ಬುಧವಾರದಂದು ನೆಡೆದ ಸಭೆಯಲ್ಲಿ ಗಮಕ ಕಲಾ ವೇದಿಕೆ ಉತ್ತರ ಅಮೇರಿಕಾ ಅಥವಾ Gamaka Art Association North America ಎಂಬ ಸಂಘವನ್ನು ಆರಂಭಿಸಬೇಕು ಎನ್ನುವ ಪ್ರಸ್ತಾಪವನ್ನು ಸರ್ವಾನುಮತದಿಂದ ಸ್ವೀಕರಿಸಲಾಯಿತು. ಇದರ ವಿಧ್ಯುಕ್ತವಾದ ಉದ್ಘಾಟನೆಯನ್ನು ಮಾಡುವುದರ ಮೂಲಕ ನಮ್ಮ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಇಂದಿನ ಕಾರ್ಯಕ್ರಮಕ್ಕೆ ಮುಂದಾಗುತ್ತಿದ್ದೇವೆ.


ಇದರ ಹಿಂದಿನ ಜನರು:

ಶ್ರೀಮತೀ ಗಿತಾ ಮತ್ತು ಯಲ್ಲೇಶ್ಪುರ ದತ್ತಾತ್ರಿ - ನ್ಯೂಯಾರ್ಕ್

ಶ್ರೀ ರಾಗು ಕಟ್ಟಿನಕೆರೆ - ಕೆನಡಾ 

ಶ್ರೀ ಗಣೇಶ್ ಶರ್ಮಾ ತ್ಯಾಗಲಿ - ಕ್ಯಾಲಿಪೋರ್ನಿಯಾ

ಶ್ರೀಮತೀ ಸುಧಾ ಮತ್ತು ಶ್ರೀ ಶ್ರೀಕಾಂತ್ - ಕೆನಡಾ 

ಶ್ರೀ ನವೀನ ಖಂಡಿಕ - ಕೆನಡಾ

ಶ್ರೀ ಯಲ್ಲೇಶ್ಪುರ ಜಯರಾಮ್ - ಫ್ಲಾರಿಡ 

ಶ್ರೀ ಹೊಸಹಳ್ಳಿ ರಾಮಸ್ವಾಮಿ - ಕೆನಡಾ

ಶ್ರೀಮತೀ ರಾಧಿಕಾ ಮತ್ತು ರಾಮಚಂದ್ರ ಶಾಸ್ತ್ರಿ - ನ್ಯೂಜೆರ್ಸಿ

ಶ್ರೀ ರಾಮಪ್ರಸಾದ್ ಕೆ ವಿ -ಕ್ಯಾಲಿಪೋರ್ನಿಯಾ

ಶ್ರೀ ಪ್ರತಾಪ ಸಿಂಹ - ಕ್ಯಾಲಿಪೋರ್ನಿಯಾ

ಶ್ರೀಮಂತ ಕಾರ್ತೀಕ್ - ಕ್ಯಾಲಿಪೋರ್ನಿಯಾ


ಸ್ಥಾಪಕ ಸಂಚಾಲನಾ ಸಮಿತಿ:

ಶ್ರೀ ಯಲ್ಲೇಶ್ಪುರ ದತ್ತಾತ್ರಿ - ನ್ಯೂಯಾರ್ಕ್

ಶ್ರೀ ರಾಗು ಕಟ್ಟಿನಕೆರೆ - ಟೊರಾಂಟೋ

ಶ್ರೀ ಗಣೇಶ್ ಶರ್ಮಾ ತ್ಯಾಗಲಿ - ಕ್ಯಾಲಿಪೋರ್ನಿಯಾ

ಶ್ರೀ ಶ್ರೀಕಾಂತ್  ಟೊರಾಂಟೋ


ಇನ್ನೂ ಆಸಕ್ತರನ್ನು ಯಾವಾಗಲೂ ಸ್ವಾಗತಿಸುತ್ತೇವೆ.


ಉದ್ಧೇಶ ಮತ್ತು ಯೋಜನೆಗಳು

೧. ಉತ್ತರ ಅಮೇರಿಕಾದಲ್ಲಿ ವರ್ಷಕ್ಕೆ ಕನಿಷ್ಠ ಎರಡು ಗಮಕ ಕಾರ್ಯಕ್ರಮಗಳು - ಅದನ್ನು ಆನ್ಲೈನ್ ಮೂಲಕ ಪ್ರಸಾರವೂ ಮಾಡುವುದು.

೨. ಕಾವ್ಯ - ವಾಚನ ವ್ಯಾಖ್ಯಾನ ಎಲ್ಲಿ ನೆಡೆದರೂ ಅದರ ಮಾಹಿತಿ ಹಂಚಿ ಒಂದಾಗುವುದು

೩. ಗಮಕಿಗಳಿಂದ - ಇಲ್ಲಿನ ಆಸಕ್ತರಿಗೆ ಗಮಕಿಗಳಾಗಲು ವ್ಯಾಖ್ಯಾನಕಾರಾಗಲು ಶಿಬಿರ ತರಬೇತಿ

೪. ಗಂಭೀರವಾದ ಕನ್ನಡ ಸಾಹಿತ್ಯದ ಆಸಕ್ತಿ ಗಮಕದ ಮೂಲಕ ಇನ್ನೂ ಮುಂದುವರೆಯಬೇಕು. ಕಾವ್ಯ ಜೀವಂತವಾಗಿರಬೇಕಾದರೆ ಅದರ ವಾಚನ ಆಗುತ್ತಿರಬೇಕು. ಕನ್ನಡದ ಕಾವ್ಯಗಳು ಬರಿ ಕಾವ್ಯವಲ್ಲ ಅನೇಕ ಕಲಾ ಪ್ರಕಾರಗಳಿಗೆ ಸ್ಪೂರ್ತಿಯೂ ಆಗಿದೆ. ಉದಾಹರಣೆಗೆ ಕನ್ನಡದಲ್ಲಿ ಅತ್ಯಂತ ದೊಡ್ಡ ಸಾಹಿತ್ಯ ಪ್ರಕಾರವಾದ ಯಕ್ಷಗಾನದ ಪ್ರಸಂಗಗಳು ಹೆಚ್ಚಾಗಿ ಕನ್ನಡದ ಕಾವ್ಯಗಳನ್ನೇ ಅವಲಂಬಿಸಿವೆ. ಆದರೆ ಅನೆಕ ಆಟ ಬಯಲಾಟ ಪ್ರದರ್ಶನದ ಮೂಲಕ ಯಕ್ಷಗಾನ ಸಾಹಿತ್ಯ ಇನ್ನೂ ಜನರನ್ನು ತಲುಪುತ್ತಿದೆ ತನ್ಮೂಲಕ ಕಾವ್ಯಗಳೂ ಜನರನ್ನು ತಲುಪುತ್ತಿವೆ. ಅದೇ ರೀತಿಯಲ್ಲಿ ನೇರವಾಗಿ ಕನ್ನಡದ ಕಾವ್ಯಗಳನ್ನು ಗಮಕದ ಮೂಲಕ ಅಸ್ವಾದಿಸುವವರ ಸಂಖ್ಯೆ ಹೆಚ್ಚಾಗಬೇಕು ಎನ್ನುವುದೂ ನಮ್ಮ ಆಸೆ.

೫. ಪುರಾತನ ಭಾರತೀಯ ದರ್ಶನದಲ್ಲಿನ ಬೆಳಕು ಆಚಾರ ವಿಚಾರಗಳೇ ಕನ್ನಡ ಕಾವ್ಯಗಳಲ್ಲಿ ಜನಜೀವನಕ್ಕೆ ಅನ್ವಯವಾಗುವಂತೆ ಹೇಳಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವಂತಾದ್ದೆ. ಆದರೆ ಕಾವ್ಯಮೀಮಾಂಸೆಯ ದೃಷ್ಟಿಯಿಂದ ನೋಡಿದರೂ ಕಾವ್ಯ ವಾಚನದಿಂದ ಆಗುವ ರಸ ನಿಷ್ಪತ್ತಿಯ ಮೂಲ ಉದ್ಧೇಶ ನಮ್ಮ ಚಾರಿತ್ರ್ಯ ಶುದ್ಧವಾಗಲಿ ಎನ್ನುವುದೇ ಆಗಿದೆ ಎಂದು ಪ್ರೊ ಮೈಸೂರು ಹಿರಿಯಣ್ಣರಂತವರು ಹೇಳಿದ್ದಾರೆ. ಹಾಗಾಗಿ ಕಾವ್ಯ ಸಾಹಿತ್ಯ ಮತ್ತು ಸತ್ಸಂಗದಿಂದ ಸದಾಚಾರ ಸದ್ಗುಣಗಳ ಪ್ರಸಾರವಾಗಲಿ, ನಮ್ಮ ಪರಂಪರೆ ಮುಂದಿನ ಪೀಳಿಗೆಗೆ ಮುಂದುವರೆಯಲಿ ಎಂಬ ಆಸೆಯೂ ಇದೆ.


ನಮ್ಮ ಕರೆಯನ್ನು ಮನ್ನಿಸಿ ಇಲ್ಲಿ ಸೇರಿರುವ ಎಲ್ಲ ಹಿರಿಯರು ಗಮಕಿಗಳು ವ್ಯಾಖ್ಯಾನಕಾರರು ಸಂಘಟಕರು ಮತ್ತು ಗಮಕದ ಅಭಿಮಾನಿಗಳಿಗೆ ಮತ್ತೊಮ್ಮೆ ಸ್ವಾಗತವನ್ನ ಬಯಸಿ ನಮ್ಮ ಎಲ್ಲ ಪ್ರಯತ್ನಕ್ಕೆ ಸಹಕಾರ ಮತ್ತು ಆಶೀರ್ವಾದ ಇರಲಿ ಅಂತ ನಿಮ್ಮಲ್ಲಿ  ಕೇಳಿಕೊಳ್ಳುತ್ತಾ, ಗಮಕ ಕಲಾ ವೇದಿಕೆ ಉತ್ತರ ಅಮೇರಿಕಾ ಇದರ ಉಧ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆಯನ್ನು ತೆರವು ಮಾಡಿಕೊಡುತ್ತಾ ಇದ್ದೇನೆ. ನಮಸ್ಕಾರ.




18 June 2020

ಬಕಾಸುರವಧೆ ಕಾವ್ಯವಾಚನಕ್ಕೆ(ಗಮಕ) ಪ್ರತಿಕ್ರಿಯೆ  Gamaka Kaavyavaachana


ಕಲಿಯುಗಾಬ್ಧ ೫೧೨೨ - ಜೇಷ್ಠ ಮಾಸ ಕೃಷ್ಣ ತೃತಿಯ (ಜುಲೈ ೭ನೇ ದಿನ ೨೦೨೦) ನಾವು ಮಾಡಿದ ಗಮಕಕ್ಕೆ ಬಹಳ ಪ್ರತಿಕ್ರಿಯೆಬಂದಿದೆ. ಇದು ಗಮಕ ಕಲಿಯುವವರಿಗೆ ಮತ್ತು ಅಧ್ಯಯನ ಮಾಡುವವರಿಗೆ ಬಹಳ ಅನುಕೂಲ ಹಾಗಾಗಿ ಇಲ್ಲಿ ಹಾಕಿದ್ದೇನೆ.

ಮೊದಲು ಕಾರ್ಯಕ್ರಮದ ಬಗ್ಗೆ. ನನಗೆ ಹಾಡಲು ಕಾವ್ಯವಾಚನ ಮಾಡಲು ಕಲಿಸಿದ್ದು ನನ್ನ ಅಮ್ಮ ಗೀತಾ ಕಟ್ಟಿನಕೆರೆ. ಅಮ್ಮನ ಧಾಟಿ ಶೈಲಿ ಎಲ್ಲೆಡೆ ಇದೆ. ಇದರಲ್ಲಿ ಸುಮಾರು ೧೪ ರಾಗದ ಛಾಯೆ ಇದೆ. ಇದರಲ್ಲಿ ಸುಮಾರು ೧೦ ನಾನು ಬಳಸಿದ್ದು ಸಂಯೋಜಿಸಿದ್ದು ಉಳಿದವು ಹಿರಿಯರಾದ ಗಮಕಿ ಕೆರೆಕೊಪ್ಪದ ನರಹರಿ ಶರ್ಮ ಮತ್ತು ಹೊಸಬಾಳೆ ಸೀತಾರಾಮರಾಯರಿಂದ ಕೇಳಿದ್ದನ್ನು ಅನ್ವಯಿಸಿದ್ದೇನೆ. ಕೇಳಿ ನೋಡಿ. ಕೆಲವೆಡೆ ಮಿಶ್ರವಾಗಿದೆ. ಆದರೆ ಸಾಹಿತ್ಯದಲ್ಲಿನ ಭಾವನೆಗಳು ಚೆನ್ನಾಗಿ ಬಂದಿದೆ ಎಂದು ಬಹಳ ಜನ ಹೇಳಿದ್ದಾರೆ. 


ಪದ್ಯಗಳು ಇಲ್ಲಿ ಲಭ್ಯ: ನೋಡಿ

ಗಮಕದಲ್ಲಿ ಮುಖ್ಯವಾಗಿ ಎರಡು ವಿಧ ಇದೆ ನಾನು ಕಂಡುಕೊಂಡಿದ್ದೇನೆ. ಇವು ನನ್ನದೇ ವಿಭಾಗ.
೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
೩) ಇನ್ನು ಮಂಗಳೂರಿನ ಕ್ರಮವೂ ಸ್ವಲ್ಪ ಭಿನ್ನ ಇದೆ - ಅದು ಸಾಗರ ಮತ್ತು ಬೆಂಗಳೂರಿನ ಮಧ್ಯ ಎನ್ನಬಹುದೇನೋ ಅದನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ

೧) ಬೆಂಗಳೂರು ಮತ್ತೂರು ಕಡೆ ಇರುವ ಕರ್ನಾಟಕಿ ಪದ್ಧತಿ ಬಳಸುವ ಕ್ರಮ.
ಇದು ಬಹಳ ಪ್ರಚಲಿತ ಇರುವ ಶೈಲಿ. ಇದರಲ್ಲಿ ಕರ್ನಾಟಕಿ ಸಂಗೀತದ ಕೃತಿಗಳಿಗೆ ಬಳಸಿದ ರಾಗವನ್ನೇ ಅದೇ ಶೈಲಿಯಲ್ಲೇ ಕನ್ನಡ ಕಾವ್ಯಗಳಿಗೆ ಅನ್ವಯಿಸಿ ಓದುವುದು ಹೆಚ್ಚು. ಅಂದರೆ ಸ್ವರಗಳ ಬಳಕೆ ಛಂದಸ್ಸಿಗೆ ಹೊಂದಿಕೊಂಡು ಹೋಗುವುದಿಲ್ಲ. ಸಂಗೀತದ ಕೃತಿಗಳಂತೆ ಸಾಗುತ್ತದೆ. ಇಲ್ಲಿ ಭಾವನೆಗಳು ರಾಗ ಎಷ್ಟು ತೋರುತ್ತದೋ ಅಷ್ಟೆ. ಉದ್ಘಾರ ಸಂದರ್ಭಕ್ಕೆ ಹೊಂದುವ ಆಡುಮಾತಿನ ಧಾಟಿಗಳ ಬಳಕೆ ಇಲ್ಲಿ ಇಲ್ಲ. ಇದು ಕರ್ನಾಟಕಿ ಶೈಲಿಯವರಿಗೆ ಇಷ್ಟವಾದರೆ - ಛಂದೋಭಂಗ ವಾಯಿತು ಅಥವಾ ಲಯ ಹೊಂದದು ಎಂದು ಕೊರಗು ಛಂದಸ್ಸಿನ ಅರಿವು ಇರುವವರಿಗೆ.  ಇನ್ನು ರಾಗದಲ್ಲಿ ಸ್ವರದ ಬಳಕೆಯ ಮೇಲೆ ಭಾವ ವ್ಯಕ್ತವಾಗುತ್ತದೆಯೆ ಹೊರತು ರಾಗಕ್ಕೂ ಭಾವಕ್ಕೂ ನೇರ ಸಂಬಂಧ ಇಲ್ಲ. ಇದು ಶಾಸ್ತ್ರ, ಅನುಭವವೂ ಹಾಗೆಯೇ ಇದೆ ಅರ್ಥವಾಗುವವರಿಗೆ.  ಶಾಸ್ತ್ರೀಯ ಎಂದು ಅಭ್ಯಾಸ ಮಾಡಿದವರಿಗೆ ಒಂದೋಂದು ರಾಗ ಒಂದೊಂದು ಭಾವಕ್ಕೆ ಎಂದು ತಪ್ಪಾಗಿ ಕಲಿಸಲಾಗುತ್ತದೆ. ಸ್ವರದ ಮತ್ತು ಗಮಕದ ಬಳಕೆಯ ಮೇಲೆ ಭಾವ ವ್ಯಕ್ತವಾಗುವುದಕ್ಕಾಗಿ ಬರಿ ಕರ್ನಾಟಕಿ ಸಂಗೀತ ಪದ್ಧತಿ ಬಳಸುವಾಗ ಕಾವ್ಯದ ಭಾವ ಸರಿ ವ್ಯಕ್ತವಾಗುವುದಿಲ್ಲ ಎಂದು ನನ್ನಂತವರ ಅಭಿಪ್ರಾಯ. ಇದರ ರಾಗ ಶುದ್ಧತೆ ಗಮಕ ಬಹಳ ಉತ್ಕೃಷ್ಟವಾದ್ದು.

೨) ಸೊರಬ-ಸಾಗರದ ಕಡೆಯ ಛಂದೋಲಯ ವಾಚನ.
ಇದರಲ್ಲಿ ಉದ್ಘಾರ ಭಾವದ ಅಭಿವ್ಯಕ್ತಿ ಮತ್ತು ಛಂದಸ್ಸು ಮುಖ್ಯ. ಅಂದರೆ
ಭಾಮಿನಿಯ ತ್ರಿವುಡೆ ತಾಳದಲಯ - ತಕಿಟತಕದಿಮಿ ಮತ್ತು ವಾರ್ಧಿಕದ ಮಿಶ್ರ ಝಂಪೆಯಲಯ - ತಕಿಟತಕ. ಇನ್ನು ಕಂದ ದ್ವಿಪದಿ ಸಾಂಗತ್ಯದ ಲಯಗಳು ಬೇರೆ. ಇದು ಯಕ್ಷಗಾನದ ಕ್ರಮ ಎಂದು ಕೆಲವರು ತಪ್ಪುತಿಳಿದಿದ್ದಾರೆ ಆದರೆ ಛಂದೋಲಯ ಯಕ್ಷಗಾನದಲ್ಲಿಯೂ ಹೀಗೆಯೇ ಬಳಕೆ ಎನ್ನುವುದು ನಿಜ. ಇಲ್ಲಿ ಓದುವಲ್ಲಿ ಭಾವಕ್ಕೆ ಹೊಂದುವ ಗಮಕ ರಾಗ ಎಲ್ಲದರಬಳಕೆ ಇದೆ. ಕರ್ನಾಟಕಿಪದ್ಧತಿಯ ರಾಗವೇ ಬಳಕೆಯಾಗುತ್ತದೆ. ಆದರೆ ಸಾಹಿತ್ಯ ಛಂದಸ್ಸು ಭಾವನೆ ಮುಖ್ಯ. ಛಂದೋಲಯ ಮುರಿಯುವುದು ತಪ್ಪು ಎನ್ನುವುದು ಈ ಪಾಳಯದ ನಂಬಿಕೆ ಅದು ಸರಿಯೂ ಹೌದು. ಇಲ್ಲದಿದ್ದರೆ ಗಮಕಕ್ಕೂ ವಿತಾಳ ಸಂಗೀತಕ್ಕೂ ಏನೂ ವ್ಯತ್ಯಾಸ ಇಲ್ಲವಾಗುತ್ತದೆ. ಮತ್ತೂ ಸಾಹಿತ್ಯಕ್ಕೆ ಹೊಂದದ ಲಯ ಬಳಸುವುದು ತಪ್ಪೂ ಅನನುಭವವೂ ಆಗುತ್ತದೆ. ಕರ್ನಾಟಕಿ ಸಂಗೀತ ಬಂದರೆ ಎಲ್ಲವೂ ಬಂತು ಎನ್ನುವ ತಪ್ಪು ತಿಳುವಳಿಕೆ ಬಹಳ ಜನರಲ್ಲಿದೆ. ದಾಸರೂ ಅದನ್ನು ಒಪ್ಪರು. ಭದ್ರಗಿರಿ ಅಚ್ಯುತದಾಸರು ಅದನ್ನು ಅನೇಕಕಡೆ ಹೇಳೀಯೂ ಇದ್ದಾರೆ. ದಾಸರನ್ನೇ ಕೀಳಾಗಿನೋಡುವ ಸಂಗೀತಗಾರರನ್ನು ನಾನು ಕಂಡಿದ್ದೇನೆ! ಅದಿರಲಿ, ಗಮಕವು ಸಾಹಿತ್ಯವನ್ನು ಓದುವ ಕಲೆ. ಸಾಹಿತ್ಯವನ್ನು ಓದುವುದು ಸರಿ ಬರಬೇಕು. ಶುದ್ಧವಾಗಿ ಓದುವ ಸಂಧಿ ಸಮಾಸ ಬಿಡಿಸುವ ಕೆಲಸ ಬರಬೇಕು.

ವಿಮರ್ಶೆ: ರಾಗು ಕಟ್ಟಿನಕೆರೆ
ಭಾವ ಚೆನ್ನಾಗಿ ಮೂಡಿಬಂದಿದೆ. ಧ್ವನಿ ಇನ್ನೂ ಮಧುರವಾಗಿ ನಯವಾಗಿ ಬರಬೇಕು. ರಾಗಗಳು ಮಿಶ್ರ ಆಗಿದೆ ಅದು ಸರಿಯಾಗಬೇಕು. ಉಚ್ಛಾರ ಚೆನ್ನಾಗಿದೆ. ಸಾಮಾನ್ಯ ವಾಚಕರಿಗೆ ಹೋಲಿಸಿದರೆ ಉತ್ತಮವೆ. ಆದರೆ ಸ್ಪಷ್ಟತೆ ಇನ್ನೂ ಸಾಲದು. 

ವಿಮರ್ಶೆ: ರಾಘವ ನಂಬಿಯಾರ್ - ಶ್ರೇಷ್ಟ ಯಕ್ಷಗಾನದ ವಿದ್ವಾಂಸರು  (ನನ್ನ ಶಬ್ಧಗಳಲ್ಲಿ)
ಯಶಸ್ವಿಯಾಗಿದೆ. ವಾಚನ ಸ್ಪಷ್ಟವಾಗಿದೆ. ಸಂಧಿ ವಿಭಜನೆ ಮಾಡಿದರೆ ಛಂದಸ್ಸು ಭಂಗವಾಗುತ್ತದೆ - ವಿಭಜನೆ ಮಾಡದೆ ಅರ್ಥ ವಿಭಜನೆಯಾಗುವಂತೆ ಓದಬೇಕು. ವಾಕ್ಯ ಅರ್ಥ ಸರಿಹೊಂದುವಲ್ಲಿ ನಿಲ್ಲಿಸಿ ಸರಿಹೊಂದಿಸಿ ಓದಬೇಕು.

ವಿಮರ್ಶೆ: Y ದತ್ತಾತ್ರೇಯ
ರಾಗಗಳನ್ನು ಭಾವನೆಗೆ ಸಾಹಿತ್ಯಕ್ಕೆ ಸರಿಹೊಂದುವಂತೆ ಅಳವಡಿಸಿದ್ದೀರಿ.  ವ್ಯಾಖ್ಯಾನ ಚೆನ್ನಾಗಿ ಬಂದಿದೆ.

ಇನ್ನು ಅನೇಕ ಜನ ಮೆಚ್ಚಿದ್ದಾರೆ. ಅದರಲ್ಲಿ ನೂರಾರು ಕಾವ್ಯವಾಚನ ಕೇಳಿದವರು ಇದನ್ನು ೧೦ ಉತ್ತಮ ಪ್ರದರ್ಶನಗಳಲ್ಲಿ ಒಂದು ಎಂದು ಗುರುತಿಸಿದ್ದಾರೆ. ಇದು ದೊಡ್ಡ ಶ್ಲಾಘನೆ. ಇನ್ನು ಅಭ್ಯಾಸಮಾಡಲು ತಿದ್ದಿಕೊಳ್ಳಲು ಒಳ್ಳೆಯ ಹುರುಪು ಕೊಡುವಂತಾದ್ದು ಎಂದು ಗಣಿಸುತ್ತೇನೆ.





08 June 2020

ಎರಡು ತಾಳಮದ್ದಲೆ ಮತ್ತು ಒಂದು ಕಾವ್ಯವಾಚನ

ನಮ್ಮ ಯಕ್ಷಮಿತ್ರ ಟೊರಾಂಟೋ ವತಿಯಿಂದ ಎರಡು ತಾಳಮದ್ದಲೆ ಮತ್ತು ಶ್ರೀ ಶ್ರೀಕಾಂತ್ ಅಪೇಕ್ಷೆಯಮೇರೆಗೆ ಕೆಎಸ್ಟಿಗಾಗಿ ಒಂದು ಗಮಕ-ಕಾವ್ಯವಾಚನ ಮಾಡಿದ್ದೇವೆ ಅದರ ವೀಡಿಯೋ ನೋಡಿ.

ನನ್ನ ಪಾತ್ರದಲ್ಲಿ ಹಲವು ಹೊಸತು ಪ್ರಯತ್ನ ಮಾಡಿದ್ದೇನೆ. ಅವು ಹೀಗಿವೆ:

ವಾಲಿವಧೆ ತಾಳಮದ್ದಲೆ
೧. ರಾಮ ವಂಶದ ಪ್ರತೀಕವಾಗಿ ಮಾತಾಡುವುದು
ಸನ್ನಿವೆಶಗಳನ್ನೇ ಬಳಸಿ ಹಿಂದಿನ ಕಥೆ ಅನ್ವಯಮಾಡಬೇಕು ಎನ್ನುವ ಶ್ರೀ ಪ್ರಭಾಕರ ಜೋಷಿಯವರ ಸಲಹೆಯನ್ನು ಇನ್ನೂ ಅನೇಕ ಸಲಹೆ ಮತ್ತು ತಂತ್ರ ಬಳಸಿಕೊಂಡಿದ್ದೇನೆ. ಉದ್ದೇಶಪೂರ್ವಕವಾಗಿ ಪಂಚಮ ಶ್ರುತಿಯಲ್ಲಿ ಮಾತಾಡಿ ಪ್ರಾಣ ಕಳೆದುಕೊಳ್ಳದೇ ಇನ್ನೂ ಇದ್ದೇನೆ. ನಾನು ಹಾಡುವವನಾದರೂ ಕಂಠಕ್ಕೆ ಕಷ್ಟ ಸ್ವಾಮಿ.



ಕೃಷ್ಣಸಂಧಾನ ತಾಳಮದ್ದಲೆ
೧. ಕೌರವ ಭಾರತದ ರಾಜಕೀಯದ ಹಿನ್ನೆಲೆಯಲ್ಲಿ ಗುರುತಿಸಿಕೊಂಡು ಮಾತಾಡುವುದು
೨. ಪಾಂಡವರಲ್ಲಿ ನ್ಯಾಯನೀತಿ ಧರ್ಮ ಎಂಬುದು ಒಂದು ದೌರ್ಬಲ್ಯ ಎನ್ನುವಷ್ಟು ಇದೆ - ರಾಜಕೀಯಕ್ಕೆ ಅದು ಸಲ್ಲ ಎಂಬ ದ್ವನಿಯಲ್ಲಿ ಪ್ರಾಮಾಣಿಕವಾಗಿ ಅವರನ್ನು ದೂರ ಇಟ್ಟು ಸಿಂಹಾಸನ ರಕ್ಷಣೆ ಮಾಡುತ್ತಿದ್ದೇನೆ ಎಂಬ ಧೋರಣೆ.
೩. ಪಾಂಡವರ ಹಿಂದೆ ಸೋಗಿದೆ. ಪ್ರಚಾರಪ್ರಿಯರು ಎನ್ನುವ ಅರ್ಥಗ್ರಹಿಕೆ



ಕಾವ್ಯವಾಚನ - ಗಮಕ
ಇದರಲ್ಲಿ ಸುಮಾರು ೧೪ ರಾಗದ ಛಾಯೆ ಇದೆ. ಇದರಲ್ಲಿ ಸುಮಾರು ೧೦ ನಾನು ಬಳಸಿದ್ದು ಉಳಿದವು ಹಿರಿಯರಾದ ಗಮಕಿ ಕೆರೆಕೊಪ್ಪದ ನರಹರಿ ಶರ್ಮ ಮತ್ತು ಹೊಸಬಾಳೆ ಸೀತಾರಾಮರಾಯರಿಂದ ಕೇಳಿದ್ದನ್ನು ಅನ್ವಯಿಸಿದ್ದೇನೆ. ನಾನು ಕಲಿತಿದ್ದು ಹೇಳಬೇಕು. ರಾಗವನ್ನು ಬಳಸಿ ಸಂಯೋಜನೆ ಮಾಡುವುದರಲ್ಲಿ ಅನೇಕವಿಧ ಇದೆ. ಇರುವ ಸಂಯೋಜನೆಯನ್ನೇ ಬೇರೆಯ ಸಾಹಿತ್ಯಕ್ಕೆ ಬಳಸುವುದು. ಹೆಚ್ಚಿನವರು ಮಾಡುವುದು ಇದು. ಇದನ್ನು ವಿತಾಳಕ್ಕೆ ಮಾಡಿದಾಗ ಅಲ್ಲಿನ ಲಯಬಂದು ಸಾಹಿತ್ಯಕ್ಕೆ ಸರಿಕೂರದೇ ಹೋಗಬಹುದು. ಇನ್ನು ಛಂದೋಭಂಗವಾಗಲೂ ಬಹುದು (ಕೆಲವೆಡೆ ಆಗಿದೆ- ಅನನುಭವ). ಅಂದರೆ ಭಾಮಿನಿಯನ್ನು ವಿತಾಳವಾಗಿ ಓದುವುದಾದರೂ ತ್ರಿಪುಟಕ್ಕೆ ಹೋಲಬೇಕು. ಹೀಗೆ ಛಂದೋಭಂಗವೂ ಆಗದೇ ಬೇರೆ ಸಂಯೋಜನೆಯ ಲಯವೂ ಸ್ವರವೂ ನಕಲಾಗದೇ ಸಾಹಿತ್ಯ ಅರ್ಥ ಎಲ್ಲ ಸರಿ ಇದ್ದು ಸ್ವತಂತ್ರವಾಗಿ ಭಾವಕ್ಕೆ ಹೊಂದುವಹಾಗೆ ಹಾಡುವವರು ಬಹಳ ಕಡಿಮೆ. ಶಾಸ್ತ್ರೀಯ ಎಂದು ಹಾಡುವವರೂ ಎಡವುವುದು ಅಲ್ಲೇ. ಇಲ್ಲಿ ಪ್ರಯತ್ನ ಮಾಡಿದ್ದೇನೆ ಒಂದಿಷ್ಟುಕಡೆ ಅದು ಸರಿಯಾಗಿದೆ ಎಂದು ನಂಬಿಕೆ. ಕೇಳಿ ನೋಡಿ. ಅಲ್ಲಲ್ಲಿ ರಾಗದ ಅಭ್ಯಾಸದ ಅಭಾವ ಕಾಣುತ್ತದೆ. ಕೆಲವೆಡೆ ಮಿಶ್ರವಾಗಿದೆ. ಆಡ್ಜಸ್ಟ್  ಮಾಡಿಕೊಳ್ಳಿ.


ಪದ್ಯಗಳು ಇಲ್ಲಿ ಲಭ್ಯ: ನೋಡಿ



25 May 2020

ಕವಿಸಮಯದ ವಡೆ!

ಕವಿಸಮಯದ ವಡೆ!

ಕವಿ ಮುಸುಕಿ ಕಪ್ಪಾದ ಮೂತಿ-ಗಳಿಗೆ
ನಿಟ್ಟುಸಿರು ಏರುಬ್ಬು ಕಳೆದು ಒರಗಿ ಕಡೆಗೆ
ಚಾ ತರುವ ಚಾರುಲತಾಂಗಿಯಲ್ಲಿ 
ಕಾಫಿ ಕೊಡುವ ಕೋಮಲಾಂಗಿಯಲ್ಲಿ ಕೇಳುವುದು
ಕೊಡೆಕವಿಸಮಯದ ವಡೆ!

13 May 2020

ಶೇಣಿಯವರ ಮಾತಿಗೊಂದು ಉತ್ತರ - ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು





Ragu Kattinakere ಈ ನಂಬಿಕೆಯ ವ್ಯವಹಾರಕ್ಕೆ ಭಾರತೀಯ ಸಂಪ್ರದಾಯದಲ್ಲಿ ಮುಖ್ಯ ಸ್ಥಾನ ಇಲ್ಲ. ಬರಿ ನಂಬಿಕೆಯನ್ನೇ ಆಧಾರವಗಿಟ್ಟು ನಮ್ಮ ಪರಂಪರೆ ಇಲ್ಲ. ಪ್ರಮಾಣಾಧಾರಿತ ತರ್ಕ ಮತ್ತು ಅನುಭಾವ ಮಾತ್ರ ಮುಖ್ಯ. ಬುದ್ಧಿ ಮತ್ತು ಶ್ರದ್ಧೆ ಎರಡೂ ಕಲಿಯಲು ಅತ್ಯವಶ್ಯಕ.  ಆದರೆ ನಂಬಿಕೆ ಮತ್ತು ಶ್ರದ್ಧೆಗೂ ಸ್ಥಾನ ಕಲ್ಪಿಸಿರುವುದು ವಿದ್ಯೆ ಕಲಿಯಲು ಮತ್ತು ಅಸಹಿಷ್ಣುತೆ ಮತ್ತು ದ್ವೇಷವನ್ನು ತಡೆಯಲು. ಬೇರೆಯವರ ನಂಬಿಕೆಯನ್ನು ಅಪಹಾಸ್ಯ ಮಾಡುವುದು ಭಾರತೀಯರ ಲೆಕ್ಕದಲ್ಲಿ ಬುದ್ಧಿಯ ಕೆಲಸ ಅಲ್ಲ. ಪ್ರಾಮಾಣಿಕ ವಾದದಮೂಲಕ ಬುದ್ಧಿಯನ್ನು ಉಪಯೋಗಿಸಿ ಯಾವುದೋ ಒಂದು ನಂಬಿಕೆ ತಪ್ಪು ಎಂದು ಸಾಧಿಸಬಹುದು ತೋರಿಸಬಹುದು ತರ್ಕಮಾಡಬಹುದು ಅಷ್ಟೆ. ಶಂಕರರಂತವರು ಮಾಡಿದ್ದು ಅದು. ತಾಳಮದ್ದಲೆಯದು ಪಾತ್ರ ಸಮರ್ಥನೆ ಮಾಡುವ ಸುಳ್ಳುವಾದ.  ಇದು ನಮ್ಮ ಆಚಾರ್ಯರು ಮಾಡಿದ ತರ್ಕಬದ್ಧವಾದ ವಾದಗಳಲ್ಲ. ತಾಳಮದ್ದಲೆಯ ವಾದಗಳಲ್ಲಿ  ಅನೇಕ ತಪ್ಪುಗಳಿರುತ್ತವೆ.  ಇಲ್ಲಿ ಶೇಣಿ ಅವರ ಎರಡನೇ ವಾಖ್ಯ ತಪ್ಪು. ಅದನ್ನು ಅವರು ಯಾವುದೋ ನೆಲೆಯಲ್ಲಿ ಹೇಳಿರಬಹುದು ಆದರೆ "ನಂಬುಗೆಯಲ್ಲಿ ಸಂಶೋಧನೆಗೆ ನೆಲೆಯಿಲ್ಲ" ಎಂಬ ಮಾತಿಗೆ ಶಾಸ್ತ್ರದಲ್ಲಿ ಆಧಾರ ಸಿಕ್ಕದು ಎಂದು ನನ್ನ ತಿಳುವಳಿಕೆ. ಮೊದಲು ನಂಬಿಕೆ ನಂತರ ಸಂಶೋಧನೆ - ಶದ್ಧಾವಾನ್ ಲಬತೆ ಜ್ಞಾನಂ... ಇತ್ಯಾದಿ.  ಹಾಗಾಗಿ ತಾಳಮದ್ದಲೆ ವಾದಗಳನ್ನೇ ನಿಜ ಎಂದು ನಂಬಲಾಗದು. ಒರೆಗೆ ಹಚ್ಚಿ ನೋಡಬೇಕು.

ನಂಬಿಕೆ ಬುದ್ದಿ ಎನ್ನುವ ದ್ವಂದ್ವಕ್ಕೆ ಸಿಕ್ಕಿ ಬೀಳುವವರು ಸಾಧಾರಣ ಅಬ್ರಹಾಮಿಕರ ಯೋಚನಾ ಪದ್ಧತಿಯನ್ನು ತಮ್ಮದಾಗಿಸಿಕೊಂಡವರು. ಅವರು ನಂಬಿಕೆಯ ಒಲವನ್ನೂ ಏತೇಯಿಸ್ಟ್ ಗಳ ಅಬ್ರಹಾಮೀ ವಿರೋಧಿ ಭಾವಗಳನ್ನು ಅಳವಡಿಸಿಕೊಂಡು ಇಂಗ್ಲಿಶ್ ನಲ್ಲಿ ಲಭ್ಯ ಇರುವ ಸಾಹಿತ್ಯ ಓದಿ ಅದನ್ನು ಭಾರತೀಯ ಸಂಪ್ರದಾಯಗಳಿಗೆ ತಪ್ಪಿ ಅಳವಡಿಸಲು ಹೋಗುತ್ತಾರೆ. ದ್ವಂದ್ವ ಔಟ್ಡೇಟೆಡ್! ತಾವು ರ್ಯಾಶನಿಷ್ಟುಗಳು ಎಂದು ಮೆರೆಯುವ ಉದ್ಧೇಶ. ಅದು ಅಪ್ರಸ್ತುತ ಎಂಬುದು ಅರ್ಥವಾಗಲಿ ಎಂದು ಇಲ್ಲಿ ನಾನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಶ್ರದ್ಧೆ ಮತ್ತು ಬುದ್ಧಿಯನ್ನು ಸಮನ್ವಯಮಾಡಿ ಸಾಧಿಸಿ ತೋರಿಸಿದ ಪರಂಪರೆ ನಮ್ಮದು.
ರಾಗು ಕಟ್ಟಿನಕೆರೆ



Radhakrishna Kalchar Vitla  ಶೇಣಿಯವರ ಮಾತನ್ನು ಬೇರೊಂದು ರೀತಿಯಲ್ಲೂ ಗ್ರಹಿಸಬಹುದು ಅನಿಸ್ತದೆ..ವೈಚಾರಿಕ ಮನೋಧರ್ಮ(ಬುದ್ಧಿಗೆ ಕೆಲಸ)ಇದು ಇರುವಲ್ಲಿ ಯಾರಿಗೂ ಇತರರ ಮೇಲೆ ಸವಾರಿ ಮಾಡುವುದು ಶಕ್ಯವಿಲ್ಲ.ವೈಚಾರಿಕರ ದೃ಼ಷ್ಟಿಯಲ್ಲಿ ಮಹಾ ಪುರುಷನಾಗುವುದು ಕಷ್ಟ..ಶ್ರದ್ಧೆಯೇ ಪ್ರಧಾನವಾಗಿರುವಲ್ಲಿ (ವಿಚಾರದ ಕೊರತೆ ಇರುವಲ್ಲಿ) ಪ್ರಶ್ನಿಸದೆ ಅನುಸರಿಸುವ ಮನೋಧರ್ಮ ಇರುತ್ತದೆ.ಅಂತಹ ಮಂದಿಯ ಕಣ್ಣಿನಲ್ಲಿ ಮಹಾಪುರುಷನೆನಿಸುವುದು ಸುಲಭ.ಅವರು ಎಲ್ಲವನ್ನು ಶ್ರದ್ಧೆಯಿಂದ ಕಾಣುವುದರಿಂದ ಇವರ ಕುರಿತು ಪ್ರಶ್ನೆಗಳು ಹುಟ್ಟುವುದಿಲ್ಲ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ..ನಂಬುಗೆ ಇರುವಲ್ಲಿ ಶೋಧ ಬುದ್ಧಿ ಬರುವುದು ಅಶಕ್ಯ.ಶೋಧನೆ ಮಾಡುವುದು ನಂಬುಗೆ ಇಲ್ಲವಾದಾಗಲೇ.ನಂಬಿದ ಮೇಲೆ ಸಂಶೋಧನೆ ಅಪ್ರಸಕ್ತ.ಇದು ಸಾಮಾನ್ಯ ಜನಮನೋಧರ್ಮದ ಕುರಿತು ಆಡಿದ ಮಾತು.ವೈದ್ಯಕೀಯ,ಜ್ಯೋತಿಷ,ಮಂತ್ರವಾದ ಇತ್ಯಾದಿ ಕ್ಷೇತ್ರಗಳಲ್ಲಿ ನಂಬುಗೆ ಇದ್ದಾಗ 'ಇದು ಹೌದೆ?' ಅನ್ನುವ ಸಂದೇಹ ಅಥವಾ ಪ್ರಶ್ನೆ ಮೂಡುವುದೇ ಇಲ್ಲ.ತಾಳಮದ್ದಲೆ ಕ್ಷೇತ್ರದಲ್ಲಿ ಆಶು ಸ್ವರೂಪದಲ್ಲಿ ಬಂತು ಎಂಬುದರಿಂದ ಇಂತಹ ಮಾತುಗಳ ಮೌಲ್ಯ ಹೆಚ್ಚು ಅನ್ನುವುದು ನನ್ನ ಅಭಿಪ್ರಾಯ.


Ragu Kattinakere ಹೌದು ಮೊದಲ ವಾಕ್ಯದ ಅರ್ಥಕ್ಕೆ ಎರಡನೆಯದನ್ನು ಸೀಮಿತಗೊಳಿಸಿದರೆ ಹೌದು. ಇದನ್ನು ಸಾರ್ವತ್ರಿಕವಾಗಿ ಅನ್ವಯಿಸುವಂತಿಲ್ಲ ಎನ್ನುವುದನ್ನು ಹೇಳಬೇಕೆನಿಸಿತು. ಪಾಶ್ಚಾತ್ಯರ ಅರ್ಥವೂ ಅದೆ. ಅಂದರೆ ಅಲ್ಲಿ (ನನಗೆ ಇಲ್ಲಿ) ನಂಬಿಕೆಯೇ ಪ್ರಧಾನ. ಇಲ್ಲಿನ ಮತಗಳಲ್ಲಿ ಅದೇ ಇಂದಿಗೂ ಮುಖ್ಯ. ಇತ್ತೀಚೆಗೆ ಇಲ್ಲಿ ಬಂದ ವಿಜ್ಞಾನ ಮಾತ್ರ ಅದಕ್ಕೆ ಹೊರತು ಎಂಬ ಭಾವ ಇಲ್ಲಿದೆ. Rationalism ತತ್ವವನ್ನು ಬಳಕೆಗೆ ತಂದರು ಎನ್ನುವ ರೆನೇ ಡೆಸ್ಕಾರ್ತೆ ಅವರಂತವರೂ ಕ್ರೈಸ್ತ ವಾದಿಗಳು! ನ್ಯೂಟನ್ ಕೂಡ ಕಟ್ಟಾ ಕ್ರೈಸ್ತ! ಅಂದರೆ ಅವರ ಮೂಲದಲ್ಲಿ ಅಂಧಶ್ರದ್ಧೆಯೂ ಇತ್ತು. ಆದರೆ ನಮ್ಮ ಪರಂಪರೆಯಲ್ಲಿ ಹಾಗಿಲ್ಲ - ಸಾವಿರಾರು ವರ್ಷಗಳಿಂದ ನಮ್ಮ ಸಿದ್ಧಾಂತಗಳು ವಾದ ತರ್ಕವನ್ನೇ ಅವಲಂಬಿಸಿದ್ದು. ತರ್ಕ ಭಾರತದಿಂದಲೇ ಬಂತು ಎಂದು ಹಲವಾರು ಐರೋಪ್ಯ ಚಿಂತಕರು ಒಪ್ಪಿದ್ದರು ಈಗ ಕತೆ ಕಟ್ಟಿ ಬೇರೆ ಹೇಳುತ್ತಿದ್ದಾರೆ. ನಮ್ಮಲ್ಲೂ ನಂಬಿಕೆಯ ತೊಂದರೆ ಇದ್ದರೂ ಅದು ನಮ್ಮ ಮೂಲ ಚಿಂತನೆಯಲ್ಲಿ ಮತ್ತು ನಮ್ಮ ಆಚಾರ್ಯರ ಚಿಂತನೆಗೆ ನಂಬಿಕೆ ಬುನಾದಿ ಅಲ್ಲ ಎಂದು ನೆನಪಿಸೋಣ ಎನ್ನಿಸಿತು. ನಮ್ಮ ದೇಶದಲ್ಲಿ ವಿರೋಧೀಪಂಥ ತಪ್ಪುಗಳನ್ನೆಲ್ಲ ನಮ್ಮ ಪರಂಪರೆಗೆ ಅಂಟಿಸಿ ಪಾಶ್ಚಾತ್ಯರ ಮತಕ್ಕೂ ನಮ್ಮ ಪರಂಪರೆಗೂ ತಳುಕು ಹಾಕಿ ಮಾತಾಡುತ್ತದೆ. ಅಂತಹ ಅಪವಾದಗಳಲ್ಲಿ ಸರಿಯಾದ ಅರ್ಥ ಗ್ರಹಿಕೆ ಇಲ್ಲ ಅದು ವಿಚಾರವಾದವೋ ಪ್ರಮಾಣಿಕತೆಯೋ ಆಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳುವ ಅನ್ನಿಸಿತು. ಸೀಮಿತವಾಗಿ ಹೇಳಿದ ವಿಚಾರವನ್ನು ಸಾರ್ವತ್ರಿಕ ಮಾಡಿ ಅನ್ವಯಿಸಿದರೆ ತಪ್ಪಾದೀತು ಎನ್ನುವುದು ಒಂದಾದರೆ ಇನ್ನು ನಂಬಿಕೆಯನ್ನು ಹಳಿಯುವುದೂ ಸರಿಯಲ್ಲ ಎನ್ನುವುದು ಇನ್ನೊಂದು. ತಾಯಿ ತಂದೆ ಯಾರು ಎನ್ನುವುದರಿಂದ ಆದಿಯಾಗಿ ಹಲವು ವಿಚಾರಗಳಲ್ಲಿ ಮನುಷ್ಯನ ಜೀವನದಲ್ಲಿ ನಂಬಿಕೆ ಬಹಳ ಮುಖ್ಯ. ಕರೆದವರು ಬರುತ್ತಾರೆ, ಹೇಳಿದವರು ಮಾಡುತ್ತಾರೆ ಹೀಗೆ ನಂಬಿಕೆ ವಿಶ್ವಾಸ ಬೇಕು. ಎಲ್ಲವನ್ನೂ ವಿಚಾರದಮೂಲಕ ಬಗೆಹರಿಸಿಕೊಳ್ಳಲೂ ಅಸಾಧ್ಯ. ಇದನ್ನು ಮಿದುಳಿನ ವಿಕಾಸವಾದವೂ ಒಪ್ಪಿದೆ. ನಂಬಿಕೆ ಎಲ್ಲಿ ಒಳ್ಳೆಯದು ಎಲ್ಲಿ ಅತಿಯಾಗುತ್ತದೆ ಎಂಬ ಸಂತುಲನ ಬೇಕು. ನಂಬಿಕೆ ಇದ್ದಲ್ಲಿ ವಿಚಾರವಿಲ್ಲ ಎನ್ನುವುದೂ ಸರಿಯಲ್ಲ. ನಮ್ಮ ವಿಚಾರಕ್ಕೆ ಒಪ್ಪಿದ್ದು ನಮ್ಮ ನಂಬಿಕೆಯಾಗುತ್ತದೆ. ಬೇರೆಯವರ ವಿಚಾರಕ್ಕೆ ಒಪ್ಪಿದ್ದೂ ನಮ್ಮ ನಂಬಿಕೆಯಾಗಬಹುದು. ನಂಬಿಕೆ ಮತ್ತು ತರ್ಕದ ನಡುವೆಯೂ ಸಂತುಲನ ಬೇಕು. ಹಾಗಾಗಿ ಶೇಣಿಯವರ ಮಾತು ಸೀಮಿತ ಅರ್ಥದಲ್ಲಿ ಸರಿ. ಆದರೆ ಅದನ್ನು ಸಾರ್ವತ್ರಿಕವಾಗಿ ಅದರಲ್ಲೂ ನಮ್ಮ ಪುರಾತನರ ಚಿಂತನೆ ಅನ್ವಯಿಸಿದರೆ ತಪ್ಪೆ ಆಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಇನ್ನು ನಾನೂ ಹವ್ಯಾಸಿಯಾಗಿ ತಾಳಮದ್ದಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ನನಗಿದೆ. ಆದರೆ ಪಾತ್ರ ಸಮರ್ಥನೆ ಪ್ರಸಂಗದ ಬಂಧಕ್ಕೆ ಒಳಪಟ್ಟ ವಾದಗಳ ಸ್ವರೂಪ ಮತ್ತು ಹಿಂದಿನ ಆಚಾರ್ಯರ ವಾದಗಳ ಸ್ವರೂಪ ಬೇರೆ ಎನ್ನುವುದರಲ್ಲಿ ಡಿಬೇಟ್ ಮತ್ತು ನಮ್ಮ ಆಚಾರ್ಯರ ವಾದ ಬೇರೆ ಎನ್ನುವ ವಿಷಯ ಗಮನಿಸಬೇಕು ಎನ್ನುವ ಕಾರಣಕ್ಕಾಗಿಯೂ ಇದನ್ನು ಉದ್ದ ಬೆಳಸಬೇಕಾಯಿತು. ಉತ್ತರಿಸಿದ್ದಕ್ಕೆ ನಿಮಗೆ, ಅಶೋಕವರ್ಧನರಿಗೆ ವಿಷಯ ಇಲ್ಲಿ ಪ್ರಸಾಪಿಸಿದ್ದಕ್ಕೆ ಧನ್ಯವಾದಗಳು.



ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...