An article on the art of appreciating Yakshagana Kannada theatre
Published in www.havyak.com
ಆಟ, ಬಯಲಾಟ, ದಶಾವತಾರ ಆಟ ಎಂದು ಕರೆಯಲ್ಪಡುತ್ತಿದ್ದ ಕನ್ನಡದ ಪ್ರಾಚೀನ ರಂಗಭೂಮಿಗೆ ಸುಮಾರು ೧೦೦-೧೫೦ ವರ್ಷಗಳ ಹಿಂದೆ ಯಕ್ಷಗಾನ ಎಂಬ ಹೆಸರು ಬಂದಿರಬಹುದು. ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ ಇತ್ಯಾದಿ ರಂಗಭೂಮಿಗಳು ಯಕ್ಷಗಾನದ ಬೇರೆ ಬೇರೆ ಪ್ರಾದೇಶಿಕ ರೂಪಗಳು. ಈ ಎಲ್ಲ ರಂಗಭೂಮಿಗಳು ಬೆಳಸಿದ ಸಾಹಿತ್ಯ ಪ್ರಕಾರಕ್ಕೆ ಕನ್ನಡ ಯಕ್ಷಗಾನ ಪ್ರಸಂಗಗಳು ಎಂದು ಹೆಸರು. ಯಕ್ಷಗಾನ ಸಾಹಿತ್ಯ ಅಚ್ಚಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪೂರ್ವವಾದ ಮತ್ತು ಹೆಚ್ಚು ಬರವಣಿಗೆ ಲಭ್ಯವಿರುವ ಪ್ರಕಾರಗಳಲ್ಲೊಂದು. ಕನ್ನಡದ ನವ್ಯಕಾವ್ಯ ಬರೆದ ಕವಿಗಳು ರೂಪಿಸಿದರು ಎನ್ನಲಾಗುತ್ತಿದ್ದ ಹೊಸಗನ್ನಡದ ಛಂದಸ್ಸಿನಲ್ಲಿ ಬಹುತೇಕ ಯಕ್ಷಗಾನ ಪ್ರಸಂಗ-ಕಾವ್ಯಗಳಲ್ಲಿ ಮೊದಲೇ ಇದ್ದವು ಎಂದು ಶ್ರೀ ವಸಂತ ಭಾರದ್ವಾಜರು ಪ್ರತಿಪಾದಿಸಿದ್ದಾರೆ. ಕಳೆದು ಹೋಗಿದ್ದವು ಎನ್ನಲಾದ ಬೆದಂಡೆ, ಚತ್ತಾಣ ಇತ್ಯಾದಿ ಹಳೆಗನ್ನಡದ ಮಟ್ಟುಗಳು (ಛಂದಸ್ಸುಗಳು) ಯಕ್ಷಗಾನ ಸಾಹಿತ್ಯದಲ್ಲಿ ಇನ್ನೂ ಇವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಮರಾಠೀ ನಾಟಕಕ್ಕೂ ಮತ್ತು ಕನ್ನಡ ನಾಟಕ ಪರಂಪರೆಗೂ ಯಕ್ಷಗಾನವೇ ಮೂಲ ಎಂದು ಹಲವು ಆಧಾರಗಳನ್ನು ಸಂಶೋಧಕರು ಒದಗಿಸಿದ್ದಾರೆ. ೧೮೪೩ ರಲ್ಲಿ ಸಾಂಗ್ಲಿ ರಾಜರ ಆಸ್ಥಾನದಲ್ಲಿ ನೆಡೆದ ಯಕ್ಷಗಾನವನ್ನು ನೋಡಿ ಮೊದಲ ಮರಾಠೀ ನಾಟಕ ಎನ್ನಲಾಗುವ ‘ಸೀತಾ ಸ್ವಯಂವರ’ ವನ್ನು ಬರೆದೆ (ಸಂಗೀತ ನಾಟಕ) ಎಂದು ವಿಷ್ಣುದಾಸ್ ಭಾವೆ ಅವರೇ ಸ್ವತಹ ಉಲ್ಲೇಖಿಸಿದ್ದಾರೆ. ಮರಾಠೀ ನಾಟಕದ ಚರಿತ್ರಾಕಾರರು ಇದನ್ನು ಒಪ್ಪಿಯೂ ಇದ್ದಾರೆ. ಕನ್ನಡ ನಾಟಕದ ಪಿತಾಮಹ ಎನಿಸಿಕೊಂಡ ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಅವರ ನಾಟಕ ತಂಡಕ್ಕೆ ತರಬೇತಿ ನೀಡಿದವರು ಘಟ್ಟದ ಕೆಳಗಿನ ಭಾಗವತರು (ಯಕ್ಷಗಾನದವರೇ ಇರಬಹುದು ಎನ್ನುವುದು ಅಭಿಪ್ರಾಯ) ಎಂದು ಸ್ವತಹ ಬರೆದಿದ್ದಾರೆ. ಹೀಗೆ ಕನ್ನಡ ಸಂಸ್ಕೃತಿಯನ್ನು ಮಡಿಲಲ್ಲಿ ಇಟ್ಟುಕೊಂಡು ಬೆಳೆದು ಬೆಳಸಿದ ಕಲೆ ಕನ್ನಡ ಯಕ್ಷಗಾನ. ಪಂಡಿತರಿಗೇ ಸೀಮಿತವಾಗದೆ ಜಾತಿ ಮತಗಳೆನ್ನದೇ ಎಲ್ಲರನ್ನೂ ಒಳಗೊಂಡ ಕಲೆ ಯಕ್ಷಗಾನ. ಕೆಲವೇ ವರ್ಷಗಳ ಹಿಂದೆ ಯಕ್ಷಗಾನ ಬಯಲಾಟ ಕರ್ನಾಟಕದ ಅಧಿಕೃತ ಕಲಾಪ್ರಕಾರ ಎಂದು ಸರ್ಕಾರ ಘೋಷಿಸಿದೆ; ಯಕ್ಷಗಾನ ಬಯಲಾಟ ಪರಿಷತ್ತನ್ನೂ ಸೃಷ್ಟಿಸಿದೆ.
ಹೀಗಿರುವ ನಮ್ಮದೇ ಆದ ಕಲೆಯನ್ನು ಆಸ್ವಾದಿಸುವುದು ಹೇಗೆ? ನಾವು ಪಾಶ್ಚಾತ್ಯ ಕಲೆಗಳಿಗೆ ಒಗ್ಗಿಕೊಂಡು ನಮ್ಮ ಕಲೆಗಳ ಮೂಲ ಸ್ವಾರಸ್ಯವನ್ನೇ ಮರೆಯುವಷ್ಟರ ಮಟ್ಟಿಗೆ “ಮುಂದುವರೆದಿದ್ದೇವೆ”! ಹಾಗಾಗಿ ಆಟ ನೋಡುವಾಗ ಗಮನದಲ್ಲಿರ ಬೇಕಾದ ಅಂಶಗಳನ್ನು ಗಮನಿಸೋಣ. ಇಲ್ಲಿ ನನಗೆ ಅನುಭವ ಇರುವ ಬಡಗಿನ ಕುರಿತು ಮಾತ್ರ ಪ್ರಸ್ತಾಪವಿದೆ.
೧. ಯಕ್ಷಗಾನದ ಮೂಲ ಉದ್ದೇಶ ಏನು?
ಕಥೆಯೊಂದನ್ನು ಹೇಳುವುದು ಆಟದ ಮೂಲ ಉದ್ದೇಶ. ಭಾಗವತ ಆ ಕಥೆಯ ನಿರೂಪಕ. ಉಳಿದ ಕುಣಿತದವರಿಗೆ ವೇಷಧಾರಿಗಳು ಎಂದು ಹೆಸರು. ಆವರದು ನಾಟಕದಂತೆ ಪಾತ್ರವಲ್ಲ. ಎಲ್ಲರೂ ಸೇರಿ ಕಥೆಯೊಂದನ್ನು ಸುಂದರವಾಗಿ ಹೆಣೆದ ಪ್ರಸಂಗ ಸಾಹಿತ್ಯವನ್ನು ಬಳಸಿ ಹೇಳುವುದು. ಇಲ್ಲಿ ಕಥೆ ಹೇಳುವುದೇ ಮುಖ್ಯ, ಪದ, ಕುಣಿತ, ಬಡಿತ, ಮಾತು ಯಾವುದೂ ವಿಶೇಷವಲ್ಲ. ಯಾವುದನ್ನೋ ಒಂದನ್ನೇ ಹೆಚ್ಚುಮಾಡಿದರೆ ಅದು ಔಚಿತ್ಯ ಮೀರಿದಂತೆ.
೨. ಯಕ್ಷಗಾನದ ಭಾಗವತರು ಕೇವಲ ಹಾಡುಗಾರರೇ?
ಭಾಗವತರಿಗೆ ವಿಶೇಷ ಗೌರವವಿದೆ. ಅವರು ರಂಗ ನಿರ್ದೇಶಕರು ಎನ್ನುವುದು ಸಂಪ್ರದಾಯ ಮತ್ತು ಮೊದಲ ವೇಷಧಾರಿ ಎಂದು ಕೂಡ ಅವರಿಗೆ ಹೆಸರು. ಪ್ರಸಂಗದಲ್ಲಿ ಮುಖ್ಯಪಾತ್ರವನ್ನು ವಹಿಸುವ ಕಲಾವಿದನಿಗೆ ಎರಡನೇ ವೇಷಧಾರಿ ಎನ್ನುವರು. ರಾಘವ ನಂಬಿಯಾರರು, ಭಾಗವತ ಎನ್ನುವುದು ಹಿಂದೆ ಎಲ್ಲ ಕಲಾವಿದರಿಗೂ ಅನ್ವಯವಾಗುತ್ತಿದ್ದ ಪದ ಎಂದೂ, ಎಲ್ಲರಿಗೂ ಎಲ್ಲ ಅಂಗ ಗಳ ತಿಳಿವಳಿಕೆ ಇರುತ್ತಿತ್ತು ಎಂದು ತಿಳಿಸಿದ್ದಾರೆ. ಚಂಡೆ, ಮದ್ದಲೆ ಮತ್ತು ಕುಣಿತದ ಎಲ್ಲ ಅಂಗ, ಮತ್ತು ಪದ ಹೇಳಲು ಬರುವವರಿಗೆ ಈಗ ದಶಾವತಾರಿ ಎನ್ನುವ ಹೆಸರು. ಭಾಗವತ ಎನ್ನುವ ಪದಕ್ಕೆ ಇದೇ ಅರ್ಥ ಎನ್ನುವ ಒಟ್ಟಾರೆ ಅರ್ಥದಲ್ಲಿ ಅವರು ಹೇಳಿದ್ದು ಎನ್ನುವುದು ನನ್ನ ತಿಳಿವಳಿಕೆ. ಅದೇನೆ ಇದ್ದರು ಈಗ ಪದ ಹೇಳುವವರಿಗೆ ಭಾಗವತರು ಎನ್ನುವುದು ರೂಢಿಯಲ್ಲಿದೆ.
ಭಾಗವತಿಕೆ ಯಕ್ಷಗಾನದ ವಿವಿಧ ಅಂಗಗಳಲ್ಲಿ ಕ್ಲಿಷ್ಟವಾದದ್ದು. ಭಾಗವತಿಕೆ ಬಂತೆಂದರೆ ಅವರು ಸುಮಾರಾಗಿ ಬೇರೆ, ಕುಣಿತ ಮದ್ದಲೆ, ಚಂಡೆ ಇತ್ಯಾದಿಗಳನ್ನು ನಿರ್ವಹಿಸುವ ಸಾಮರ್ಥ್ಯ ಅವರಲ್ಲಿ ಇದೆ ಎಂದಿಟ್ಟುಕೊಳ್ಳಬಹುದು. ಯಕ್ಷಗಾನದ ಹಿಮ್ಮೇಳ Orchestra ಅಲ್ಲ. ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವಹಿಸುವುದು, ಅಂದರೆ, ಭಾಗವತಿಕೆ ಮತ್ತು ಚಂಡೆ ಮದ್ದಲೆ ಕಲಿಯುವುದು ಕುಣಿತಕ್ಕಿಂತ ಕಷ್ಟ (ಸರಿ ಕುಣಿತ ಕಲಿಯುವುದು ಸುಲಭ ಎಂದಲ್ಲ). ಹಾಗಾಗಿ ಹಿಮ್ಮೇಳದವರನ್ನು ಕರಪತ್ರ ಘೋಷಣೆ ಎಲ್ಲದರಲ್ಲೂ ಮೊದಲು ಗುರುತಿಸುವುದು. ಭಾಗವತರು ಹಿನ್ನೆಲೆ ಗಾಯಕರಲ್ಲ. ರಂಗದ ಗತಿ, ನಡೆ, ನಿರ್ಧರಿಸುವ ಸೂತ್ರಧಾರ ಅವರೇ. ಕುಣಿತಕ್ಕೆ ಬೇಕಾಗುವ ಲಯ ಸೃಷ್ಟಿಯಾಗುವುದು ಹಾಡುವ ಪದದಿಂದ. ಅದನ್ನು ಚಂಡೆ ಮದ್ದಲೆಯವರು ನುಡಿಸಿ ರೂಪು ಕೊಟ್ಟಾಗ ಕುಣಿಯಲು ಅನುವಾಗುತ್ತದೆ. ಹಾಗಾಗಿಯೇ ಹಿರಿಯ ವೇಷಧಾರಿಗಳೂ ಸೇರಿ ಎಲ್ಲರೂ ರಂಗಕ್ಕೆ ಬರುವ ಮೊದಲು ಭಾಗವತರಿಗೆ ನಮಸ್ಕರಿಸುವ ಸಂಪ್ರದಾಯ ಇರುವುದು. ನಮಸ್ಕಾರ ವ್ಯಕ್ತಿಗೆ ಅಲ್ಲ ಸ್ಥಾನಕ್ಕೆ. ಇಲ್ಲದಿದ್ದರೆ ಸ್ಥಾನದ ಯೋಗ್ಯತೆ ಹಾಳಾದರೆ ರಂಗದ ತಂತ್ರಗಾರಿಕೆ ನಾಶವಾಗುತ್ತದೆ ಎನ್ನುವುದಕ್ಕಾಗಿ. ಆ ಸ್ಥಾನವನ್ನು ತುಂಬುವ ಯೋಗ್ಯತೆ, ಅಭ್ಯಾಸ ಭಾಗವತರಿಗೂ ಇರಬೇಕು. ವೀರಭದ್ರನಾಯಕರಂತಹ ಹಿರಿಯ ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರಾದರೂ ಶೇಷಗಿರಿ ಕಿಣಿ ಭಾಗವತರು ನನ್ನ ಗುರುಗಳು ಎನ್ನುವಾಗ ಅವರ ಕಣ್ಣು ತುಂಬಿ ಬರುತ್ತಿತ್ತಂತೆ!
೩. ಯಕ್ಷಗಾನದಲ್ಲಿ ಮದ್ದಲೆಗಾರರ ಸ್ಥಾನವೇನು?
ಭಾಗವತರ ನಂತರದ ಸ್ಥಾನವೇ ಮದ್ದಲೆಗಾರರದು. ಭಾಗವತರಿಗೆ ಮತ್ತು ವೇಷಧಾರಿಗಳಿಗೆ ಮದ್ದಲೆ ಬಲು ಮುಖ್ಯ. ಚಂಡೆಯವರಿಗೆ ಮಾರ್ಗದರ್ಶನ ಮಾಡುವುದೂ ನುರಿತ ಮದ್ದಲೆಯವರೇ. ಚಂಡೆ ಯಕ್ಷಗಾನಕ್ಕೆ ಸೇರಿ ಸುಮಾರು ನೂರುವರ್ಷವೂ ಆಗಿರದು. ಮದ್ದಲೆಯವರು ಚಂಡೆಬಾರಿಸಿ ಒತ್ತು ಮದ್ದಲೆಯವರಿಗೆ ತೋರಿಸಿ ಹೇಳಿ ಕೊಡುವುದೂ ಇದೆ. ಚಂದವಾಗಿ ಮದ್ದಲೆ ನುಡಿಸುವುದನ್ನು ಕಲಿಯುವುದು ಬಹಳ ಕಷ್ಟ. ಮದ್ದಲೆಯನ್ನು ಶುದ್ಧವಾಗಿ ಶ್ರುತಿ ಮಾಡಲು ಕಲಿಯುವುದೂ ಕಷ್ಟ. ಕುಣಿತಕ್ಕೆ, ಅಭಿನಯ ಬಂದವರನ್ನು ಆಪತ್ಕಾಲಕ್ಕೆ ಸಿದ್ಧಮಾಡಿ ಬಿಡಬಹುದು ಆದರೆ ಮದ್ದಲೆ ಇತ್ಯಾದಿ ಹಿಮ್ಮೇಳಕ್ಕೆ ಅಭ್ಯಾಸಮಾಡಿದ ಪ್ರತಿಭೆ ಇರುವವರೇ ಬೇಕು. ಹಾಗಾಗಿ ಮದ್ದಲೆ ಚಂಡೆ ಪದ ಹೇಳುವ ಕಲಾವಿದರ ಸಂಖ್ಯೆ ಕಡಿಮೆ. ವೇಷಧಾರಿಗಳು ಮದ್ದಲೆಯವರನ್ನು ಸಂಪ್ರದಾಯಿಕವಾಗಿ ವಿಶೇಷ ಗೌರವದಿಂದ ಕಾಣುವುದಿದೆ. ಯಕ್ಷಗಾನದ ಗತ್ತು, ಪೆಟ್ಟುಗಳೆಲ್ಲ ಉಳಿಯುವುದು ಬೆಳೆಯುವುದು ನುರಿತ ಮದ್ದಲೆಯವರಿಂದಲೇ ಅಲ್ಲವೇ?
೪. ಯಕ್ಷಗಾನದ ಭಾಗವತರು ಕೂಗುವರೇ?
ಭಾಗವತಿಕೆಗೆ ಬಹಳ ಶಕ್ತಿ ಬೇಕು. ಯಕ್ಷಗಾನದ ಕಥಾನಕಗಳು ಬಹುತೇಕವಾಗಿ ವೀರಾವೇಶದ ಸನ್ನಿವೇಶಗಳನ್ನು ಒಳಗೊಂಡಿರುತ್ತವೆ. ಅಂತಹ ವೀರಾವೇಶಗಳಿಗೆ ಪೂರಕವಾಗಿ ಭಾಗವತರು ಹಾಡುತ್ತಾರೆಯೇ ಹೊರತು, ಅದು ಕೂಗುವುದಲ್ಲ. ಇತರ ಸಂಗೀತಪ್ರಕಾರಗಳಲ್ಲಿ ಈ ವಿದ್ಯಮಾನ ಕಂಡು ಬರುವುದಿಲ್ಲ. ಯಾಕೆಂದರೆ ಇದು ದೃಶ್ಯಪ್ರಧಾನ ವಾದ ಒಂದು ಕಲೆಗೆ ಪೂರಕವಾಗಿ ಬಳಸಲ್ಪಡುವ ಸಂಗೀತ.
ಭಾಗವತಿಕೆಯ ಧ್ವನಿ ನಾಭಿಯಿಂದ ಅಂದರೆ ಹೊಕ್ಕಳಿನಿಂದ ಬರಬೇಕು. ಹಾಡುವಾಗ ಹಲವು ಧ್ವನಿಯ ಉಪಯೋಗ ಆಗುತ್ತದೆ. ಮೂಗಿನಿಂದ ಗಂಟಲಿಂದ ಎದೆಯಿಂದ ನಾಭಿ ಮತ್ತು ಪೃಷ್ಟ. ಹೊಕ್ಕಳಿನ ಸ್ನಾಯುಗಳನ್ನು ಬಿಗಿಹಿಡಿದು ಧ್ವನಿ ತೆಗೆದಾಗ ಆಳವಾದ ಧ್ವನಿ ಹೊರಡುತ್ತದೆ. ಇದನ್ನು ಯಕ್ಷಗಾನದಲ್ಲಿ ಬಳಸುವುದು ಇದೆ. ಇದರ ಬಳಕೆ ಬೇರೆ ಸಂಗೀತದಲ್ಲಿ ಕಡಿಮೆ. ಹಾಗಾಗಿ ಭಾಗವತರು ಕೂಗುವುದಲ್ಲ ಆಳವಾದ ಧ್ವನಿಯಿಂದ ಹಾಡುವುದು. ಇದು ಬೇರೆಕಡೆ ವಿರಳವಾದ ನಮ್ಮದೇ ಆದ ಒಂದು ವಿಶೇಷ. ಅಲ್ಲದೇ ಯಕ್ಷಗಾನದ ಚಂಡೆಯ ಶ್ರುತಿ ತಾರ ಷಡ್ಜ. ಹಾಡುಗಾರಿಕೆಯೂ ಮೇಲೆಯೇ. ಅಂದರೆ, ಕರ್ನಾಟಕ ಸಂಗೀತಗಾರರು ಬಳಸುವುದಕ್ಕಿಂತ ಮೇಲೆ (ಪ ದಿಂದ ಮೂರನೇ ಸಪ್ತಕದ ಪ ದವರೆಗಿನ ತೀವ್ರ ಸ್ವರಗಳ ಬಳಕೆ ಹೆಚ್ಚು). ಸಹಜವಾಗಿಯೇ ಏರು ಶ್ರುತಿಯ ಕಂಠ ಇರುವವರು, ಸುಂದರವಾಗಿ ತಾರ ಶ್ರುತಿಯಲ್ಲಿ ಹಾಡಬಲ್ಲವರು, ಹಾಗೆ ಹಾಡಿದರೆ ಚಂದವೆ. ಆದರೆ ಯಕ್ಷಗಾನದ ಹಾಡುಗಳು ಬಹುತೇಕವಾಗಿ ಮಧ್ಯ ಸಪ್ತಕದ ಮಧ್ಯಮದಿಂದ ತಾರಸಪ್ತಕದ ಮಧ್ಯಮ ಅಥವಾ ಪಂಚಮದ ವರೆಗಿನ ಸ್ವರಗಳನ್ನೇ ಬಯಸುವುದರಿಂದ, ಭಾಗವತರ ಶ್ರುತಿ ಯಾವುದೇ ಇದ್ದರೂ ಆತ, ತನ್ನ ಮಧ್ಯಸಪ್ತಕದ ಮಧ್ಯಮದಿಂದ ತನ್ನ ತಾರಸಪ್ತಕದ ಮಧ್ಯಮ ಅಥವಾ ಪಂಚಮದ ವರೆಗೆ ಸಾಮಾನ್ಯವಾಗಿ ಸಂಚರಿಸಬೇಕಾಗುತ್ತದೆ. ಇದರ ಅರ್ಥ ಮಧ್ಯ ಸಪ್ತಕದಲ್ಲಿ ಮಧ್ಯಮಕ್ಕಿಂತಲೂ ಕೇಳಗಿನ ಸ್ವರಗಳನ್ನು ಬಳಸಬಾರದೆಂದೇನೂ ಅಲ್ಲ. ಸಂದರ್ಭೋಚಿತವಾಗಿ ಬಳಸಲೂಬಹದು. ಹಾಗೆ ಬಳಸಿದಾಗ, ಅದು ಹಾಡುಗಾರಿಕೆಯ ಸೊಗಸನ್ನು ಹೆಚ್ಚಿಸಲೂಬಹುದು (೩).
೬. ಯಕ್ಷಗಾನದಲ್ಲಿ ರಾಗ-ತಾಳಗಳು ಇವೆಯೇ?
ಯಕ್ಷಗಾನ ಸ್ವತಂತ್ರವಾದ ಕರ್ನಾಟಕಿ ಮತ್ತು ಹಿಂದೂಸ್ತಾನಿಗಳಿಗಿಂತ ಹೊರತಾದ ರಂಗ ಪರಂಪರೆಯಾಗಿ ರೂಪು ಗೊಂಡಿದೆ. ಯಕ್ಷಗಾನದವೇ ಆದ ರಾಗಗಳು ತಾಳಗಳೂ ಇವೆ. ಅಲ್ಲದೇ ಕರ್ನಾಟಕಿಯಿಂದ ಮರೆಯಾದ ಹಲವು ತಾಳದ ರೂಪಗಳು ರಾಗಗಳು ಯಕ್ಷಗಾನದಲ್ಲಿ ಇವೆ ಎಂದು ಸಂಶೋಧಕರು ತೋರಿಸಿದ್ದಾರೆ. ಉದಾಹರಣೆಗೆ ಕರ್ನಾಟಕಿಯಲ್ಲಿ ಇಲ್ಲದ ಮೇಚಾಳಿ ರಾಗ ಯಕ್ಷಗಾನದಲ್ಲಿದೆ ಎಂದು ಶ್ರೀ ರಾಮ ಹೆಗಡೆಯವರು ತೋರಿಸಿದ್ದಾರೆ. ಅದನ್ನು ಕರ್ನಾಟಕಿಯ ವಿದುಷೀ ಶ್ರೀಮತೀ ಟಿ. ಎಸ್. ಸತ್ಯವತೀ ಅಂಥವರೂ ಒಪ್ಪಿದ್ದಾರೆ.
ಯಕ್ಷಗಾನದಲ್ಲಿ ಬಳಕೆಯಲ್ಲಿರುವ ತಾಳಗಳು ಕರ್ನಾಟಕಿಗಿಂತ ಬೇರೆಯೆ ಆಗಿ ಕೇಳಿಬರುತ್ತವೆ. ಈಗ ಬಳಕೆಯಲ್ಲಿರುವ ಕರ್ನಾಟಕಿಯ ಸುಳಾದಿ ಸಪ್ತ ತಾಳಗಳು ಮತ್ತು ಹಿಂದುಸ್ತಾನೀ ತಾಳಗಳು ದೇಸೀ ತಾಳಗಳೇ. ಅಂದರೆ ಜಾನಪದ ಮೂಲದವೇ ಎಂದು ಸಂಶೋಧಕರು ಒಪ್ಪಿದ್ದಾರೆ. ಅಂತೆಯೇ ಯಕ್ಷಗಾನದ ತಾಳಗಳು ಕೂಡ ದೇಸೀ ತಾಳಗಳೇ. ಆದರೆ ಯಕ್ಷಗಾನದ ತಾಳಗಳಿಗೆ ಸ್ಪಷ್ಟವಾದ ಮತ್ತು ಭಿನ್ನವಾದ ರೂಪ ಇದೆ. ಬೇರೆಡೆ ಇಲ್ಲದ ಕೋರೆ/ತಿತ್ತಿತೈ ಗಳಂತಹ ತಾಳ ಇಲ್ಲಿದೆ. ಉದಾಹರಣೆಗೆ ತ್ರಿವುಡೆ ಝಂಪೆಗಳ ಕೆಲವು ವಿಶೇಷರೂಪಗಳು ಅವುಗಳ ಜಾನಪದ ಮೂಲವನ್ನು ಸ್ಪಷ್ಟಪಡಿಸುತ್ತವೆ ಎಂದು ನಾನು ಕಂಡುಕೊಂಡಿದ್ದೇನೆ. ಎಲ್ಲವೂ ಜನರಿಂದಲೇ ಹುಟ್ಟುವುದೇ ಆದರೂ, ಸ್ಥಳೀಯವಾಗಿ ಬಳಕೆಯಲ್ಲಿರುವ ಯಾವ ಪೆಟ್ಟುಗಳು ನಮ್ಮ ಯಕ್ಷಗಾನದ ತಾಳಗಳ ಬೀಜ ರೂಪ ವಾಗಿರಬಹುದು ಎಂದು ಆಲೋಚಿಸುವವುದರಲ್ಲಿ ಅರ್ಥ ಇದೆ[೫]. ಅಲ್ಲಲ್ಲಿ ಕಾಣಸಿಗುವ ಕೆಲವು ಪೆಟ್ಟುಗಳು ಡೊಳ್ಳು ಮತ್ತು ಕೋಲಾಟದ ಪೆಟ್ಟುಗಳಂತೆ ಭಾಸವಾಗುವುದಿದೆ. ಈ ರೀತಿಯ ಸ್ಥಳೀಯ ಜಾನಪದ ಪೆಟ್ಟುಗಳೇ ಕ್ರಮೇಣ ವಿಸ್ತೃತವಾಗಿ ಪರಿಷ್ಕೃತವಾಗಿ ಈಗಿನ ತಾಳದ ರೂಪ ಪಡೆದಿರಬಹುದೇ? ನೆಬ್ಬೂರರ ‘ಯಾತಕೆ ಮರುಳಾಹಿರಿ’ ತ್ರಿವುಡೆಯಲ್ಲಿ ಈ ಅಂಶ ಸ್ಪಷ್ಟವಾಗಿ ಕಾಣಸಿಗುತ್ತದೆ. ಇದನ್ನು ಸಿದ್ದಮಾಡುವುದು ಕಷ್ಟವಾದರೂ, ಇವು ತ್ರಿವುಡೆ ಝಂಪೆಗಳ ಜಾನಪದ ಉಗಮರೂಪದ ಸ್ಪಷ್ಟೀಕರಣ ಎಂದೇ ನಾನು ಬಲವಾಗಿ ನಂಬಿದ್ದೇನೆ[೫].
ಯಕ್ಷಗಾನದ ತಾಳದ ಸ್ವರೂಪವೇ ಕರ್ನಾಟಕಿಯ ಈಗಿನ ತಾಳಗಳ ಮೂಲ ರೂಪ ಎಂದು ಸಂಶೋಧಕ ಶ್ರೀ ರಾಘವ ನಂಬಿಯಾರರು ಪ್ರತಿಪಾದಿಸಿದ್ದಾರೆ. ಯಕ್ಷಗಾನದ ಆನಂದಭೈರವಿ ರಾಗ ಕೇಳಿದ ತ್ಯಾಗರಾಜರು ಮೆಚ್ಚಿ ಇನ್ನು ಆನಂದ ಭೈರವಿಯಲ್ಲಿ ಕೀರ್ತನೆ ರಚಿಸುವುದಿಲ್ಲವೆಂದರು ಎನ್ನುವ ಮಾತಿದೆ.
೭. ಯಕ್ಷಗಾನದವರು ಹೇಗೆ ಬೇಕೋ ಹಾಗೆ ಕುಣಿಯುತ್ತಾರೆಯೇ?
ಯಕ್ಷಗಾನದ್ದೇ ಆದ ಕುಣಿತದ ಶೈಲಿ ಇದೆ. ಅದಕ್ಕೆ body-language ಇದೆ. ಗೊಂಬೆಯಾಟದಿಂದ ಬಯಲಾಟ ಪ್ರಭಾವಿತವಾಗಿದೆ ಎನ್ನುವುದಿದೆ. ಹಾಗಾಗಿ ಕೆಲವು ಗೊಂಬೆಗಳ ತುಲಿತದ ನಡೆ ಕುಣಿತದಲ್ಲಿ ಕಾಣುತ್ತದೆ. ವಿಶೇಷವಾಗಿ ಸ್ತ್ರೀ ವೇಷದಲ್ಲಿ ಗೊಂಬೆಯಾಟದ ನೇಡೆಗಳು ಸ್ಪಷ್ಟ. ನಾನೇ ಕಂಡುಕೊಂಡಂತೆ, ಹೆಜ್ಜೆ ಇಟ್ಟಕಡೆಗೇ ದೇಹದ ತೂಕ ಬರಬೇಕು ಆಗ ಅದು ಯಕ್ಷಗಾನ ಕುಣಿತವಾಗುತ್ತದೆ. ಸದಿರ ನೃತ್ಯದಲ್ಲಿ (ಭರತನಾಟ್ಯ) ಹೆಜ್ಜೆ ಇಟ್ಟಕಡೆಯ ವಿರುದ್ದ ದಿಕ್ಕಿಗೆ ದೇಹದ ತೂಕ ಹೆಚ್ಚಾಗಿ ಹೋಗುತ್ತದೆ(5). ಉಳಿದ ವ್ಯಾಕರಣವೂ ಇದೆ ಅದನ್ನು ಹೊಸತೋಟದ ಮಂಜುನಾಥ ಭಾಗವತರು ಸಂಶೋಧಿಸಿ ದಾಖಲಿಸಿದ್ದಾರೆ.
ತಾಳಗಳು, ಲಯ, ರಂಗದ ಗತಿ, ಸಾಹಿತ್ಯದ ತಿಳುವಳಿಕೆ, ಮಾತು, ಅಭಿನಯ ಮತ್ತು ವೇಷಗಾರಿಕೆ ಹೀಗೆ ಹಲವು ವಿಷಯಗಳಲ್ಲಿ ಅಭ್ಯಾಸಮಾಡಿ ಯಕ್ಷಗಾನದ ಕುಣಿತವನ್ನು ಕಲಿಯಬೇಕಾಗುತ್ತದೆ. ವೇಷಧಾರಿಗಳು ಚಂಡೆ ಮದ್ದಲೆ ಮತ್ತು ಪದ ತಕ್ಕಮಟ್ಟಿಗೆ ಕಲಿಯುವ ಪದ್ದತಿ ಹಿಂದೆ ಇತ್ತು. ಹೆಸರಾಂತ ಕಲಾವಿದರಲ್ಲಿ ಹೆಚ್ಚಿನವರು ಹಿಮ್ಮೇಳ ಮುಮ್ಮೇಳಗಳಲ್ಲಿ ಅನುಭವ ಇದ್ದವರಾಗಿರುತ್ತಿದ್ದರು. ಈಗಲೂ ಇದ್ದಾರೆ.
ಬಲವಾದ ಅಧಾರ ಇಲ್ಲದಿದ್ದರೂ, ಗೊಂಬೆಯಾಟದಿಂದ ಪ್ರಭಾವಿತವಾದ ನೃತ್ಯ ಪದ್ದತಿಯೊಂದು ಹಿಂದೆ ಇದ್ದು ಅದರ ಪ್ರಭಾವ ಅಥವಾ ಅದರಿಂದಲೇ ಯಕ್ಷಗಾನದ ಕುಣಿತಕ್ಕೆ ಒಂದು ರೂಪ ಬಂದಿರಬಹುದೇ ಎಂಬ ಪ್ರಶ್ನೆಕೇಳಲು ಅಡ್ಡಿಯಿಲ್ಲ (ನಂಬಿಯಾರರು ನಮೂದಿಸುವ ಕರಾವಳಿಯ ದೇವದಾಸೀ ನೃತ್ಯ ಇದಿರಬಹುದೇ).
೮. ಯಕ್ಷಗಾನದ ಸ್ತ್ರೀ ವೇಷಮಾಡುವವರ ಕುಣಿತ ವಿಚಿತ್ರ ಏಕೆ?
ಪುರುಷರು ಸ್ತ್ರೀ ವೇಷಮಾಡುವುದರಿಂದ ಹೆಂಗಸರ ಚಲನೆಯನ್ನು ನಕಲು ಮಾಡಿ ಕುಣಿತ ವಿಚಿತ್ರವಾಗುತ್ತದೆ ಎನ್ನುವ ಹೇಳಿಕೆ ಅಬಿಪ್ರಾಯ ಇದೆ. ಈ ಅಭಿಪ್ರಾಯ ತಪ್ಪು. ಬಯಲಾಟದ ಸ್ತ್ರೀ ವೇಷದಲ್ಲಿ ಗೊಂಬೆಕುಣಿತದ ಚಲನೆಗಳು ಇನ್ನೂ ಸ್ಪಷ್ಟವಾಗಿ ಜೀವಂತವಾಗಿವೆ(5). ಗಮನಿಸಿ ನೋಡಿ. ಸ್ತ್ರೀ ವೇಷ ಗೊಂಬೆ ಕುಣಿತದ ನಕಲು. ಹಾಗಾಗಿ ಬೇರೆಯಾಗಿ ಕಾಣಿಸುತ್ತದೆ. ಹೆಂಗಸರೇ ವೇಷಮಾಡಿದರೂ ಆ ರೀತಿಯೇ ಮಾಡಬೇಕು. ಅದು ಸ್ತ್ರೀ ವೇಷದ ಕುಣಿತದ ಹಿನ್ನೆಲೆ. ಭರತನಾಟ್ಯ ಕಲಿತವರು ಸ್ತ್ರೀ ವೇಷಮಾಡುವಾಗ ಅಥವಾ ಹೆಂಗಸರೇ ವೇಷಮಾಡುವಾಗ ಗೊಂಬೆ ಕುಣಿತದ ಚಲನೆಗಳನ್ನು ಗಂಡಸರ ಅತಿ (overacting) ಎಂದು ಬಿಡಬಾರದು. ಸರಿಯಾಗಿ ಅರಿತು ಅಳವಡಿಸಿಕೊಳ್ಳಬೇಕು. ಮೋಹಿನಿ ಇತ್ಯಾದಿ ವೇಷಕ್ಕೆ ಇತ್ತೀಚೆಗೆ ಬಳಸುವ ಬಿಗಿಕಚ್ಚೆ ಯಕ್ಷಗಾನದ ವೇಷವಲ್ಲ. ಭರತನಾಟ್ಯದ ವೇಷ ಬಳಸದೇ ಯಕ್ಷಗಾನದ ವೇಷವನ್ನೇ ಬಳಸಬೇಕು. ಸ್ತ್ರೀ ವೇಷಕ್ಕೆ ಸ್ತ್ರೀಯರಿಂದಲೇ ದಕ್ಕೆ ಬಂದರೆ ವಿಪರ್ಯಾಸವಲ್ಲವೇ?
೯. ಯಕ್ಷಗಾನದ ರಂಗ ಹೇಗಿರುತ್ತಿತ್ತು.
ಆಟದ ರಂಗಕ್ಕೆ ಕತ್ತಲೆಯೇ ಪರದೆ! ಪ್ರವೇಶ ಮಧ್ಯದಿಂದ ಅಥವಾ ಅನುಕೂಲಿಸಿ ಎಡಬಲದಿಂದ! ದೊಂದಿಯ ಬೆಳಕಲ್ಲಿ ನೆಲೆದಮೇಲೆ ಆಟ, ಅದಕ್ಕೆ ಹೊಂದುವ ವೇಷದ ಬಣ್ಣ. ಹೀಗೆ ಸಂಪ್ರದಾಯ ಬೇರೆ ಇದೆ. ಆದರೆ ಈಗಿನ ಪಾಶ್ಚ್ಯಾತ್ಯ ರಂಗಕ್ಕೆ ಹೊಂದಿಕೊಂಡು ವೇಷಗಳ ಪ್ರವೇಶ ಎಡಬಲಗಳಿಂದಾಗಿದೆ, ಬೇಳಕು ದಿಗ್ಬೆಳಕಾಗಿದೆ! ಹೊಳೆ ಮುಂಡಿಗೆ ಎಂಬ ಹಗುರ ಮರದಿಂದ ಮಾಡುತ್ತಿದ್ದ ವೇಷ ಈಗ thermocolಗೆ ಬದಲಿದೆ. ಇದರಿಂದ ವೇಷದ ಗಾಂಭೀರ್ಯಕ್ಕೆ ದಕ್ಕೆ ಬರುತ್ತದೆ. ವೇಷದ ಗಾತ್ರ ಹಳೆಯ ಪರಿವೇಷಕ್ಕೆ ಹೊಂದಿಕೊಂಡು ಇದೆ. ಇಂದಿನ ಪಾಶ್ಚಾತ್ಯ ರಂಗಮಂದಿರಗಳಲ್ಲಿ ವೇಷ ಸಣ್ಣದಾಗಿ ಕಾಣುತ್ತದೆ. ಸ್ವಾರಸ್ಯ ಇಳಿದು ಹೋಗುತ್ತದೆ. ಹಾಗಾಗಿ ಯಕ್ಷಗಾನಕ್ಕೆ ಭಾರತೀಯ ರಂಗಭೂಮಿಕೆಗೆ ಹೊಂದಿಕೆಯಾಗುವ ಭಾರತೀಯವೇ ಅದ ಶೈಲಿಯ ರಂಗಸ್ಥಳ ಮತ್ತು ಸಭಾಭವನಗಳ ಸೃಷ್ಟಿ ಆಗಬೇಕಿದೆ. ಈಗಿರುವ ಹೆಚ್ಚಿನ ಸಭಾ ಭವನಗಳು ಪಾಶ್ಚಾತ್ಯರ ಅನುಕರಣೆಯೇ ಹೊರತು ನಮ್ಮ ಸ್ವಂತಿಕೆಯವಲ್ಲ.
೧೦. ಯಕ್ಷಗಾನದ ಪದ ಕರ್ನಾಟಕ ಸಂಗೀತದಷ್ಟು, ಕುಣಿತ ಭರತನಾಟ್ಯದಷ್ಟು (ಸದಿರ್ ನೃತ್ಯ) ಘನವಲ್ಲ ಎನ್ನುವುದು ಎಷ್ಟು ಸರಿ?
ಸೇಬಿನ ಹಣ್ಣು ಕಿತ್ತಲೆಯಷ್ಟು ಚಂದವಲ್ಲ ಎಂದರೆ ಹೇಗೆ? ಸಂಕೀರ್ಣವಾದ ರಂಗಭೂಮಿಯನ್ನು ಬರಿ ಸಂಗೀತಕ್ಕೋ ನೃತ್ಯಕ್ಕೋ ಹೋಲಿಸುವುದು ಕುಂಬಳಕಾಯಿಯನ್ನು ಹಲಸಿನ ಹಣ್ಣಿಗೆ ಹೋಲಿಸಿದಂತೆ. ಕಲಾವಿದರ ನೈಪುಣ್ಯ ಬೇರೆ ಕಲೆಯ ಸ್ಥಾನ ಬೇರೆ. ಸಾಮಾನ್ಯರೂ, ಹವ್ಯಾಸಿಗಳೂ ಭಾಗವಹಿಸುವುದಕ್ಕಾಗಿ ಆಟದ ಗುಣಮಟ್ಟದಲ್ಲಿ ಏರು ಪೇರಾಗುತ್ತದೆ. ಅದನ್ನು ಕಲೆಯನ್ನು ಅಳೆಯಲು ಬಳಸಬಾರದು. ಹಾಗೆಯೇ, ಯಕ್ಷಗಾನದ ಹಾಡು (ಪದ) ಉದ್ಘಾರಗಳನ್ನೂ ಮತ್ತು ರಾಗದ ಕೆಲವೇ ಭಾಗಗಳನ್ನೂ ಬಳಸಿ ಹಾಡುವಂತಾದ್ದು. ಅದಕ್ಕೆ ಧಾಟಿ ಎಂದು ಕರೆಯುವುದು (ರಾಗದ ಒಂದು ಸ್ವರೂಪ). ಯಕ್ಷಗಾನದ ರಾಗದ ಪೂರ್ಣ ಸ್ವರೂಪ ತಿಳಿಯಬೇಕಾದರೆ ಅದೇ ರಾಗದ ಬೇರೆ ಬೇರೆ ಸನ್ನಿವೇಷಕ್ಕೆ ಅಳವಟ್ಟ ೫-೬ ಹಾಡುಗಳನ್ನು ಕೇಳಬೇಕು(5). ಒಂದೇ ಪದ ಕೇಳಿ ಸ್ವರವಿನ್ಯಾಸ ಬಡವಾಗಿದೆ ಎನ್ನುವುದು ಸರಿಯಲ್ಲ. ಭಾಗವತರಿಗೆ ಸಂಗೀತದ ಕಛೇರಿ ಮಾಡಲು ಅನುಮತಿಯಿಲ್ಲ. ಅದು ಸಲ್ಲ. ಅದರ ಅಗತ್ಯ ಇಲ್ಲದ್ದರಿಂದ ಸ್ವರ ವಿನ್ಯಾಸದ ಅಭ್ಯಾಸ ಬಡವಾಗಿದೆ. ಅದನ್ನು ಕಲಿಯುವುದು ಒಳ್ಳೆಯದು. ಕುಣಿತವೂ ಹಾಗೆ, ಮಾತು ಮತ್ತು ಪದ ಇರುವುದರಿಂದ ಪೂರ್ಣ ಭಾವಾಭಿನಯಕ್ಕೆ ನೃತ್ಯಕ್ಕೋ ಅವಕಾಶವಿಲ್ಲ. ಹಾಗೆ ಹೆಚ್ಚು ಕುಣಿಯುವುದೂ ಸಲ್ಲ. ತಾಳಾದಿಗಳಿಂದ ಆರಂಭಿಸುವ ಯಕ್ಷಗಾನದ ಕಲಿಕೆಯ ಕ್ರಮ ಇತರೆ ನೃತ್ಯಗಳಿಗಿಂತ ವ್ಯವಸ್ತಿತವಾಗಿದ್ದು. ನಾಟ್ಯದ ಒಂದು ಅಂಗವಾದ ವಾಚಿಕಾಭಿನಯ ಇತರೆ ಹೆಚ್ಚಿನ ನೃತ್ಯಗಳಲ್ಲಿ ಇಲ್ಲ, ಯಕ್ಷಗಾನದಲ್ಲಿದೆ! ಅಭ್ಯಾಸ ಬೇರೆಡೆ ಇರುವಷ್ಟು ಇದೆಯಾದರು ವ್ಯಾಪಕವಾಗಿಲ್ಲ. ಹಾಗಾಗಿ ಬೇರೆ ನೃತ್ಯಕ್ಕೆ ಹೋಲಿಸುವುದು ಸರಿಯಲ್ಲ ಕಡಿಮೆ ಎನ್ನುವುದೂ ಸರಿಯಲ್ಲ.
ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಒಂದು ಆಂಶವಿದೆ. ನಮ್ಮ ರಾಗದ ರೋಗ ಕಡಿಮೆಯಾಗಬೇಕು! ರಾಗ ಒಂದನ್ನು ಪ್ರಸ್ತುತ ಪಡಿಸಿದರೀತಿಯಲ್ಲಿ ಅದು ಭಾವಗಳಿಗೆ/ರಸಕ್ಕೆ ಇಂಬು ಕೊಡುತ್ತದೆಯೇ ವಿನಃ, ಒಂದು ರಾಗವನ್ನು ಎಷ್ಟೇ ಶುದ್ಧವಾಗಿ ಹಾಡಿದರೂ ಭಾವಕ್ಕಳವಡದಂತೆ ಹಾಡಿದರೆ ಆಭಾಸವೆ ಆಗುತ್ತದೆ. ಹಾಗೆಯೇ ಶ್ರುತಿ ಶುದ್ಧವಾಗಿ ಭಾವಕ್ಕೆ ಹೊಂದಿ ವ್ಯವಸ್ಥಿತವಾಗಿ ಹಾಡಿದರೆ ಹಾಡಿದರೆ ಆಗ ಒಂದು ಭಾವಲೋಕವೇ ನಿರ್ಮಾಣವಾಗಬಹುದು ಅಥವಾ ಮಿಶ್ರರಾಗವಾಗಿ ಔಚಿತ್ಯಪೂರ್ಣವಾದ ಪ್ರಸ್ತುತಿಯಾಗಲೂಬಹುದು (ಇದನ್ನೇ ಒಂದು ನೆಪವಾಗಿಟ್ಟುಕೊಂಡು ಶುದ್ಧವಾಗಿ ಒಂದೇ ರಾಗದಲ್ಲಿ ಹಾಡಲು ಕಲಿಯದೇ ಇರುವುದು ಸರಿಯಲ್ಲ).
೧೧. ಯಕ್ಷಗಾನ ಪದ, ಕುಣಿತ, ಚಂಡೆ ಮದ್ದಲೆಯಲ್ಲಿ ಬೇರೆ ಬೇರೆ ಶೈಲಿಗಳಿವೆಯೇ?
ಹಿಂದೆ ಬಾಳೆಹದ್ದ ಕೃಷ್ಣ ಭಾಗವತರು, ಕಡತೂಕ ಮಂಜುನಾಥ ಮತ್ತು ಕೃಷ್ಣ ಭಾಗವತರು ಇವರು ಹಾಡುತ್ತಿದ್ದುದು ಉತ್ತರ ಕನ್ನಡದ ಮೂಲ ಶೈಲಿ. ಅಲ್ಲದೇ ನೇಬ್ಬೂರು ನಾರಾಯಣ ಭಾಗವತರ ಮೇಲೆ ದಕ್ಷಿಣಕನ್ನಡದ ಶೈಲಿಯ ಪ್ರಭಾವ ಇದೆಯಾದರೂ ಅವರದೂ ಹಳೆಯ ಉ.ಕ ಶೈಲಿಯೇ(1). ಕರ್ಕಿಯದೇ ಮೂಲ ಉತ್ತರ ಕನ್ನಡದ ಹಳೆಯ ಶೈಲಿ. ಇದು ಕುಣಿತಕ್ಕೂ ಅನ್ವಯಿಸುತ್ತದೆ. ಮಹಾಬಲ ಹೆಗಡೆಯವರು ಮತ್ತು ಕರ್ಕಿ ಹಾಸ್ಯಗಾರರ ಶೈಲಿಯೇ ಉತ್ತರ ಕನ್ನಡದ ಶೈಲಿ. ಉಳಿದವರೆಲ್ಲ ಹಳೆಯದನ್ನು ಹೇಳಲು ಬರದೆಯೋ, ಕುಣಿಯಲು ಬರದೆಯೋ, ಗಮನ ಇಲ್ಲದೆಯೋ ಅಥವಾ ತಮ್ಮದೇ ಹೊಸತನ ತೋರಿಸಲು ಹೋಗಿ ಸೃಷ್ಠಿಯಾದ ಹೊಸ “ಶೈಲಿ”ಯಾಗಿರಲೂ ಬಹುದು. ಹಳೆ ಭಾಗವತರನ್ನು ಕೇಳಿ, ಹಳೇ ಕುಣಿತ ನೋಡಿ ನಾನು ಈ ತೀರ್ಮಾನಕ್ಕೆ ಬರ ಬೇಕಾಯಿತು. ಇದನ್ನು ಸಂಶೋಧಕರು ಅನುಭವಿಗಳು ಒಪ್ಪಿದ್ದಾರೆಂದು ಕೇಳಿದ್ದೇನೆ. ಕರ್ಕಿಯದೇ ಆದ ಚಂಡೆ ಮದ್ದಲೆಗಳ ಶೈಲಿಯೂ ಇದೆ. ಅದು ವಿನಾಶವಾಗುವುದರಲ್ಲಿದೆ. ಕೆ ವಿ ಹೆಗಡೆಯವರಂತ ಮದ್ದಲೆಗಾರರು, ಕಡತೂಕರ ಮಗ ಗೋಪಾಲಕೃಷ್ಣ ಭಾಗವತರು ಮತ್ತು ಜೋಗಿಮನೆ ಭಾಗವತರು ಅದನ್ನು ಅಭ್ಯಾಸಮಾಡಿ ಜೀವಂತ ಇಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ. ಇದಲ್ಲದೇ ಯಕ್ಷಗಾನದ ರಾಗಗಳನ್ನು ಆಳವಾಗಿ ಅಧ್ಯಯನಮಾಡಿ ಅನೇಕ ಹೊಸವಿಚಾರಗಳನ್ನು ಕಂಡುಕೊಟ್ಟ, ಧಾಟಿ ಮತ್ತು ರಾಗಗಳನ್ನು ಸರಿಯಾಗಿ ಬಳಸುವುದನ್ನು ಸಾಧಿಸಿ ಪ್ರತಿಪಾದಿಸಿರುವ ಮಹಾಬಲ ಹೆಗಡೆಯವರ ಮಗ ಶ್ರೀ ರಾಮ ಹೆಗಡೆ ಕೆರೆಮನೆ ಅವರ ಸಂಶೋಧನೆಗಳು ಅಭಿನಂದನೀಯ.
ದಕ್ಷಿಣ ಕನ್ನಡದಲ್ಲಿ ಹಾರಾಡಿ, ಮಟ್ಟಾಡಿ ಇತ್ಯಾದಿ ಕುಣಿತದ ಮಟ್ಟುಗಳಿವೆ. ಭಾಗವತಿಕೆಯಲ್ಲೂ ಕುಂಜಾಲು ಇತ್ಯಾದಿ ಶೈಲಿಗಳಿವೆ. ಇದಲ್ಲದೇ ವೈಯುಕ್ತಿಕ ಶೈಲಿಗಳೂ ಇವೆ. ಅವುಗಳನ್ನು ನೋಡಿ ಆಡಿ ಕಲಿಯುವುದು ಬಹಳ ಇದೆ. “ಯಕ್ಷಗಾನ” ಕಲಿಯುವುದು ಕಡಿಮೆಯಾಗಿ ಯಾವುದಾದರು ಒಂದು ಶೈಲಿಯನ್ನು ವ್ಯವಸ್ತಿತವಾಗಿ ಕಲಿಯುವ ಕನಿಷ್ಟ ಅನುಕರಿಸುವ(!) ಪರಿಸ್ಥಿತಿ ಉಂಟಾದರೆ ಸೂಕ್ಷ್ಮ ಅಂಶಗಳನ್ನು ಉಳಿಸಲು ಅನುಕೂಲವಾಗಬಹುದು.
ಆಟ ಚಂದವಾಗಿ ಆದಾಗ ಅದು ಕುಣಿತದವರ ಚಮತ್ಕಾರ ಎಂದು ಭಾವಿಸುವುದು ಸ್ವಭಾವ. ಆದರೆ ವಾಸ್ತವದಲ್ಲಿ ಶಬ್ಧ ಚಂದವೋ ದೃಶ್ಯ ಚಂದವೋ ಎನ್ನುವುದನ್ನು ತಿಳಿಯುವ ಶಕ್ತಿ ನಮಲ್ಲಿ ಸರಿ ಇರುವುದಿಲ್ಲ ಎಂದು ವಜ್ಞಾನಿಕವಾಗಿ ಸಿದ್ಧಮಾಡಿದ್ದಾರೆ. ಆಂದರೆ ಶಬ್ಧ ಚಂದವಿದ್ದಾಗ ಅದು ದೃಶ್ಯದ ಚಮತ್ಕಾರ ಎಂದೇ ನಂಬಿಬಿಡುತ್ತೇವೆ. ಅದನ್ನು ಬಿಟ್ಟು ಸ್ವತಂತ್ರವಾಗಿ ಯಾವುದು ಚಂದವಿತ್ತೆಂದು ಕಲಾವಿದರನ್ನೇ ಕೇಳಿ ತಿಳಿದುಕೊಳ್ಳಬೇಕು. ಅದರಲ್ಲೂ ಇದು ಹಿಮ್ಮೇಳ ಬಲ್ಲವರಿಗೆ ಚೆನ್ನಾಗಿ ಅರಿವಾಗುತ್ತದೆ. ಅವರನ್ನೂ ಕೇಳಿ ಅಭಿಪ್ರಾಯ ಮೂಡಿಸಿಕೊಳ್ಳಬೇಕು.
ಭಾರತೀಯ ಸಂಗೀತಕ್ಕೆ ಕರ್ನಾಟಕಿ, ಹಿಂದೂಸ್ತಾನಿ ಹೇಗೊ, ಭಾರತೀಯ ನೃತ್ಯಕ್ಕೆ ಒಡಿಸ್ಸೀ, ಸಾದಿರ್ (ಭರತ ನೃತ್ಯ) ಹೇಗೋ ಹಾಗೆ ಭಾರತೀಯ ರಂಗ ಪರಂಪರೆಗೆ ಯಕ್ಷಗಾನ. ಅಂದರೆ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳಲ್ಲಿ ಒಂದು ಯಕ್ಷಗಾನ (Indian traditional theatre art). ಇಂತಹ ಅಪೂರ್ವವಾದ ಕಲೆ ಹಿರಿಯರಿಂದ ನಮ್ಮಲ್ಲಿಗೆ ಅನೂಚಾನವಾಗಿ ಬಂದಿದೆ. ಇದನ್ನು ಉಳಿಸಿ ಅದರ ಅಂದ ಚಂದ, ಮೂಲ ತತ್ವ ಹಾಳಾಗದಂತೆ ಕಾಪಾಡಿ ಕೊಳ್ಳುವುದು ನಮ್ಮೆಲ್ಲರ ಹೊಣೆ. ಕಲಾಸಕ್ತರು ಕಲಾವಿದರನ್ನು ತಪ್ಪಿದಾಗ ನಿಷ್ಠುರವಾಗಿ ಸರಿಪಡಿಸುವ ಅವಶ್ಯಕತೆ ಎಂದಿಗಿಂತ ಹೆಚ್ಚು ಈಗಿದೆ. ಆದಷ್ಟೂ ಅಭಿರುಚಿಯನ್ನು ಹಾಳುಮಾಡದೇ ಕಲಾಸಕ್ತರಿಗೆ ಕಲೆಯ ಮೂಲ ಅಂಶಗಳನ್ನು ತಲುಪಿಸುವ ಹೊಣೆ ಕಲಾವಿದರ ಮೇಲಿದೆ. ಇವೆಲ್ಲ ಗಮನದಲ್ಲಿಟ್ಟು ಆಟ ಆಡಿದರೆ ನೋಡಿದರೆ ಅದರಲ್ಲಿ ಸಾರ್ಥಕ್ಯವಿರುತ್ತದೆ, ಅಲ್ಲವೇ?
ರಾಗು ಕಟ್ಟಿನಕೆರೆ
ಯಕ್ಷಮಿತ್ರ, ಟೊರೋಂಟೋ
28th March 2014
ವೀಸೂ: ಈ ಲೆಖನವನ್ನು ಯಕ್ಷಗಾನದ ವಿದ್ವಾಂಸರೂ ಹಾಗೂ ಕಲಾವಿದರೂ ಆದ ಶ್ರೀ ರಾಮ ಹೆಗಡೆ ಕೆರೆಮನೆ ಅವರು ಒದಿ ತಪ್ಪು ತಿದ್ದಿ, ಪಕ್ಷಪಾತವಿಲ್ಲದಂತೆ ಮಾಡುವಲ್ಲಿ ಸಹಕರಿಸಿದ್ದಾರೆ. ಅವರಿಗೆ ಅನೇಕ ಧನ್ಯವಾದಗಳು.
ಆಕರಗಳು:
- ಹಿಮ್ಮೇಳ – ಶ್ರೀ ರಾಘವ ನಂಬಿಯಾರ್ ಅವರ ಸಂಶೋಧನಾ ಪ್ರಬಂಧ.
- ಯಕ್ಷಗಾನ ಛಂದಸ್ಸು – ಕಬ್ಬಿನಾಲೆ ವಸಂತ ಭಾರದ್ವಾಜ
- ಶ್ರೀ ರಾಮ ಹೆಗಡೆಯವರು – ಪೇಸ್ ಬುಕ್
- ಶ್ರೀ ನಾರಾಯಣ ಉಪ್ಪೂರರ ಆತ್ಮಕಥೆ – ಕೃಪೆ ಶ್ರೀ ಶ್ರೀಧರ ಉಪ್ಪೂರ
- ಸ್ವತಂತ್ರ ಸಂಶೋಧನೆ – ರಾಗು ಕಟ್ಟಿನಕೆರೆ
- ಸಂದರ್ಶನ – ಶ್ರೀ ಪ್ರಭಾಕರ ಜೋಷಿ ಮಂಗಳೂರು