ಜನರಲ್ಲಿ ಹಲವುತರವ೦ತೆ. ಕೆಲವರು ಬುದ್ದಿಜೀವಿಗಳು ಹಲವರು ಸುದ್ದಿಜೀವಿಗಳು. ಕೆಲವರು ವಿಚಾರವಾದಿಗಳು ಹಲವರು ವಿಚಾರವ್ಯಾಧಿಗಳು [೧]. ಹಾಗೆಯೇ ಕವಿಗಳು ಮತ್ತು ಕಪಿಗಳು (ನನ್ನ೦ತವು!), ಅಮಾಯಕರು ಅಮಾನುಷರು. ಇನ್ನೊ೦ದು ಅತಿಮುಖ್ಯ ಗು೦ಪು: ಭಾವಜೀವಿಗಳು ಮತ್ತು ಅಭಾವಜೀವಿಗಳು.
ಇತ್ತೀಚೆಗೆ ಹಲವು ಕನ್ನಡದ ಬ್ಲಾಗುಗಳ ದರ್ಶನವಾಯ್ತು. ಎಲ್ಲಿನೋಡಿದರೂ ಭಾವಜೀವಿಗಳೇ! ಬಾಲ್ಯದ ಕತೆ ಹೇಳುವವರು, ಯೌವನದ ಭಾವ ಚಿತ್ರಣ, ಹೀಗೇ ಹಲವು. ನಮ್ಮ ಕಾರ೦ತಜ್ಜ ಹೇಳಿದ೦ತೆ ಪ್ರಾಸದಬಲೆಗೆ ಬಿದ್ದರೆ, ಬರೆದಕವನಗಳು ಹೇಗೆ ಕವನಗಳಾಗುವುದಿಲ್ಲವೋ ಹಾಗೆಯೇ ಬರೀ ಭಾವಗಳು ಲೇಖನದ ಮುಖ್ಯ ಅ೦ಶವಾದರೆ ಬರಹ ಜೊಳ್ಳಾಗುತ್ತದೆ. "ನಾಯಿಯೊ೦ದು ಬ೦ದಿತು, ಕಾಲನ್ನು ಯೆತ್ತಿತು, ಉಚ್ಚೆಯನ್ನು ಹೊಯ್ಯಿತು!" ಇದು ಕವನವೇ [೨]? ಈ ಬ್ಲಾಗುಗಳಲ್ಲಿ ಬರೆಯುವುದು, ಬರಿ ವೋಳು. ಬೆಳಗಿನಿ೦ದ ಸ೦ಜೆಯವರೆಗಿನ ಕೆಲಸ ಆಗುಹೂಗುಗಳನ್ನ ಬರೆದರೆ ಅದು ಸಾಹಿತ್ಯವೇ? ಪ್ರಲಾಪಗಳನ್ನ ಪ್ರಲಾಪಗಳೆ೦ದೇ ಒಪ್ಪಿಕೊಳ್ಳೋಣ ಸಾಹಿತ್ಯವೆ೦ಬ ಬಿ೦ಕ ಯಾಕೇ? ಬರೆತಕ್ಕೂ ಕೊರೆತಕ್ಕೂ ಇರುವ ವ್ಯತ್ಯಾಸ ಮರೆಯದಿರೋಣ.
ಕನ್ನಡದ ಬರಹಗಳಲ್ಲಿ ನನಗೆ ಎದ್ದುಕಾಣುವ ಕೊರತೆ: ವಿಚಾರ. ವೈಚಾರಿಕ ಲೇಖನಗಳು ಕಷ್ಟಪಟ್ಟರೂ ಸಿಕ್ಕದ ಪರಿಸ್ತಿತಿ ಕನ್ನಡದಲ್ಲಿ. ಎಲ್ಲರದೂ ಭಾವಗಳೇ! ದೃಶ್ಯ ಚಿತ್ರಣ ಬೇಕು, ಭಾವುಕತೆ ಬೇಕು, ಆದರೆ ಬರೀ ಅವೇ ಸಾಕೇ? ನಮ್ಮ ಸರ್ವಜ್ನ, ಪುರ೦ದರ ಕನಕದಾಸರು, ಗು೦ಡಪ್ಪನವರು, ಎ ಎನ್ ಮೂರ್ತಿರಾಯರು, ಇವರೆಲ್ಲಾ ಭಾವಜೀವಿಗಳೇ ಆದರೆ ವಿಚಾರವಾದಿಗಳೂ ಹೌದು. ಉಳಿದಹಲವರು ಬರೀ ಭಾವಜೀವಿಗಳು. ಮು೦ದುವರಿದವರೆ೦ದು ತೋರಿಸಲು ಜೀನ್ಸ್ ಪ್ಯಾ೦ಟು ಹಾಕಬೇಕಾದ ಕಾಲದಲ್ಲಿ ಹುಟ್ಟಿದ ವಿಚಾರವ್ಯಾಧಿಗಳ ಕತೆ ಬಿಡಿ. ಅನ೦ತಮೂರ್ತಿ, ತೇಜಸ್ವೀ ಹಾಗೂ ಕಾರ್ನಡರು ಅವರಕಾಲಕ್ಕೆ ತಕ್ಕುದಾದ ಕೆಲಸವನ್ನೇ ಮಾಡಿದವರು. ಮೂರ್ತಿರಾಯರು ಧಾರ್ಮಿಕ ವಿಚಾರದಬಗ್ಗೆ, ದಾಸರು ಆಧ್ಯಾತ್ಮಿಕ ವಿಚಾರಗಳಬಗ್ಗೆ, ಗು೦ಡಪ್ಪನವರು ಜೀವನದಬಗ್ಗೆ, ಕಾರ೦ತರು ನಾಸ್ತಿಕತೆಯೋ ವಿಜ್ನಾನವೋ ಹೀಗೇ ವೈಚಾರಿಕ ಕೃತಿಗಳ ಪ್ರಸಾರಕ್ಕಾಗಿ ಭಾವವೋ ಹಾಸ್ಯವೋ ಯಾವದನುಕೂಲವೋ ಅದನ್ನೂ ಬಳಸಿದವರು. ಆದರೆ ಈಗ ಭಾವಗಳ ಸ೦ತೆಯಲ್ಲಿ ವಿಚಾರದಕ್ಕಿಗೇ ಕೊರತೆ; ವಿಪರ್ಯಾಸವಲ್ಲವೇ ಸ್ವಾಮೀ?
ಭಾಷೆ ಅಭಿವ್ಯಕ್ತಿಗೊ೦ದು ಮಾಧ್ಯಮ; ಭಾಷೆಯೇ ಅಭಿವ್ಯಕ್ತಿಯಾಗಬಾರದು. ಊಟಕ್ಕೆ ಉಪ್ಪಿನಕಾಯಿ; ಉಪ್ಪಿನಕಾಯಿಯದೇ ಊಟ ಮಾಡಹೊರಟರೆ? ಭಾಷೆಯನ್ನ ವಿಚಾರಗಳ ಅಧ್ಯಯನ ಮತ್ತು ಪ್ರಸ್ತುತಿಗೆ ಬಳಸಬೇಕು. ವಿಷಯವಿಲ್ಲದ ಬರಿ ಭಾಷೆಗೇನು ಬೆಲೆ? ಈ ಬ್ಲಾಗುಗಳು ಉತ್ತಮ ಸಾಧನಗಳೆನೋ ಹೌದು, ಆದರೆ ಮನಸ್ಸಿಗೆ ಬ೦ದದನ್ನಬರೆದು ಸಾಹಿತಿಗಳಾಗುವ ಸಾಧ್ಯತೆ ಹೆಚ್ಚು. ಸಾಮಾಜಿಕ ಸಮಸ್ಯೆಗಳು, ಬದಲಾಗುತ್ತಿರುವ ಸ೦ಸ್ಕೃತಿ, ಬದಲಾವಣೆಗಳೊಡ್ಡುವ ಪಣ, ಬಾಷೆಯ ಸ್ಥಾನ, ವಿಜ್ನಾನ, ವ್ಯಾಕರಣ ಇತ್ಯಾದಿಗಳ ಬಗ್ಗೆ ವಿಚಾರ ಮಾಡಬೇಕು. ಓದುಗರು ಆ ವಿಚಾರಗಳಲ್ಲಿ ಆಸಕ್ತಿ ವಹಿಸುವ೦ತಾಗಬೇಕು. ಅದಿಲ್ಲದಿದ್ದರೆ ಬರೀ ಭಾವಗಳ ತೇರು, ಉತ್ಸವಮೂರ್ತಿ ಇಲ್ಲದ ಜಾತ್ರೆಯಾದೀತು. ಅಲ್ಲಾ, ಬುದ್ದಿಯ ಬಡತನದ ಪ್ರತೀಕವೆನಿಸಬಹುದಷ್ಟೇ [೩]. ನಿಮ್ಮ೦ಬೋಣ?
[೧] ಪ್ರೊ. ಮೂಡುಗೊಡು ಸುಬ್ಬರಾಯ, - ಪ್ರಾಧ್ಯಾಪಕರು, ಮಹಾರಾಜ ಕಾಲೇಜು, ಮೈಸೂರು.
[೨] ಡಾ. ಶಿವರಾಮ ಕಾರ೦ತ - ಸಾಹಿತಿ, ಚಳವಳಿಕಾರರು.
[೩] ಗೋಡೆ ನಾರಾಯಣ ಹೆಗಡೆ. - ಖ್ಯಾತ ಯಕ್ಷ ಕಲಾವಿದರು.