An article on the origin of yakshagana rhythms, published in Yaksharanga - a popular Kannada Yakshagana magazine in January 2016
(Reviewed and edited by Shri Rama Hegde Keremane and Shri Gopalakrishna Bhagavat)
(Reviewed and edited by Shri Rama Hegde Keremane and Shri Gopalakrishna Bhagavat)
ತಾಯಿಯ ಒಡಲಿನಿಂದ ಹುಟ್ಟಿ ಹೊರಬರಲು ಕಲೆ ಮಗುವೇ? ಕಲೆಯಾಗಲಿ ಕಲಾತ್ಮಕ ಅಂಶಗಳಾಗಲಿ ಒಮ್ಮಿಂದೊಮ್ಮೆಗೆ ಯಾವುದೋ ಸ್ಥಳದಲ್ಲಿ ಉದ್ಭವವಾಗುವುದಿಲ್ಲ. ನಮ್ಮಲ್ಲಿರುವ ಮೂಲಭೂತ ಸ್ವಭಾವಗಳ ಅಭಿವ್ಯಕ್ತಿಯಾಗಿ ಕ್ರಮೇಣ ಶೇಖರಣೆಯಾದ ಕಲಾತ್ಮಕ ಅಂಶಗಳಿಂದ ಕಲೆಗೆ ಒಂದು ಸ್ವರೂಪ ಬರುತ್ತದೆ. ಅವು ಬದಲಾಗುತ್ತವೆ; ಬೇಳೆಯಲೂಬಹುದು ವಿನಾಶವೂ ಆಗಬಹುದು. ಆದ್ದರಿಂದ ಯಕ್ಷಗಾನ ಬಯಲಾಟದಂತಹ ಕಲೆ ಯಾವುದೋ ಊರಿನಲ್ಲಿ ಹುಟ್ಟಿದ್ದು ಎನ್ನುವುದು ಸರಿಯಲ್ಲ. ಆದರೆ ಕಲೆ ಅಥವಾ ಕಲಾತ್ಮಕ ಅಂಶಗಳು ಹೇಗೆ ರೂಪಗೊಂಡವು ಎಂದು ಯೋಚಿಸುವುದರಿಂದ ಅವುಗಳ ಹಿಂದಿನ ಮೂಲ ಉದ್ದೇಶ, ರೂಪ ಸ್ಪಷ್ಟವಾಗಬಹುದು.
ಕಲೆ ಒಂದು ರೂಪು ತಾಳಿದಮೇಲೆ ಅದರಲ್ಲಿ ಅಡಕವಾಗಿರುವ ವ್ಯಾಕರಣ ಅಥವಾ ಕಲೆಯ ಸ್ವರೂಪವನ್ನು ನಿರ್ಣಯಿಸುವ ಅಂಶಗಳ ಅನ್ವೇಷಣೆ ಆರಂಭವಾಗುತ್ತದೆ. ಇದು ಬುದ್ಧಿವಂತರ ಬುದ್ಧಿಯ ಕಸರತ್ತು. ಕಲೆ ಮೊದಲು, ಶಾಸ್ತ್ರ ನಂತರ ಹುಟ್ಟಿಕೊಳ್ಳುವುದು. ಶಾಸ್ತ್ರ ಹುಟ್ಟುವುದು ಕಲೆಯ ಅಧ್ಯಯನದಿಂದಲೇ ಹೊರತು ಕಲೆ ಶಾಸ್ತ್ರಗಳಿಂದ ಹುಟ್ಟುವುದಿಲ್ಲ. ಹುಟ್ಟಿದರೆ ಅಸಹಜವೇ ಆಗುತ್ತದೆ. ಹುಟ್ಟಿದ ಮಗು ಮಾತಾಡುವುದು ಮೊದಲು, ವ್ಯಾಕರಣ ಕಲಿಯುವುದು ಆಮೇಲೆ ಅಲ್ಲವೇ? ಹಾಗಾಗಿ ಭರತನ ನಾಟ್ಯಶಾಸ್ತ್ರದಿಂದ ಯಕ್ಷಗಾನ ಹುಟ್ಟಿತು, ವೇದದಿಂದ ಸಂಗೀತ ಹುಟ್ಟಿತು ಎನ್ನುವುದೆಲ್ಲಾ ಸರಿಯಲ್ಲ. ಆ ಕಾಲದ ಕಲೆಯ ಸ್ವರೂಪದ ಬಗೆಗೆ ನಮಗೆ ದೊರಕುವ ಪ್ರಾಚೀನ ದಾಖಲೆ ಎಂದರೆ ಸರಿಯೆ. ನಾವು ಆಡುವ ಮಾತನ್ನು ಅಧ್ಯಯನ ಮಾಡಿ ವೈಯ್ಯಾಕರಣಿಗಳು ವ್ಯಾಕರಣ ಬರೆದಿಟ್ಟರು. ಹಾಗೆಯೇ ಕಲೆ ಕೂಡ ಅನುಭವದಿಂದ ಬಳಕೆಯಿಂದ ಹುಟ್ಟಿ ಬೆಳೆಯುತ್ತದೆ ಆಮೇಲೆ ಅದರ ದಾಖಲೆಯಾಗುತ್ತದೆ.
ಅನುಭವಗಳಿಗೆ ಅರ್ಥ ಕೊಡುವುದು ನಮ್ಮ ಸ್ವಭಾವಕ್ಕೆ ಬಿಟ್ಟ ವಿಚಾರ (our personality influences meaning we attribute to our experiences). ಹೀಗಾಗಿ ಕಲಾತ್ಮಕ ಅಂಶಗಳು ಮೂಲತಃ ಸ್ವಭಾವ ಜನ್ಯ ಎಂದೇ ನನ್ನ ನಂಬಿಕೆ (artistic elements originate in personality). ಹೀಗಿರುವಾಗ ಕಲೆಯ ವ್ಯಾಪಕ ಅನುಭವ ಇಲ್ಲದವರು ತಾವು ಮಾಡಿದ ಬುದ್ಧಿಯ ಕಸರತ್ತನ್ನು ಕಲೆಯ ಮೇಲೆ ಆರೋಪಿಸಿ. ಕಲೆ ಹೀಗಿರಬೇಕು ಹಾಗಿರಬೇಕು ಎನ್ನುವುದು ಕಲಾಕಾರರ ಅನುಭವದ ಮೇಲೆ ಮಾಡುವ ಅಪಚಾರ. ಕಲಾಕಾರರೂ ತಮ್ಮ ಅನುಭವಕ್ಕೆ ಅರ್ಥವಾಗದ ಬುದ್ಧಿಯ ಕಸರತ್ತನ್ನು ಕಲೆಯಲ್ಲಿ ಬಳಸಿದರೂ ಅದೂ ಅಪಚಾರವೆ. ಅಧ್ಯಯನ ಬೇಕು ಸಂಶೋಧನೆ ಬೇಕು ಆದರೆ ಅದು ಇರುವುದನ್ನು ಆಳವಾಗಿ ಅರ್ಥೈಸಿಕೊಳ್ಳಲೋ, ಕಲೆಯ ಬೆಲೆಯನ್ನು ಪ್ರಚುರಪಡಿಸಲೋ, ಕಳೆದುದರ ಪುನರ್ಸೃಷ್ಟಿಗೋ ಹೀಗೆ ಕಲೆಯ ಪರ್ಯಾವರಣದ ಬೆಳವಣಿಗೆಗೆ ಪೂರಕವಾಗಿದ್ದರೆ ಚಂದ. ಕಲಾಕಾರರ ಅನುಭವಗಳ ಅರ್ಥವನ್ನು ಸ್ವಭಾವದ ಮಿತಿಗೆ ಸಿಲುಕದೇ ಮಾಡಿಕೊಳ್ಳುವುದರಲ್ಲಿ ಏನೂ ಕೆಡುಕಿಲ್ಲ (meaning of artistic experiences independent of personality). ಆ ಅರ್ಥ ವಿಮರ್ಶೆಗೆ ಬಳಕೆಯಾಗಲಿ ಕಲಿಕೆಗೆ ಬಳಕೆಯಾಗಲಿ ಆದರೆ ಕಲಾತ್ಮಕ ಅಂಶಗಳನ್ನೇ ಬುಡಮೇಲು ಮಾಡಬಾರದು. ಅಂದರೆ ಮೂಲ ಅನುಭವವನ್ನೋ ಅಭಿವ್ಯಕ್ತಿಯನ್ನೊ ಆಧಾರವಾಗಿ ಇಟ್ಟುಕೊಳ್ಳದೇ ಅದರ ವಿವರಣೆಯನ್ನೋ ಶಾಸ್ತ್ರವನ್ನಷ್ಟೆ ಕಲೆಯ ಮೇಲೆ ಆರೋಪಿಸುವುದು ಸರಿಯಲ್ಲ. ಈ ರೀತಿ ಬುಡಮೇಲಾದ ಅಂಶಗಳಲ್ಲಿ ತಾಳವೂ ಒಂದು. ಅಂದರೆ, ತಾಳದ ವಿವರಣೆ ಬೇರೆ ತಾಳ ಬೇರೆ! ಇದರ ವ್ಯತ್ಯಾಸ ತಿಳಿದುಕೊಳ್ಳಲು ಪ್ರಯತ್ನಮಾಡೋಣ. ಇದು ಯಾವುದೇ ಶಾಸ್ತ್ರಗಳ ಅವಹೇಳನ ಅಲ್ಲ (ಯಾವುದೂ ಟೀಕೆಗೆ ಮೀರಿದ್ದಲ್ಲ ಆದರೆ ಶಾಸ್ತ್ರವನ್ನು ಟೀಕಿಸುವಾಗ ಶಾಸ್ತ್ರಕಾರರಿಗಿಂತ ಆಳಕ್ಕೆ ಅಗಲಕ್ಕೆ ಟೀಕಿಸುವವರು ಹೋಗಿದ್ದಾರೆ ಮತ್ತು ಎಲ್ಲಾ ದೃಷ್ಟಿಗಳಿಂದ ವಿಷಯವನ್ನು ಪರಿಗಣಿಸಿದ್ದಾರೆಂದು ತೋರಿಸುವುದು ಅವಶ್ಯಕವಾಗುತ್ತದೆ. ಇಲ್ಲದಿದ್ದರೆ ಟೀಕೆಗೆ ಯಾವ ಬೆಲೆಯೂ ಇಲ್ಲ). ಶಾಸ್ತ್ರ ಬೇಕು ಆದರೆ ಅವುಗಳ ಅನುಚಿತ ಬಳಕೆ ಆಗಬಾರದು ಎನ್ನುವ ಕಳಕಳಿ.
ತಾಳ ಎಂಬುದು ಸಂಗೀತದಲ್ಲಿ ಬಳಕೆಯಲ್ಲಿರುವ ಒಂದು ಕಲಾತ್ಮಕ ಅಂಶಕ್ಕೆ ಇರುವ ಪಾರಿಭಾಷಿಕ ಪದ ಅಥವಾ ಒಂದು ಕಲಾತ್ಮಕ ಅಂಶಕ್ಕೆ ಅಧ್ಯಯನಶೀಲರೋ ಕಲಾಕಾರರೋ ಬಳಕೆಗೆ ಕೊಟ್ಟ ಹೆಸರು. ಅಧ್ಯಯನಕ್ಕೆಂದು ಮಾಡಿದ ತಾಳಗಳ ಜಾತಿಬೇಧ ವಿವರಣೆಗಳೇ ತಾಳಗಳನ್ನು ಅರ್ಥೈಸಿಕೊಳ್ಳುವ ಸಾಧನವಾಗಿ ತಾಳದ ಮೂಲ ಅನುಭವ ಅವಗಣನೆಗೆ ಒಳಗಾಗಿದೆ ಎಂದು ಅನ್ನಿಸುತ್ತದೆ. ಬಯಲಾಟದ ತಾಳ ಎನ್ನುವ ಕಲಾತ್ಮಕ ಅಂಶವನ್ನು ವಿವರಿಸಲು ಅಥವಾ ಕಲಿಸಲು ಮಾಡಿದ ಬಡ್ತಿಗೆಗಳೇ ತಾಳ, ಅದನ್ನು ಕಲಿತರೆ ತಾಳ ಕಲಿತಂತೆ ಎಂಬ ಅರ್ಥ ಈಗ ಎಲ್ಲ ಕಡೆ ಮನೆಮಾಡಿದೆ. ಅದು ಸರಿಯಲ್ಲ. ತಾಳದ ಹೆಸರೇ ಗೊತ್ತಿಲ್ಲದ ಅದ್ಭುತ ನೃತ್ಯಪಟುಗಳಿರಬಹುದು. ಉದಾಹರಣೆಗೆ ಸದಿರ್ (ಭರತ ನಾಟ್ಯ) ಕಲಿಸುವವರಿಗೆ ತಾಳ ಕಲಿಸುವ ಮೂಲಕ ಪಾಠ ಮಾಡುವುದಿಲ್ಲ. ವ್ಯಾಕರಣ ಬರದವರಿಗೆ ಮಾತುಬಾರದೆಂದರೆ ಸರಿಯೇ? ಅಡುಮಾತಿನ ಬದಲು ಶುದ್ಧವ್ಯಾಕರಣ ಬಳಸಿದರೆ ಸಹ್ಯವಾಗುತ್ತದೆಯೇ? ಹೀಗೆ, ತಾಳ ಎಂಬ ಲಯ ವ್ಯವಸ್ಥೆಯ ಮೂಲ ಏನು? ತಾಳವಿರಲೇ ಬೇಕೆ? ತಾಳಕ್ಕೆ ಹಾಡಬೇಕೇ, ಹಾಡಿದ್ದರಲ್ಲಿ ತಾಳವಿರಬೇಕೇ? ಇವನ್ನೆಲ್ಲ ಒಮ್ಮೆ ಅಲೋಚಿಸುವ ಪ್ರಯತ್ನ ಇದು.
ನಾವು ದಿನ ನಿತ್ಯ ಆಡುವ ಮಾತಿನಲ್ಲಿ ಧಾಟಿಗಳಿವೆ ಹಾಗೇ ಲಯವೂ (rhythm) ಇದೆ. ಬರಹವನ್ನು ಓದಿದಾಗಲೂ ಅಲ್ಲಿ ಧಾಟಿ ಲಯಗಳು ಹುಟ್ಟುವುದನ್ನು ಕಾಣಬಹುದು. ಬರಹ ಮಾತಿನ ಸರಳರೂಪ (abstraction) ಎಂದು ಹೆಚ್ಚಿನ ವಿದ್ವಾಂಸರು ಒಪ್ಪಿದ್ದರಿಂದ ಮಾತಿನಿಂದಲೇ (speech) ಲಯ ಹುಟ್ಟುತ್ತದೆ ಎಂದಿಟ್ಟುಕೊಳ್ಳಬಹುದು. ಬರಿ ಮಾತಿನ ಲಯವನ್ನೇ ಚಂಡೆ ಮದ್ದಲೆಗಳಲ್ಲಿ ನುಡಿಸಲೂಬಹುದು ಎಂದು ಕಲಾವಿದರು ಒಪ್ಪುತ್ತಾರೆ. ಒಂದಾದ ನಂತರ ಇನ್ನೊಂದಾಗಿ ಮಾತಿನಲ್ಲಿ ಕಾಣಿಸಿಕೊಳ್ಳುವ ಲಯಗಳಲ್ಲಿ ಇರುವ ಸಂಬಂಧವನ್ನೇ ಛಂದಸ್ಸು ಎಂದು ಕರೆಯುವುದು. ಈ ಲಯ ಸಂಬಂಧವನ್ನು ಗುರುತಿಸಲು ನಮ್ಮ ಪೂರ್ವಿಕರು ಅನುಷ್ಟುಪ್, ರಗಳೆ ಇತ್ಯಾದಿಯಾಗಿ ಹೆಸರುಗಳನ್ನು ಕೊಟ್ಟಿದ್ದಾರೆ. ಛಂದಸ್ಸು ಮಾತಿನ (ಬರಹದ) ಪೂರ್ಣ ಸೊಲ್ಲನ್ನು (Para) ಗಮನಿಸಿದಾಗ ಕಾಣುವಂತದ್ದು. ಮಾತನ್ನು ಒಂದು ಲಯ ಸಂಬಂಧ ಸತತವಾಗಿ ಪುನಃ ಪುನಃ ಮರುಕಳಿಸುವಂತೆ ಆಡಿದರೆ ಅದು ತಾಳವಾಗಿ ಕಾಣಿಸುತ್ತದೆ. ಛಂದಸ್ಸಿನ ಲಯವನ್ನೇ ಬಳಸಿ, ಅತಿ ಕಡಿಮೆ ಬದಲಾವಣೆ ಮಾಡಿ ಒಂದು ತಾಳದ ಲಯಕ್ಕೆ ಸಿಕ್ಕುವಂತೆ ಓದುವುದು (ಮಾತಾಡುವುದು/ಹಾಡುವುದು) ಒಂದು ಕಲೆ. ಹೀಗೆ ಮಾಡುವಾಗ ಪದ್ಯವನ್ನು(ಸಾಹಿತ್ಯವನ್ನು) ತಾಳದ ಹಲವಾರು ಆವರ್ತನೆಗೆ ಅಳವಡಿಸಬೇಕಾಗಬಹುದು. ಒಂದು ತಾಳದ ಹಲವಾರು ಅವರ್ತನೆಗೆ ಅಳವಟ್ಟ ಛಂದೋಬದ್ಧ ಸಾಹಿತ್ಯವೇ ಮಟ್ಟಾಗಿ ಕಾಣಿಸಿಕೊಳ್ಳುತ್ತದೆ. ತಾಳ ಅಥವಾ ಛಂದಸ್ಸು ಯಾವುದು ಬದಲಿಸಿದರೂ ಮಟ್ಟು ಬೇರೆ ಸೃಷ್ಟಿಯಾಗುತ್ತದೆ. ಕೆಳಗಿನ ಉದಾಹರಣೆಯಲ್ಲಿ ೧೪ ಮಾತ್ರಾಕಾಲವನ್ನು ೧೪ ಅಕ್ಷರಕಾಲಕ್ಕೆ ಹೊಂದಿಸಿದ್ದನ್ನು ತೋರಿಸಿದೆ.
ಛಂದಸ್ಸು(ಓಂದು ಪಾದ ಮಾತ್ರ ತೋರಿಸಿಲಾಗಿದೆ): ಭಾಮಿನಿ ಷಟ್ಪದಿ
ಮಾತ್ರಾಕಾಲ
|
೧
|
೨
|
೩
|
೪
|
೫
|
೬
|
೭
|
೮
|
೯
|
೧೦
|
೧೧
|
೧೨
|
೧೩
|
೧೪
|
ಸಾಹಿತ್ಯ
|
ಅ
|
ಜ
|
ನು
|
ಹ
|
ರಿ
|
ರು
|
s
|
ದ್ರಾ
|
s
|
ದಿ
|
ಗ
|
ಳು
|
ನೆ
|
ರೆ
|
ತಾಳ (ಅನೇಕ ರೀತಿಯಲ್ಲಿ ಛಂದಸ್ಸಿಗೆ ಹೊಂದಿಸಬಹುದು. ಇದು ಒಂದು ರೀತಿ ಅಷ್ಟೆ): ತ್ರಿವುಡೆ
ಅಕ್ಷರಕಾಲ
|
೧
|
೨
|
೩
|
೪
|
೫
|
೬
|
೭
|
೮
|
೯
|
೧೦
|
೧೧
|
೧೨
|
೧೩
|
೧೪
|
ಸಾಹಿತ್ಯ
|
ಅ
|
ಜ
|
ನು
|
ಹ
|
ರಿ
|
ರು
|
ದ್ರಾ
|
ಆ
|
ದಿ
|
ಗ
|
ಳು
|
ಉ
|
ಛಂದಸ್ಸು ಮಟ್ಟಿನ ತುಲನೆಯಲ್ಲಿ ತಾಳವನ್ನು ಗಮನಿಸಿದ್ದಾಯಿತು ಆದರೆ ತಾಳ ಹುಟ್ಟುವುದು ಹೇಗೆ ಎಲ್ಲಿಂದ? ಛಂದಸ್ಸಿನ ಲಯವನ್ನೇ ಬಳಸಿ ಅತಿ ಕಡಿಮೆ ಬದಲಾವಣೆ ಮಾಡಿ ಆ ಲಯಸಂಬಂಧ ಸತತವಾಗಿ ಪುನಃ ಪುನಃ ಮರುಕಳಿಸುವಂತೆ ಮಾತಾಡಿದರೆ/ಹಾಡಿದರೆ ತಾಳ ಕಾಣಿಸುತ್ತದೆ ಎಂದಾದರೆ ತಾಳ ಎನ್ನುವುದಕ್ಕೆ ಛಂದೋಲಯವೇ ಭೀಜ ಎಂದಾಯಿತು. ಅಥವಾ ಛಂದಸ್ಸಿನಲ್ಲಿ ಮೂಲಲಯವೊಂದು ಅಡಕವಾಗಿದ್ದು ಅದೇ ಸಾಹಿತ್ಯಕ್ಕೆ ಹೊಂದಿ ಬೇರೆ ಬೇರೆ ರೀತಿಯಲ್ಲಿ ವಿಸ್ತಾರಗೊಳ್ಳುತ್ತಾ ಕಾಣಿಸಿಕೊಂಡು ಒಂದು ಛಂದಸ್ಸಿನ ಸೃಷ್ಟಿಯಾಗುತ್ತದೆ. ಛಂದಸ್ಸಿನಲ್ಲಿ ಅಡಕವಾಗಿರುವ ಈ ಒಂದು ಮೂಲ ಲಯಬಂಧದಿಂದ (fundamental metric pattern) ತಾಳ ಹುಟ್ಟುತ್ತದೆ. ಗದ್ಯವನ್ನೂ ತಾಳಕ್ಕೆ ಹೊಂದಿಸಿ ಓದಬಹುದಲ್ಲ ಎಂಬುದಕ್ಕೆ ಮೂಲಲಯಬಂಧ ತಾಳಕ್ಕೆ ಹೊಂದದಿರುವುದು ಮೇಲ್ನೋಟಕ್ಕೆ ಅಲ್ಲಿ ಕಾಣಿಸುತ್ತದೆ ಎಂಬುದೇ ಉತ್ತರ. ಆದರೆ ಛಂದಸ್ಸಿನ ಮೂಲಲಯಬಂಧ ಒಂದರಿಂದಲೇ ತಾಳ ರೂಪಗೊಳ್ಳಲಾರದು. ಛಂದಸ್ಸಿನ ಮಾತ್ರಾಕಾಲವನ್ನು ತಾಳದ ಅಕ್ಷರಕಾಲವನ್ನಾಗಿ ಪರಿವರ್ತನೆ ಮಾಡಿದಾಗ ಸಾಹಿತ್ಯ ತಾಳಕ್ಕೆ ಅಳವಡುತ್ತದೆ. ಛಂದಸ್ಸಿನಿಂದ ತಾಳವಾಗಲು ಈ ಮೂರು ಪ್ರಕ್ರಿಯೆ ಇದೆ ಅನ್ನಿಸುತ್ತದೆ:
- ಛಂದಸ್ಸಿನ ಮೂಲಲಯಬಂಧವನ್ನು ಗುರುತಿಸುವುದು.
- ಛಂದಸ್ಸಿನ ಮೂಲಲಯಬಂಧದ ಮಾತ್ರಾಕಾಲವನ್ನು ತಾಳದ ಅಕ್ಷರಕಾಲಕ್ಕೆ ಬದಲಿಸುವುದು.
- ಮತ್ತು ಮೂಲಲಬಂಧವನ್ನು ತಾಳಕ್ಕೆ ಹೊಂದಿಸಲು ಬೇಕಾಗಿ ಕೆಲವು ಅಕ್ಷರಕಾಲದ ಅಲಾಪನೆ ಅಥವಾ ಮೌನ ಸೇರಿಸಿ ಸಾಹಿತ್ಯವನ್ನು ಓದುವುದು.
ಅಂದರೆ ಛಂದಸ್ಸಿನಲ್ಲಿ ಸಾಹಿತ್ಯದಿಂದ ಕಾಲ ವಿಭಜನೆಯೊಂದು ಸೃಷ್ಟಿಯಾದರೆ, ತಾಳದಲ್ಲಿ ಕಾಲಗಣನೆಯೇ ಮೂಲ ಅದಕ್ಕೆ ಸಾಹಿತ್ಯ ಹೂಂದಿಸಬೇಕಾಗುತ್ತದೆ. ಇದೇ ಛಂದಸ್ಸಿಗೂ ತಾಳಕ್ಕೂ ಇರುವ ಮೂಲ ತಾಂತ್ರಿಕ ವ್ಯತ್ಯಾಸ ಎಂದು ನಾನು ನಂಬಿದ್ದೇನೆ. ಯಕ್ಷಗಾನ ಬಯಲಾಟದ ತಾಳಕ್ಕೂ ಬೇರೆ ಸಂಗೀತದ ತಾಳಕ್ಕೂ ಮತ್ತು ಭಾಗವತಿಕೆಗೂ ಬೇರೆ ಹಾಡಿನ ಪದ್ದತಿಗೂ ಇರುವ ಮೂಲ ವ್ಯತ್ಯಾಸ ಇದರಲ್ಲೇ ಅಡಗಿರಬಹುದೇ? ತಾಳದ ಕಾಲಕ್ಕೆ ಮೂಲಲಯಬಂಧದ ಗಣನೆ ಇಲ್ಲದೇ ಸಾಹಿತ್ಯ ಹೊಂದಿಸುವುದರಿಂದ ಬೇರೆ ಪದ್ದತಿಗಳಲ್ಲಿ ಸ್ವಾಭಾವಿಕವಾದ ಮಟ್ಟು ಕಾಣಿಸದೇ ತಾಳವೇ ಎದ್ದುಕಾಣುತ್ತದೆ. ಯಕ್ಷಗಾನದಲ್ಲಿ ಮೂಲಲಬಂಧ ಭಂಗವಾಗದೇ ಮಟ್ಟು ಕಾಣಿಸುತ್ತದೆ, ಕಾಣಿಸಬೇಕು. ಇಲ್ಲಿ ಇನ್ನೊಂದು ಗಮನಿಸಬೇಕಾದ್ದೆಂದರೆ, ಆಲಾಪ ಮೌನಗಳಿಲ್ಲದೇ ಸಾಹಿತ್ಯವನ್ನೇ ಹೆಚ್ಚು ತುಂಬಿ ತಾಳಕ್ಕೆ ಹೊಂದಿಸುವುದು ಹಳೆ ಯಕ್ಷಗಾನದ ಭಾಗವತಿಕೆಯ ಮೂಲಗುಣ. ಇದರಿಂದ ತಾಳದ ಸಂಕೀರ್ಣತೆ ಸ್ವಾಭಾವಿಕವಾಗಿ ಹೆಚ್ಚುವುದಲ್ಲದೇ ಲಯವನ್ನು ತೋರಿಸುವುದನ್ನು ಸುಲಭವಾಗಿಸುತ್ತದೆ ಮತ್ತು ಯಕ್ಷಗಾನದ ಮೂಲ ಶೈಲಿಯನ್ನೂ ಇದೇ ನಿರ್ಧರಿಸುತ್ತದೆ ಎಂಬುದೆಲ್ಲಾ ನನ್ನ ಅಭಿಪ್ರಾಯ.
ಹಾಗೇ ದ್ರುತ, ಅನುದ್ರುತಗಳ ಪರ್ಮ್ಯೂಟೇಷನ್ ಕಾಂಬಿನೇಷನ್ ಮಾಡಿ ತಾಳ ಸೃಷ್ಟಿಸಬಹುದು ಎನ್ನುವುದು ಬುದ್ದಿಯ ಕಸರತ್ತಾಗುತ್ತದೆ. ಲಘು ಎಂದರೆ 'ಒಂದು ಚಪ್ಪಾಳೆ ನಂತರ ಬೆರಳಿನಿಂದ ಎಣಿಸುವುದು' ಅನುದ್ರುತವೆಂದರೆ 'ಒಂದು ಚಪ್ಪಾಳೆ' ಇತ್ಯಾದಿಗಳು ಕಲಿಯಲು ಅಭ್ಯಾಸ ಮಾಡಲು ಮಾಡಿದ್ದೇ ಹೊರತು ಅದೇ ತಾಳದ ವಿವರಣೆಯಾಗಲಾರವು. ಲಘು ಎಂದರೆ ಏನು? ಅನುಭವದಲ್ಲಿ ಮತ್ತು ನುಡಿಸುವಿಕೆಯಲ್ಲಿ ಅನುದ್ರುತಕ್ಕಿಂತ ಬೇರೆ ಹೇಗೆ? ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಿದಾಗ ತಾಳದ ವರ್ಗೀಕರಣವನ್ನು ಅರ್ಥಪೂರ್ಣವಾಗಿ ತಾಳದ ಕಲಿಕೆಗೆ ಬಳಸಬಹುದು. ದ್ರುತ, ಅನುದ್ರುತ ಮತ್ತು ಲಘು ವಿಭಜನೆಗಳು ಕರ್ನಾಟಕಿಯಲ್ಲಿ ಬಳಕೆಯಲ್ಲಿದ್ದರೂ ಪುರಾತನ ಸಂಗೀತಕ್ರಮಗಳಲ್ಲಿ ಅವಕ್ಕೆ ಇದ್ದ ಅರ್ಥವನ್ನು ಕಳೆದುಕೊಂಡಿವೆ ಎಂದು ಅಭಿಪ್ರಾಯವಿದೆ. ಹೀಗಿರುವಾಗ ನುಡಿತದಲ್ಲಿ ಅನುಭವದಲ್ಲಿ ಕಾಣುವ ಅಂಶಗಳ ಮೂಲಕವೇ ತಾಳದ ಕಲಿಕೆ, ವಿವರಣೆ ಆಗಬೇಕು.
ಎಂಬಲ್ಲಿಗೆ ತಾಳ ಎನ್ನುವುದನ್ನು ಬಡ್ತಿಗೆಗಳಲ್ಲಿ ಬಣ್ಣಿಸಿ ಮುಗಿಸುವಂತಾದ್ದಲ್ಲ. ಒಂದು ಬಡ್ತಿಗೆ ತಾಳದ ಒಂದು ರೂಪ ಅಷ್ಟೆ. ಹುಸಿ, ಪೆಟ್ಟು, ಚಪ್ಪಾಳೆಗಳ ಮೂಲಕ ತೋರಿಸಿ ಇದೇ ತಾಳ ಎನ್ನುವಂತಾದಲ್ಲ. ಅಕ್ಷರಕಾಲದ, ಅದಕ್ಕೆ ಸಾಹಿತ್ಯ ಹೊಂದಿಸುವ ಅನುಭವ ಕರಗತವಾದಾಗ, ಹಲವಾರು ಆವರ್ತನೆಗಳ ಕಾಲ ತಪ್ಪದೇ ಲಯ ಸೃಷ್ಟಿಸಲು ಬಂದಾಗ, ಕೊನೆಗೆ ನಮ್ಮ ದೇಹದ ಎಲ್ಲ ಅಂಗಾಂಗಗಳ ಚಲನೆ ತಾಳವನ್ನು ಸ್ಪುಟವಾಗಿ ಹೊಂದಿಕೊಂಡು ಹೋಗಲು ಕಲಿತಾಗ ತಾಳ ಕಲಿತಂತೆ ಆಯಿತೇ ಹೊರತು ಬರಿ ಕಲಿಸಿದ ಬಡ್ತಿಗೆಗಳಿಗೆ ಹೆಜ್ಜೆ ಹಾಕಲು ನುಡಿಸಲು ಬಂದರೆ ತಾಳ ಕಲಿತಂತೆ ಆಗಲಿಲ್ಲ. ಇದನ್ನು ಯಕ್ಷಗಾನವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಬೇಕು ಎಂಬುದು ಈ ಲೇಖನದ ಮುಖ್ಯ ಕಳಕಳಿ.
ಹವೀಕರ ಸಂಪ್ರದಾಯದ ಹಾಡುಗಳಲ್ಲಿ ಅಲ್ಲಲ್ಲಿ ತಾಳಕ್ಕೆ ಹೊಂದುವ ಆದರೆ ಆವರ್ತನೆಗೆ ಸಿಕ್ಕದ ಹಾಡುಗಳೇ ಹೆಚ್ಚು. ಇವನ್ನು ಒಂದು ರೀತಿಯಲ್ಲಿ ಛಂದಸ್ಸಂಗೀತ ಎನ್ನಬಹುದೇನೋ. ಅಂದರೆ ತಾಳದ ಪೂರ್ಣರೂಪವಿಲ್ಲದೇ ಛಂದಸ್ಸಿನ ನೇಡೆಯಲ್ಲೇ ಅವರ್ತನೆಗೆ ಹೊಂದಿಸದೇ ಹಾಡುವುದರಲ್ಲಿ ಏನೂ ಕಡಿಮೆತನ ಇರಬೇಕಿಲ್ಲ. ಅದು ಬೇರೆ ಬಳಕೆ ಅಷ್ಟೆ.
ಇತ್ತೀಚೆಗೆ ಯಕ್ಷಗಾನ ಶಾಸ್ತ್ರೀಯ, ಹೀಗೆ ಇರಬೇಕು, ಒಂದು ಒಪ್ಪಂದ ಬೇಕು, ಹೊಂದಾಣಿಕೆ ಬೇಕು ಎಂಬ ಭರದಲ್ಲಿ ಹೊಸ ಹೊಸ ನಿಯಮಗಳು "ಶಾಸ್ತ್ರ"ಗಳೂ ಬರುತ್ತಿರುವ ಬರುವ ಸಾಧ್ಯತೆ ಇರುವುದರಿಂದ ಅವುಗಳಿಂದ ನಮ್ಮ ಹಿರಿಯರ ಕಲಾವಿದರ ಅನುಭವಗಳ ಮೇಲೆ ಅಘಾತವಾಗಬಾರದು. ಇದ್ಯಾವುದೂ ಶಿಸ್ತು ನಿಯಮದ ವಿರುದ್ದ ಅಲ್ಲ. ಬೇಕೆಂದ ಹಾಗೆ ಆಡುವ ಆಟಗಳಲ್ಲಿ ಸ್ವಚ್ಚತೆ ಬೇಕು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹಿರಿಯ ಕಲಾವಿದರೆಂದಾಕ್ಷಣ ಅವರು ಮಾಡುವ ತಪ್ಪನ್ನೆಲ್ಲಾ ಒಪ್ಪಿಕೊಳ್ಳಬೇಕಾಗಿಯೂ ಇಲ್ಲ. ಇದು ನಮ್ಮ ಅನುಭವ ಅನುಸರಿಸಿ ಎನ್ನುವುದೂ ಸರಿಯಲ್ಲ. ಆದರೆ ನಿಯಮಗಳು ಶಿಸ್ತುಗಳಿಗೆ ವಿದ್ವಜ್ಜನ ಮಾನ್ಯವಾದ ಅನುಭವದ ಆಧಾರ ಬೇಕು, ನಿಯಮಗಳು ಸೃಜನಶೀಲತೆಗೆ ಅಡ್ಡಿಯಾಗಬಾರದು ಮತ್ತು ಕಲಾತ್ಮಕ ಅಂಶಗಳನ್ನು ತಿರುಚದಂತೆ ಕಾಯ್ದುಕೊಳ್ಳುವ ಹೊಣೆ ನಮ್ಮ ಮೇಲಿದೆ ಎನ್ನುವುದನ್ನು ಈ ಮೇಲಿನ ಉದಾಹರಣೆಯ ಮೂಲಕ ಗಮನಿಸಬಹುದು ಎಂದುಕೊಂಡಿದ್ದೇನೆ. ಕಲಾತ್ಮಕ ಅಂಶಗಳನ್ನು ಅದರ ಅನುಭವ ಇರುವವರಿಂದ ಶುದ್ಧವಾಗಿ ಕಲಿಯಬಹುದೇ ಹೊರತು, ಕೇವಲ ಪುಸ್ತಕಗಳಲ್ಲಿರುವ ವಿವರಣೆಗಳಿಂದ ಅಲ್ಲ. ಎಲ್ಲ ಅನುಭವಗಳನ್ನು ಅಕ್ಷರರೂಪದಲ್ಲೇ ತೋರಿಸಬಹುದಾಗಿದ್ದರೆ ಯಕ್ಷಗಾನವೆಂಬ ಕಲಾಮಾಧ್ಯಮವೇ ಅಗತ್ಯವಿರಲ್ಲಿಲ್ಲ ಅಲ್ಲವೇ? ಅಕ್ಷರರೂಪದ ವಿವರಣೆಗೆ ಮಿತಿ ಇದೆ ಎಂದಾದರೆ ಅವುಗಳನ್ನೇ ಬಳಸಿ ಅನುಭವದ ಸೃಷ್ಟಿ ಮಾಡುವ ಹವ್ಯಾಸಕ್ಕೆ ಎಡೆ ಮಾಡಿಕೊಡದಿರುವುದೇ ಒಳ್ಳೆಯದು.
ರಾಗು ಕಟ್ಟಿನಕೆರೆ
ಯಕ್ಷಮಿತ್ರ ಟೊರೋಂಟೋ www.yakshamitra.com