An article on Kannada prosody: category of metres named amsa
ನಾನು ಓದಿದ ಯಾವ ಕನ್ನಡ ಛಂದಸ್ಸಿನ ಪುಸ್ತಕದಲ್ಲೂ ಅಂಶಛಂದಸ್ಸನ್ನು ಸ್ಪಷ್ಟವಾಗಿ ವಿವರಿಸಿಲ್ಲ ಎಂದು ನನಗನಿಸಿತು. ಸಾಂಗತ್ಯ ಎಂಬ ಕನ್ನಡ ಛಂದಸ್ಸು ಈ ಅಂಶಛಂದಸ್ಸಿನ ವರ್ಗಕ್ಕೆ ಸೇರಿದ್ದು. ಇದರ ಬಳಕೆ ಕನ್ನಡ ಯಕ್ಷಗಾನ ಪ್ರಸಂಗಗಳಲ್ಲಿ ಹಲವು ಕಡೆ ಇದೆ. ಹಾಗಾಗಿ ಈ ಅಂಶಛಂದಸ್ಸು ತನ್ಮೂಲಕ ಛಂದಸ್ಸಿನ ಬಗ್ಗೆ ವಿವರಿಸುವ ಪ್ರಯತ್ನ ಇದು. ನನಗೆ ಅರ್ಥವಾಗಿದ್ದನ್ನು ನಾನು ಕಂಡುಕೊಡಿದ್ದನ್ನು ಆದಷ್ಟು ಸರಳವಾಗಿ ಇಲ್ಲಿ ವಿವರಿಸುತ್ತೇನೆ. ಇದಕ್ಕೆ ಬೇಕಾದ ಛಂದಸ್ಸಿನ ಒಟ್ಟಾರೆ ಹಿನ್ನೆಲೆಯನ್ನು ಮೊದಲು ತಿಳಿದುಕೊಳ್ಳೋಣ ಅಲ್ಲವೆ?
ಛಂದಸ್ಸು ಎಂದರೆ ನಾವಾಡುವ ಮಾತು ಮತ್ತು ಬರೆಯುವ ಬರಹದಲ್ಲಿ ಅಡಕವಾಗಿರುವ ಲಯ ಅಥವಾ ರಿದಮ್. ಉದಾಹರಣೆಗೆ "ಗಲ್ಲು ಗಲ್ಲೆನುತಾ ಗೆಜ್ಜೆ ಗಲ್ಲುತಾಧಿಮಿತ" ಎಂಬ ಸೊಲ್ಲಿಗೆ ನಾವು ಕೈತಟ್ಟಿಕೊಂಡು ಹಾಡುವುದಿಲ್ಲವೇ? ಹಾಗೆ ಹಾಡುವಾಗ ಕೈತಟ್ಟುವುದು ಸಾಧ್ಯವಾಗುವುದು ಹೃಸ್ವ ಧೀರ್ಘ ಮತ್ತು ಒತ್ತಕ್ಷರಗಳ ಜೋಡಣೆಯಿಂದ ಉಂಟಾಗುವ ಲಯದಿಂದ(ರಿದಮ್). ಬೇರೆ ಬೇರೆ ಅಕ್ಷರ ಜೋಡಣೆಯಿಂದ ಬೇರೆ ಬೇರೆ ಲಯಗಳು ಅಥವಾ ಛಂದಸ್ಸು ಹುಟ್ಟುತ್ತವೆ. ನಮ್ಮ ದಿನನಿತ್ಯ ಆಡುವ ಮಾತಿನಲ್ಲಿರುವ ಲಯವನ್ನು ಚಂಡೆಯೋ ಮದ್ದಲೆಯೋ ಉಪಯೋಗಿಸಿ ನುಡಿಸಿ ತೋರಿಸಲು ಸಾಧ್ಯ ಎನ್ನುವುದು ಕಲಾವಿದರು ಒಪ್ಪುವ ಮಾತು. ಯಾವ ಪ್ರತಿಭಾನ್ವಿತ ಕವಿಗಳು ಬರೆದ ಕಾವ್ಯಗಳನ್ನು ಅಧ್ಯಯನಮಾಡಿದ ವಿದ್ವಾಂಸರು ಅಲ್ಲಿರುವ ಲಯಗಳು ಸೃಷ್ಟಿಯಾಗುವುದು ಹೇಗೆ ಎಂದು ವಿವರಿಸಿ ಅವಕ್ಕೆ ಹೆಸರನ್ನು ಇಟ್ಟಿದ್ದಾರೆ. ಉದಾಹರಣೆಗೆ ಅನುಷ್ಟುಪ್, ಗಾಯತ್ರೀ, ಷಟ್ಪದಿ, ರಗಳೆ, ಸಾಂಗತ್ಯ ಇತ್ಯಾದಿ.
ಅಕ್ಷರಗಳ ಸಂಖ್ಯೆಯಿಂದ ಉಂಟಾಗುವ ಲಯಕ್ಕೆ ಅಕ್ಷರಛಂದಸ್ಸು ಎಂದೂ (ಗಾಯತ್ರೀ), ಅಕ್ಷರಗಳ ಹೃಸ್ವ, ದೀರ್ಘ ಮತ್ತು ಒತ್ತಕ್ಷರಗಳ ಜೋಡಣೆಯಿಂದ ಆಗುವ ಲಯಕ್ಕೆ ಮಾತ್ರಾಛಂದಸ್ಸು (ಷಟ್ಪದಿ) ಎಂತಲೂ ವರ್ಗೀಕರಣ ಮಾಡಿದ್ದಾರೆ. ಮಾತ್ರೆ ಎಂದರೆ ಒಂದು ಅಕ್ಷರ ಉಚ್ಛರಿಸಲು ಬೇಕಾಗುವಷ್ಟು ಸಮಯದ ಒಂದು ಮಾನ. ಹೃಸ್ವಕ್ಕೆ ಒಂದು, ದೀರ್ಘ ಸಂಯುಕ್ತಾಕ್ಷರಗಳಿಗೆ ಎರಡು ಹೀಗೆ.
ಅಂಶಛಂದಸ್ಸು ಅಂಶಗಳಿಂದ ಕೂಡಿ ಆಗುವ ಛಂದಸ್ಸು. ಅಂಶ ಎಂದರೆ ಎರಡು ಅಕ್ಷರ ಉಚ್ಛಾರಣೆಯ ಕಾಲಕ್ಕೆ ಸರಿ ಹೊಂದಬಹುದಾದ ಅಕ್ಷರ. ಅಂದರೆ ಅದು ಎರಡಕ್ಷರ ಇರಬಹುದು ಅಥವಾ ದೀರ್ಘಮಾಡಲ್ಪಡುವ ಒಂದೇ ಅಕ್ಷರವೂ ಆಗಿರ ಬಹುದು. ಉದಾಹರಣೆಗೆ "ತಾವೆಂದು" (ತಾ|ವೆಂ|ದು) ಇಲ್ಲಿ ಮೂರು ಅಂಶಗಳು ಇವೆ. ಅರಸುಗಳ್ (ಅರ|ಸು|ಗಳ್) ಇಲ್ಲೂ ಮೂರು ಅಂಶಗಳು (ಆಂಶಗಳನ್ನು ಗೆರೆ ಮೂಲಕ ಪ್ರತ್ಯೇಕಿದ್ದೇನೆ). ಹಿಂದಿನ ಪದಗಳಲ್ಲಿ "ದು" ಮತ್ತು "ಸು" ಎಂಬ ಅಂಶಗಳು ಒಂದು ಮಾತ್ರೆಯವಾದರೂ ಎರಡು ಮಾತ್ರೆ ಎಂದೇ ಪರಿಗಣಿಸಬೇಕು (ಎಳೆದು ಓದ ಬಹುದು ಎನ್ನುವ ಅರ್ಥದಲ್ಲಿ). ಮೊದಲ ಅಂಶದಲ್ಲಿ ದೀರ್ಘ ಇರದಿದ್ದರೆ ಎರಡು ಹೃಸ್ವಾಕ್ಷರ ಆಗಬಹುದು (ಅರಸುಗಳ್ ಪದದಲ್ಲಿ "ಅರ"). "ಎಂದ" (ಎಂ|ದ) ಎಂಬಲ್ಲಿ ಎರಡು ಅಂಶಗಳಿವೆ (ಬ್ರಹ್ಮಗಣ). ಸಾಂಗತ್ಯದಲ್ಲಿ ಪ್ರತಿಸಾಲಿನಲ್ಲಿ ಈ ರೀತಿ ಮೂರು ಅಂಶಗಳ ಆರು ಗುಂಪು (ವಿಷ್ಣುಗಣ) ಮತ್ತು ಎರಡು ಅಂಶಗಳ ಒಂದು ಗುಂಪು (ಬ್ರಹ್ಮಗಣ). ಈ ರೀತಿ ಎರಡು ಸಾಲು ಬರುತ್ತದೆ.
(ಸಾಂಗತ್ಯ - ರೂಪಕ ತಾಳ - ಕೃಷ್ಣಸಂಧಾನ ಯಕ್ಷಗಾನ ಪ್ರಸಂಗ)
ಚರಣಾದಿ, ಹೊರಳುವ, ತರಳೆಯ, ಪಿಡಿದೆತ್ತಿ | ಕರುಣಾಳು, ನುಡಿದ ದ್ರೌ,ಪದಿಗೆ ||
ಸಿರಿವಂತೆ, ದುಃಖ್ಖಿಸ,ಬೇಡೇಳು, ತಾಯೆ ನಿ | ನ್ನಿರವೇನೂ, ಪೇಳು ಪೇ,ಳೆನಲು ||
ಮೂರು ಅಂಶಗಳು ಮುಗಿಯುವಲ್ಲಿ ಅಲ್ಪವಿರಾಮ ಹಾಕಿದ್ದೇನೆ (ಆಡ್ಡಗೆರೆ ಬಂದಲ್ಲಿ ತಾಳದ ಆವರ್ತನೆ ಮುಗಿಯುತ್ತದೆ). ಎರಡು, ಮೂರು, ನಾಲ್ಕು ಅಂಶಗಳ ಗುಂಪಿಗೆ ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ ಎಂಬ ಹೆಸರು ಕೊಟ್ಟಿದ್ದಾರೆ. ಗಣದಲ್ಲಿನ ಮೊದಲ ಅಂಶಕ್ಕೆ ಮೂಲಾಂಶ ಎಂದು ಹೆಸರು. ಗಣ ಗುರುತಿಸುವಾಗ ಮೊದಲು ಮೂಲಾಂಶ ಗುರು ಅಥವಾ ಎರಡು ಹೃಸ್ವಗಳಿಂದ ಕೂಡಿರುವುದನ್ನು ಬೇಕು. ನಂತರ ಬರುವ ಪ್ರತಿ ಅಕ್ಷರವೂ ಒಂದು ಅಂಶವೆಂದು ಗುರುತಿಸಬೇಕು. "ನುಡಿದ ದ್ರೌ,ಪದಿಗೆ ||" ಎಂಬಲ್ಲಿ "ನುಡಿದ" ಬ್ರಹ್ಮ ಎಂದು ಪರಿಗಣಿಸಿ "ದ್ರೌಪದಿಗೆ" ರುದ್ರ ಎಂದು ಪರಿಗಣಿಸುವಂತಿಲ್ಲ. ಕಾರಣ, ಸಾಂಗತ್ಯಕ್ಕೆ ಹೊಂದಿಸುವುದು ಎಂದಲ್ಲದೆ ಬೇರೆ ನನಗೆ ತಿಳಿಯಲಿಲ್ಲ. ಅದೇನೇ ಇದ್ದರೂ ಅಂಶ ಎಂದರೆ ಹಿಗ್ಗಿಸಿ ಕುಗ್ಗಿಸಿ ಹೇಳಬಹುದಾದ ಅಕ್ಷರಗಳ ಗುಂಪು.
ಈ ಹಳೆಕಾಲದ ಛಂದಸ್ಸುಗಳಿಗೆ ಎಷ್ಟು ಪ್ರಾಶಸ್ತ್ಯ ಕೊಡಬೇಕು? ಈಗಲೂ ಬಳಸಬೇಕೆ? ನನ್ನ ಅನಿಸಿಕೆ, ಈ ಛಂದಸ್ಸುಗಳಲ್ಲಿ ಸುಂದರವಾಗಿ ಬರೆಯಬಲ್ಲವರು ಬಳಸಬೇಕು. ಪ್ರತಿಭಾವಂತರಿಗೆ ಸಿದ್ಧಿಯಾದ, ಅವರಲ್ಲಿ ಅಂತರ್ಗತವಾದ ಹೊಸ ಲಯ ಕಾವ್ಯದಲ್ಲಿ ವ್ಯಕ್ತವಾದಾಗ ಹೊಸ ಛಂದಸ್ಸುಗಳ ಸೃಷ್ಟಿಯಾಗುತ್ತದೆ. ಪ್ರತಿಭೆ ಇಲ್ಲದವರು ಯಾವ ಘನವಾದ ಛಂದಸ್ಸಿನಲ್ಲಿ ಬರೆದರೂ ಕೆಟ್ಟದಾಗಿ ಬರೆಯಬಲ್ಲರು! ಅರ್ಥ, ಲಯಗಳು ಮೇಳೈಸಿ ಕಾವ್ಯದಲ್ಲಿ ಕಾಣುವ ಸೌಂದರ್ಯ ಆ ಕಾವ್ಯ ರಚನೆಯಾದ ಛಂದಸ್ಸಿಗೆ ಮೆರಗು ತರುತ್ತದೆಯೆ ವಿನಹ ಸಂಕೀರ್ಣ ಛಂದಸ್ಸಿನ ಬಳಕೆಯಿಂದಲೇ ಕಾವ್ಯ ಶ್ರೇಷ್ಠವಾಗುವುದಿಲ್ಲ. ರಾಘವಾಂಕನ ಹರಿಶ್ಚಂದ್ರ ಕಾವ್ಯ ಷಟ್ಪದಿ ಛಂದಸ್ಸನ್ನು ಪ್ರಖ್ಯಾತಗೊಳಿಸಿದ್ದು ಇದಕ್ಕೆ ಒಂದು ಉದಾಹರಣೆ. ಕಲೆಯ ಶ್ರೇಷ್ಠತೆಗೆ ಸೌಂದರ್ಯವೇ ಅಂತಿಮ ಮಾಪನವೇ ಹೊರತು ಸಂಕೀರ್ಣತೆಯಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದು ಛಂದಸ್ಸಿಗೂ ಅನ್ವಯಿಸುತ್ತದೆ.
ರಾಗು ಕಟ್ಟಿನಕೆರೆ
(ಹವ್ಯಕ ಸಂಘಟನೆ ಅಮೇರಿಕಾದ ೨೦೧೮ ರ ಸ್ಮರಣಿಕೆಯಲ್ಲಿ ಪ್ರಕಟಿತ)
No comments:
Post a Comment
Please leave a note about what you think about this write up. Thanks.